ಅಣ್ಣೂರು ಗ್ರಾಮ ಪಂಚಾಯ್ತಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನ ಪ್ರಶಸ್ತಿ ಪ್ರದಾನ

KannadaprabhaNewsNetwork |  
Published : Jun 25, 2025, 11:47 PM IST
25ಕೆಎಂಎನ್ ಡಿ15 | Kannada Prabha

ಸಾರಾಂಶ

ಗ್ರಾಪಂ ವ್ಯಾಪ್ತಿಯ ಅಧಿಕ ಅಂಕಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಕೆ.ಎಂ. ದೊಡ್ಡಿ

ಸರಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವುದು ಸೇರಿದಂತೆ ವಿನೂತನ ಕಾರ್ಯಕ್ರಮಗಳಿಂದ ಅಣ್ಣೂರು ಗ್ರಾಮ ಪಂಚಾಯಿತಿ ಇತಿಹಾಸದ ಪುಟ ಸೇರಿರುವುದು ಮದ್ದೂರು ತಾಲೂಕು ಹಾಗೂ ಜಿಲ್ಲೆಗೆ ಹೆಮ್ಮೆಯ ವಿಚಾರವಾಗಿದೆ ಎಂದು ಶಾಸಕ ಕೆ.ಎಂ.ಉದಯ್ ಹರ್ಷ ವ್ಯಕ್ತಪಡಿಸಿದರು.

ತಾಲೂಕಿನ ಅಣ್ಣೂರು ಸರಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಆಯೋಜಿಸಿದ್ದ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನ ಪ್ರಶಸ್ತಿ ಪ್ರದಾನ ಹಾಗೂ ಮಹಿಳಾ ಸ್ನೇಹಿ ಗ್ರಾಪಂ ಅಭಿಯಾನದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಗ್ರಾಪಂಗಳು ಪ್ರಶಸ್ತಿ- ಪುರಸ್ಕಾರಗಳಿಗೆ ಭಾಜನವಾಗುವುದು ಸುಲಭವಲ್ಲ. ಅನೇಕ ಮಾನದಂಡಗಳನ್ನು ಅಳವಡಿಸಿ ಪ್ರಶಸ್ತಿಗೆ ಆಯ್ಕೆ ಮಾಡುತ್ತಾರೆ. ಇದರಲ್ಲಿ ಯಾವ ರಾಜಕೀಯವೂ ನಡೆಯುವುದಿಲ್ಲ. ಇವೆಲ್ಲವನ್ನು ಮೀರಿ ಅಣ್ಣೂರು ಪಂಚಾಯಿತಿ ಭಾರತದ ಇತಿಹಾಸದ ಪುಟಗಳಲ್ಲಿ ದಾಖಲಾಗಿರುವುದು ನಿಜಕ್ಕೂ ಹೆಮ್ಮೆಯ ವಿಚಾರ ಎಂದರು.

ಅಣ್ಣೂರು ಗ್ರಾಪಂ ನನ್ನ ಶಾಸಕತ್ವದ ಅವಧಿಯಲ್ಲಿಯೇ ಈ ದಾಖಲೆಗೆ ಸೇರ್ಪಡೆಯಾಗಿರುವುದು ಹರ್ಷ ತಂದಿದೆ. ಅಭಿವೃದ್ಧಿ ಕೆಲಸಗಳು ನಿಗದಿತ ಸಮಯದೊಳಗೆ ಆಗಲು ಪಕ್ಷಾತೀತವಾಗಿ ಎಲ್ಲರ ಸಹಕಾರ ಅಗತ್ಯ. ಈ ಐತಿಹಾಸಿಕ ಸಾಧನೆ ಹಿಂದೆ ನಿಂತಿರುವ ಎಲ್ಲಾ ಮಹಿಳೆಯರು, ಅಧಿಕಾರಿಗಳು ಹಾಗೂ ಸ್ಥಳೀಯ ಜನತೆಗೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸುವೆ ಎಂದು ಹೇಳಿದರು. ಗ್ರಾಪಂ ನಿರ್ಣಯ ಕೈಗೊಂಡರೆ ಮುಂದಿನ ದಿನಗಳಲ್ಲಿ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿಸಲು ಕ್ರಮ‌ವಹಿಸಲಾಗುವುದು ಎಂದು ಭರವಸೆ ನೀಡಿದರು.

ದೇಶದಲ್ಲಿ ಸಾವಿರಾರು ಗ್ರಾಪಂ ಕಾರ್ಯ ನಿರ್ವಹಿಸುತ್ತಿವೆ. ಆದರೆ, ನಮ್ಮ ರಾಜ್ಯದ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನಿಂದ ಆಯ್ಕೆಯಾಗಿರುವುದು ಸಾಮಾನ್ಯ ವಿಷಯವಲ್ಲ. ಗ್ರಾಪಂ ಪಿಡಿಒ ವಿಶೇಷ ಕಾಳಜಿ, ಅಧ್ಯಕ್ಷರು ಹಾಗೂ ಸದಸ್ಯರ ಹೆಚ್ಚಿನ ಆಸಕ್ತಿಯಿಂದಾಗಿ ಅಣ್ಣೂರು, ಅಲಭುಜನಹಳ್ಳಿ ಹಾಗೂ ಕಾರಕಹಳ್ಳಿ ಗ್ರಾಮದ ಮಹಿಳೆಯರು ಬೆಂಬಲ ಸೂಚಿಸಿ ಒಗ್ಗಟ್ಟಿನಿಂದ ರಂಗೋಲಿ ಬಿಡಿಸಿದ ಪರಿಣಾಮ ಇಂತಹ ಅಭೂತಪೂರ್ವ ದಾಖಲೆ ನಿರ್ಮಿಸಲು ಸಾಧ್ಯವಾಯಿತು ಎಂದರು.

ನಂತರ ಇಂಡಿಯಾ ಬುಕ್ ಆಫ್ ರೆಕಾರ್ಡ್ ನ ತೀರ್ಪುಗಾರ ಡಾ. ಹರೀಶ್ ಮಾತನಾಡಿ, ಅಣ್ಣೂರು ಗ್ರಾಮದ ಮಹಿಳೆಯರು ಹೊಸ ಇತಿಹಾಸವನ್ನು ಸೃಷ್ಟಿಸಿದ್ದು, ಮಹಿಳೆಯರ ಈ ಸಾಧನೆಯನ್ನು ಇಡೀ ಭಾರತವೇ ತಿರುಗಿ ನೋಡುತ್ತಿದೆ. ದೇಶವು ವಿವಿಧತೆಯಲ್ಲಿ ವೈಶಿಷ್ಟ್ಯತೆ ಬಿಂಬಿಸುವ ಕಲೆಗಳನ್ನು ಹೊಂದಿದ್ದು, ಅದರಲ್ಲಿ ಭಾರತೀಯ ಸಂಪ್ರದಾಯದ ಪ್ರತೀಕವಾದ ರಂಗೋಲಿ ಬಿಡಿಸುವ ಸಾಂಪ್ರದಾಯಿಕ ಕಲೆಗೆ ಅಣ್ಣೂರು ಗ್ರಾಪಂ ವ್ಯಾಪ್ತಿಯ ಮಹಿಳೆಯರು ಒಂದು ಹೊಸ ಮೌಲ್ಯ ದೊರಕುವಂತೆ ಮಾಡಿದ್ದಾರೆ ಎಂದು ತಿಳಿಸಿದರು.

ಗ್ರಾಮದ ಮಹಿಳೆಯರು ಪೌಷ್ಟಿಕ ಆಹಾರ ಮೇಳವನ್ನು ಆಯೋಜಿಸಿ ವಿವಿಧ ಬಗೆಯ ತಿಂಡಿ- ತಿನಿಸುಗಳ ತಯಾರಿಸಿ ಕಾರ್ಯಕ್ರಮಕ್ಕೆ ಮೆರಗು ತಂದರು. ಸುಮಾರು 20ಕ್ಕೂ ಹೆಚ್ಚು ಮಹಿಳೆಯರಿಗೆ ಯೋಗ ತರಬೇತಿ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು. ಗ್ರಾಪಂ ವ್ಯಾಪ್ತಿಯ ಅಧಿಕ ಅಂಕಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಇದೇ ವೇಳೆ ಕೆ.ಎಂ.ಉದಯ್, ಇಂಡಿಯಾ ಬುಕ್ ಅಪ್ ರೆಕಾರ್ಡ್ ತೀರ್ಪುಗಾರ ಡಾ.ಹರೀಶ್ ಹಾಗೂ ಗ್ರಾಪಂ ಸಂಪನ್ಮೂಲ ವ್ಯಕ್ತಿ ನ.ಲಿ. ಕೃಷ್ಣ, ಗ್ರಾಮಕ್ಕೆ ನೀರು ನೀಡಿದ ಆಸರೆ ಸೇವಾ ಟ್ರಸ್ಟ್‌ ಅಧ್ಯಕ್ಷ ರಘುವೆಂಕಟೇಗೌಡ ಅವರನ್ನು ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಭಾರತೀನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಎಸ್. ರಾಜೀವ್, ಮನ್ಮುಲ್ ನಿರ್ದೇಶಕ ಹರೀಶ್ ಬಾಬು , ಡಿಸಿಸಿ ಬ್ಯಾಂಕ್ ನಿರ್ದೇಶಕ ಸಂದರ್ಶ, ಇಒ ರಾಮಲಿಂಗಯ್ಯ, ಮಂಡ್ಯ ಜಿಲ್ಲಾ ಸ್ತ್ರೀ ರೋಗ ಮತ್ತು ಪ್ರಸೂತಿ ವೈದ್ಯರ ಸಂಘದ ಅಧ್ಯಕ್ಷ ಡಾ.ಮನೋಹರ್, ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅರುಣ್ ಕುಮಾರ್, ಗ್ರಾಪಂ ಅಧ್ಯಕ್ಷೆ ಅಶ್ವಿನಿ ಆನಂದ್, ಉಪಾಧ್ಯಕ್ಷ ನಾಗರಾಜ್, ಪಿಡಿಒ ಅಶ್ವಿನಿ ಸೇರಿದಂತೆ ಸದಸ್ಯರು ಉಪಸ್ಥಿತರಿದ್ದರು.

PREV

Recommended Stories

ರಾಜ್ಯದಲ್ಲಿ 5 - 6 ದಿನ ಮಳೆ ಇಳಿಮುಖ : 26ರಿಂದ ಮತ್ತೆ ಮಳೆ
ಎಮ್ಮೆ ಕೊಡಿಸುವುದಾಗಿ ಪ್ರೇಮ್‌ಗೆ ವಂಚನೆ : ₹4.75 ಲಕ್ಷ ಮೋಸ