ಕನ್ನಡಪ್ರಭ ವಾರ್ತೆ ಮಡಿಕೇರಿ
ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರನ್ನು ಅವರ ನಿವಾಸದಲ್ಲಿ ಶುಕ್ರವಾರ ಭೇಟಿ ಮಾಡಿದರು.ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹಾಗಾರರಾದ ಎ.ಎಸ್ ಪೊನ್ನಣ್ಣ ಅವರ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಸರ್ಕಾರವು, ಬೆಂಗಳೂರು ಕೊಡವ ಸಮಾಜಕ್ಕೆ ಮಾಡಿಕೊಟ್ಟ ಹಲವು ಅನುಕೂಲಗಳ ಬಗ್ಗೆ ಅಭಿನಂದನಾ ಪೂರ್ವಕವಾಗಿ ಧನ್ಯವಾದಗಳು ಅರ್ಪಿಸಿದರು.ಇದೇ ಸಂದರ್ಭದಲ್ಲಿ, ಬೆಂಗಳೂರು ಕೊಡವ ಸಮಾಜದ ಪ್ರಮುಖರು ಮುಖ್ಯಮಂತ್ರಿಗಳಲ್ಲಿ, ಎ.ಎಸ್ ಪೊನ್ನಣ್ಣರವರನ್ನು ಸಚಿವ ಸಂಪುಟಕ್ಕೆ ಸೇರ್ಪಡೆಗೊಳಿಸಿ ಪ್ರಮುಖ ಖಾತೆಯನ್ನು ನೀಡುವಂತೆ ಸಮಾಜವು ಸರ್ವಾನುಮತದಿಂದ ಕೈಗೊಂಡ ನಿರ್ಣಯ ದೊಂದಿಗೆ ಮನವಿ ಪತ್ರವನ್ನೂ ಸಲ್ಲಿಸಿದರು.ಮುಖ್ಯಮಂತ್ರಿಗಳನ್ನು ಉದ್ದೇಶಿಸಿ, ಸೂಕ್ಷ್ಮ ಅಲ್ಪಸಂಖ್ಯಾತ ಜನಸಂಖ್ಯೆಯಾದ ಕೊಡವ ಜನಾಂಗದ ಪ್ರಮುಖ ಹಾಗೂ ಬಲಿಷ್ಠ ಪ್ರತಿನಿಧಿಯಾಗಿರುವ ಎ.ಎಸ್ ಪೊನ್ನಣ್ಣ ರವರು ಈಗಾಗಲೇ ಮುಖ್ಯಮಂತ್ರಿಗಳ ಕಾನೂನು ಸಲಹಾ ಗಾರರಾಗಿ ನಾಡಿನಾದ್ಯಂತ ಹೆಸರು ಮಾಡಿದ್ದು, ಅವರು ಅರ್ಹವಾಗಿ ಸಚಿವ ಸ್ಥಾನಕ್ಕೆ ಯೋಗ್ಯರು ಎಂಬ ಮನವಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿದರು. ಭಾಷಿಕ ಅಲ್ಪಸಂಖ್ಯಾತರೂ ಆಗಿರುವ ಕೊಡವ ಜನಾಂಗದವರು ಶತಮಾನಗಳಿಂದ ಕ್ರೀಡೆ, ಸೈನ್ಯ ಹಾಗೂ ಇನ್ನಿತರ ಪ್ರಮುಖ ಕ್ಷೇತ್ರಗಳಲ್ಲಿ ಉತ್ತಮ ಸಾಧನೆಯನ್ನು ಮಾಡುತ್ತಾ ಬಂದಿದ್ದು, ತಮ್ಮ ಸಮುದಾಯದ ಪ್ರತಿನಿಧಿಯಾಗಿರುವ ಪೊನ್ನಣ್ಣರವರಿಗೆ ಪ್ರಮುಖ ಖಾತೆಯನ್ನು ನೀಡಿ ಸಚಿವರನ್ನಾಗಿಸಿ ತಮ್ಮ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕೆಂದು ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.ಈ ಸಂದರ್ಭ ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಕರವಟ್ಟಿರ ಟಿ. ಪೆಮ್ಮಯ್ಯ, ಉಪಾಧ್ಯಕ್ಷೆ ಪಾಂಡಂಡ ಕಮಲ ಮುತ್ತಪ್ಪ, ಗೌರವ ಕಾರ್ಯದರ್ಶಿ ಲೆ. ಕರ್ನಲ್ ಚಿರಿಯಪಂಡ ವಿವೇಕ್ ಮುತ್ತಣ್ಣ, ಸಹ ಕಾರ್ಯದರ್ಶಿ ಬೊಪ್ಪಂಡ ಟಿ. ಮಹೇಶ್, ಖಜಾಂಚಿ ಬಲ್ಯಮೀದೇರಿರ ಬಿ. ಗಣೇಶ್, ಸಹ ಖಜಾಂಚಿ ಪೊನ್ನಚೆಟ್ಟಿರ ಕೆ. ಗಣಪತಿ ಮತ್ತಿತರರು ನಿಯೋಗದಲ್ಲಿದ್ದರು.