ಕನ್ನಡಪ್ರಭ ವಾರ್ತೆ ಮಡಿಕಕೇರಿ
ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಮೇರಿಯಂಡ ಸಂಕೇತ್ ಪೂವಯ್ಯ ಅವರು ಮೇಲ್ವಿಚಾರಣೆಯಲ್ಲಿ ಶನಿವಾರ ಕಾರ್ಯಾಚರಣೆ ಆರಂಭವಾಗಿದ್ದು, ಕಾರ್ಯಾಚರಣೆ ವೇಳೆ ಹುಲಿಯ ಹೆಜ್ಜೆ ಗುರುತು ಪತ್ತೆಯಾಗಿದೆ. ಹುಲಿ ಕಂಡಿರುವ ಬಗ್ಗೆ ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.
60 ಸಿಬ್ಬಂದಿ ಕಾರ್ಯಾಚರಣೆ: ಸ್ಥಳದಲ್ಲಿ ಈಗಾಗಲೇ ಅರಣ್ಯ ಇಲಾಖೆಯ ಕ್ಷಿಪ್ರ ಕಾರ್ಯಪಡೆ (ಆರ್. ಆರ್. ಎಫ್) ಕಾಡಾನೆ ಕಾರ್ಯಪಡೆ (ಇ. ಟಿ. ಎಫ್ )ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಸೇರಿ ಸುಮಾರು 60 ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.ಮೊದಲ ಹಂತದ ಕಾರ್ಯಾಚರಣೆಯಲ್ಲಿ ಹುಲಿಯ ಇರುವುವಿಕೆಯನ್ನು ಪತ್ತೆ ಹಚ್ಚುವುದಕ್ಕಾಗಿ ಹುಲಿಯ ಹೆಜ್ಜೆ ಗುರುತಿನ ಜಾಡನ್ನು ಹಿಡಿಯಲು ಸಿಬ್ಬಂದಿ ಪ್ರಯತ್ನಿಸುತ್ತಿದ್ದಾರೆ. ಸ್ಥಳೀಯ ಕಾರ್ಮಿಕರು ಎರಡು ದಿನಗಳ ಹಿಂದೆ ಒಂದು ದೊಡ್ಡ ಹುಲಿ ಹಾಗೂ ಅದರೊಂದಿಗೆ ಮೂರು ಮರಿಗಳು ಇರುವುದನ್ನು ಪ್ರತ್ಯಕ್ಷವಾಗಿ ಕಂಡಿರುವುದಾಗಿ ಕಾರ್ಯಾಚರಣೆ ತಂಡಕ್ಕೆ ನೇರವಾಗಿ ಮಾಹಿತಿ ನೀಡಿದರು.
ಈಗಾಗಲೇ ಸ್ಥಳಕ್ಕೆ ದುಬಾರೆ ಸಾಕಾನೆ ಸಿಬಿರದಿಂದ ಶ್ರೀರಾಮ ಹಾಗೂ ಗೋಪಿ ಎಂಬ ಎರಡು ಕಾಡಾನೆಗಳನ್ನು ಕರೆತರಲಾಗಿದೆ. ಹುಲಿಯ ಹೆಜ್ಜೆ ಗುರುತು ಆಧರಿಸಿ ಹುಲಿ ಇರುವಿಕೆ ಖಚಿತ ಪಡಿಸಿಕೊಂಡ ನಂತರ ಸಾಕಾನೆಗಳನ್ನು ಬಳಸಿ ಪಶು ವೈದ್ಯಾಧಿಕಾರಿಗಳ ನೆರವಿನಿಂದ ಅರವಳಿಕೆ ಮೂಲಕ ಹುಲಿ ಸೆರೆಗೆ ಕಾರ್ಯಾಚರಣೆ ನಿರ್ಧರಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಭಾಗವಹಿಸಿರುವ ಮಡಿಕೇರಿ ಇಲಾಖೆಯ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ನೆಹರು ಅವರು ಮಾತನಾಡಿ, ಕಳೆದ 15 ದಿನಗಳಿಂದ ಶ್ರೀಮಂಗಲ, ಬಿರುನಾಣಿ, ಟಿ. ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಸಾಕು ಪ್ರಾಣಿಗಳ ಮೇಲೆ ಹುಲಿ ನಿರಂತರವಾಗಿ ದಾಳಿ ನಡೆಸುತ್ತಿದೆ. ದುಬಾರೆ ಸಾಕಾನೆ ಶಿಬಿರದಿಂದ ಎರಡು ಸಾಕಾನೆಗಳನ್ನು ಬಳಸಿಕೊಳ್ಳಲಾಗಿದೆ. ಡಾ.ಚಿಟ್ಯಪ್ಪ, ಡಾ. ರಮೇಶ್, ಶಾರ್ಪ್ ಶೂಟರ್ ರಂಜನ್ ಸೇರಿ 60 ಮಂದಿ ಸಿಬ್ಬಂದಿ ಗಳನ್ನು ಕಾರ್ಯಾಚರಣೆಗೆ ಬಳಸಿಕೊಳ್ಳಲಾಗಿದೆ. ಈ ಹಿಂದೆ ಹುಲಿಯ ಚಹರೆ ಪತ್ತೆಯಾಗಿದ್ದು, ಇದಲ್ಲದೆ ತೆರಾಲು ಭಾಗದಲ್ಲಿ ದಾಳಿ ನಡೆಸುತ್ತಿದ್ದ ಹುಲಿ ಸಹ ಗುರುತು ಪತ್ತೆಯಾಗಿದೆ. ಈ ಹುಲಿಗಳನ್ನು ಸೆರೆ ಹಿಡಿಯಲು ಅನುಮತಿ ದೊರೆತಿದೆ. ಒಂದು ವೇಳೆ ಗಾಯವಾಗಿ ಗ್ರಾಮದಲ್ಲಿ ಹುಲಿ ಸುತ್ತುತ್ತಿದೆಯೇ ಎಂಬ ಬಗ್ಗೆ ಕಾರ್ಯಾಚರಣೆ ವೇಳೆ ಗೊತ್ತಾಗಲಿದೆ ಹಾಗೂ ಇದು ಯಾವ ಹುಲಿ ಎಂಬುದು ಸಹ ಕಾರ್ಯಾಚರಣೆಯಲ್ಲಿ ಗೊತ್ತಾಗಲಿದೆ ಎಂದು ತಿಳಿಸಿದರು.