ಕನ್ನಡಪ್ರಭ ವಾರ್ತೆ ಹಾಸನ
ದುರಸ್ತಿ, ಹಕ್ಕು ಪತ್ರ, ಸಾಗುವಳಿ ಚೀಟಿ, ಆರ್.ಟಿ.ಸಿ. ತಿದ್ದುಪಡಿ, ಒತ್ತುವರಿ ತೆರವುಗೊಳಿಸಲು, ಜಮೀನಿಗೆ ಓಡಾಡಲು ರಸ್ತೆ, ಪೋಡಿ ದುರಸ್ತಿ, ಬಸ್ ಸೌಲಭ್ಯ, ಚೆಕ್ ಬಂದಿ ತಿದ್ದುಪಡಿ, ನಿವೇಶನ ಹಂಚಿಕೆ, ಭೂ ಪರಿಹಾರ ಕುರಿತಂತೆ ಮನವಿ ಅರ್ಜಿಗಳನ್ನು ಸ್ವೀಕರಿಸಿ, ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ಸಂಬಂದಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಲತಾಕುಮಾರಿ ಅವರು ಸೂಚಿಸಿದ್ದಾರೆ.ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶನಿವಾರ ಜನಸ್ಪಂದನ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಅರ್ಜಿ ಸ್ವೀಕರಿಸಿ ಮಾತನಾಡಿದ ಅವರು, ಜುಲೈ ತಿಂಗಳಲ್ಲಿ ಸ್ವೀಕೃತಗೊಂಡಿದ್ದ ಅರ್ಜಿಗಳಲ್ಲಿ ೨೦ ಅರ್ಜಿಗಳು ವಿಲೇವಾರಿಗೆ ಬಾಕಿ ಇದ್ದು, ಇವುಗಳನ್ನು ಶೀಘ್ರವಾಗಿ ವಿಲೇವಾರಿ ಮಾಡುವಂತೆ ಸೂಚಿಸಿದರಲ್ಲದೆ, ಇಂದು ಸ್ವೀಕೃತಗೊಂಡಿರುವ ಒಟ್ಟು ೧೭೪ ಅರ್ಜಿಗಳನ್ನು ಮುಂದಿನ ಜನಸ್ಪಂದನ ಕಾರ್ಯಕ್ರಮದೊಳಗೆ ವಿಲೇವಾರಿ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.ಕಾರ್ಮಿಕ ಇಲಾಖೆ ಪ್ರತಿ ಮಂಗಳವಾರ ಕಾರ್ಮಿಕರಿಗೆ ಇ-ಶ್ರಮ್ ಕಾರ್ಡ್ ವಿತರಣೆ ಮಾಡಿ ಪ್ರತಿವಾರ ವರದಿ ನೀಡುವಂತೆ ನಿರ್ದೇಶನ ನೀಡಿದರು. ಇವರೊಂದಿಗೆ ಲೀಡ್ ಬ್ಯಾಂಕ್ ಅವರು ಸೇರಿಕೊಂಡು ಅಟಲ್ ಪೆನ್ಷನ್ ಯೋಜನೆ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಪ್ರತಿ ಮಂಗಳವಾರ ಬೆಳಗ್ಗೆ ೬-೧೦ ಗಂಟೆಯವರೆಗೆ ಕಾರ್ಮಿಕರ ಆರೋಗ್ಯ ತಪಾಸಣೆಗೆ ಕ್ರಮವಹಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅವರಿಗೆ ಸೂಚಿಸಿದರಲ್ಲದೆ, ಪ್ರತಿವಾರ ಒಂದು ಗ್ರಾಮಕ್ಕೆ ಭೇಟಿ ನೀಡುವುದಕ್ಕೆ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ನಿರಂತರ ಜ್ಯೋತಿ ಯೋಜನೆಯಡಿ ಒಂಟಿ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಮನವಿ ಬಂದ ಹಿನ್ನೆಲೆಯಲ್ಲಿ ಕ್ರಮವಹಿಸುವಂತೆ ಚೆಸ್ಕಾಂ ಅಧಿಕಾರಿಗಳಿಗೆ ತಿಳಿಸಿದರು.ಅರಕಲಗೂಡು ತಾಲ್ಲೂಕಿನ ರಾಜ್ಯ ಹೆದ್ದಾರಿ ೮೫ರಲ್ಲಿ ೧೫೦ ಮೀಟರ್ ಬಾಕಿ ಉಳಿದಿರುವ ಕಾಮಾಗಾರಿ ಪೂರ್ಣಗೊಳಿಸಬೇಕು, ಜೊತೆಗೆ ರಸ್ತೆ ಅಭಿವೃದ್ಧಿ ಸಮಯದಲ್ಲಿ ತೆರವು ಗೊಳಿಸಿರುವ ಬಸ್ ನಿಲ್ದಾಣವನ್ನು ಪುನಃ ಸಾರ್ವಜನಿಕರ ಅನುಕೂಲಕ್ಕಾಗಿ ಮರು ನಿರ್ಮಾಣಕ್ಕೆ ಮನವಿ ಮಾಡಿದರು. ಹಾಸನ ನಗರದಲ್ಲಿ ಏಳು ಶೌಚಾಲಯಗಳಿದ್ದು, ಸಾರ್ವಜನಿಕರಿಗೆ ಬಳಕೆ ಆಗುತ್ತಿಲ್ಲ. ಮಹಾರಾಜ ಪಾರ್ಕ್ ಮತ್ತು ಸಂತೆ ಪೇಟೆಯಲ್ಲಿ ಇರುವ ಶೌಚಾಲಯಗಳು ಮಾತ್ರ ಬಳಕೆ ಆಗುತ್ತಿವೆ. ಜಿಲ್ಲಾ ಕ್ರೀಡಾಂಗಣದಲ್ಲಿರುವ ಶೌಚಾಲಯ ಸಾರ್ವಜನಿಕರಿಗೆ ಬಳಕೆ ಆಗುತ್ತಿಲ್ಲ ಎಂದು ಸಾರ್ವಜನಿಕರು ಮನವಿ ಮಾಡಿದ ಹಿನ್ನೆಲೆಯಲ್ಲಿ ಇವುಗಳ ನಿರ್ವಹಣೆಯನ್ನು ಮೇಲುಸ್ತುವಾರಿ ಮಾಡಲು ತಲಾ ಒಬ್ಬರು ಅಧಿಕಾರಿಗಳನ್ನು ನೇಮಕ ಮಾಡುವಂತೆ ಮಹಾ ನಗರ ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಿದರು. ಜಿಲ್ಲಾ ಕೋರ್ಟ್ ಆವರಣದಲ್ಲಿ ಸಾರ್ವಜನಿಕರ ಬಳಕೆಗೆ ಒಂದು ಶೌಚಾಲಯ ನಿರ್ಮಾಣಕ್ಕೆ ಮನವಿ ಮಾಡಿದರು. ಈ ನಿಟ್ಟಿನಲ್ಲಿ ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರರಿಗೆ ಕ್ರಮವಹಿಸುವಂತೆ ತಿಳಿಸಿದರಲ್ಲದೆ ಮುಂದಿನ ಮಂಗಳವಾರ ನಗರ ವೀಕ್ಷಣೆ ಸಂದರ್ಭದಲ್ಲಿ ಏಳು ಶೌಚಾಲಯಗಳನ್ನು ಪರಿಶೀಲನೆ ಮಾಡಲಾಗುವುದು ಎಂದು ತಿಳಿಸಿದರು.ಬಿ.ಕಾಟೀಹಳ್ಳಿಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಮಿಲಿಟರಿ ಕುಟುಂಬಗಳು ವಾಸವಿದ್ದು, ಉದ್ಯಾನವನಕ್ಕೆ ಮೀಸಲಿಟ್ಟಿರುವ ಒಂದು ಎಕರೆ ಜಾಗವನ್ನು ಉಳಿಸಿ ಅಭಿವೃದ್ಧಿಪಡಿಸುವಂತೆ ಮನವಿ ಮಾಡಿದರು. ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಮಹಾನಗರ ಪಾಲಿಕೆ ಆಯುಕ್ತರು ಭೇಟಿ ನೀಡಿ ವರದಿ ನೀಡುವಂತೆ ಸೂಚಿಸಿದರು.
ಸಾರ್ವಜನಿಕರು ಪದಾರ್ಥಗಳ ಖರೀದಿಗೆ ಮಾರುಕಟ್ಟೆ ಮತ್ತು ಸಂತೆಗಳಿಗೆ ಹೋಗುವ ಸಂದರ್ಭದಲ್ಲಿ ಬಟ್ಟೆ, ಕೈಚೀಲ ತೆಗೆದುಕೊಂಡು ಹೋಗುವಂತೆ ಜನರಲ್ಲಿ ಜಾಗೃತಿ ಮೂಡಿಸುವಂತೆ ಸೂಚಿಸಿದರಲ್ಲದೆ, ಪ್ಲಾಸ್ಟಿಕ್ ಬಳಕೆ ಮಾಡದಂತೆ ಎಚ್ಚರಿಕೆವಹಿಸಿ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ಅಂಗನವಾಡಿ ಸಹಾಯಕಿಯರು ಹಾಗೂ ಕಾರ್ಯಕರ್ತೆಯರ ಆಯ್ಕೆಗೆ ಸಂಬಂಧಿಸಿದಂತೆ ಬಂದಿರುವ ಆಕ್ಷೇಪಗಳನ್ನು ಸರಿಯಾಗಿ ಪರಿಶೀಲಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ದೇವಾಲಯದ ಬಳಿ ಶೌಚಾಲಯ ಕಡ್ಡಾಯವಾಗಿ ಇರಬೇಕು ಜೊತೆಗೆ ಉತ್ತಮವಾಗಿ ನಿರ್ವಹಣೆ ಆಗುವಂತೆ ತಹಸೀಲ್ದಾರ್‌ಗಳು ನಿಗಾವಹಿಸಬೇಕು ಎಂದರು.
ಸ್ಮಶಾನದ ಜಾಗವನ್ನು ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಎಲ್ಲಾ ತಹಸೀಲ್ದಾರ್‌ಗಳು ಆಂದೋಲನದ ರೀತಿಯಲ್ಲಿ ಒತ್ತುವರಿ ಆಗದಂತೆ ಬೇಲಿ ನಿರ್ಮಿಸಿ ಗೇಟ್ ಅಳವಡಿಸಿ ಜೊತೆಗೆ ಬೊರವೇಲ್ ಕೊರೆಸಿ, ಮುಖ್ಯವಾಗಿ ರಸ್ತೆಸಂಪರ್ಕ ಕಲ್ಪಿಸಿ ಎಂದು ತಿಳಿಸಿದರು.ಸ್ಮಶಾನ ಜಾಗದ ಸುತ್ತ ಹಣ್ಣಿನ ಗಿಡಮರಗಳನ್ನು ನೆಟ್ಟು ಬೆಳೆಸಿ ಮುಂದಿನ ದಿನಗಳಲ್ಲಿ ಜೈವಿಕ ಬೇಲಿ ನಿರ್ಮಾಣವಾಗುತ್ತದೆ ಎಂದು ತಿಳಿಸಿದರಲ್ಲದೆ, ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕ್ರಮವಹಿಸುವಂತೆ ಸೂಚಿಸಿದರು.
ಮಾದಿಹಳ್ಳಿಯ ದೊಡ್ಡ ಬೆಟ್ಟದ ಬಳಿಯಲ್ಲಿ ಎರೆಡು ಆನೆಗಳು ಪ್ರತಿನಿತ್ಯ ಸಂಚಾರ ಮಾಡುತ್ತಿವೆ, ಇದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಅರಣ್ಯ ಇಲಾಖೆಯಿಂದ ೧೨ ಎಕರೆಯಲ್ಲಿ ಬೇಲಿ ನಿರ್ಮಾಣ ಮಾಡಿದ್ದಾರೆ ಅದಕ್ಕೆ ಗೇಟ್ ಅಳವಡಿಸುವಂತೆ ಮನವಿ ಮಾಡಿದರು.ಅಂಗನವಾಡಿ ಮಕ್ಕಳಿಗೆ ನೀಡುವ ಆಹಾರದ ೨೦ ಪ್ಯಾಕ್‌ಗಳನ್ನು ಕೆರೆಯ ದಡದಲ್ಲಿ ಹಾಕಿರುತ್ತಾರೆ. ಆ ಪ್ಯಾಕ್ ಮೇಲೆ ತಯಾರಾದ ಮತ್ತು ಬಳಕೆ ಮಾಡುವ ಕೊನೆಯ ದಿನಾಂಕ ನಮೂದಿಸಿರುವುದಿಲ್ಲ ಎಂಬ ದೂರು ಅರ್ಜಿ ಬಂದ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಿಗೆ ಪರಿಶೀಲಿಸಿ ವರದಿ ನೀಡುವಂತೆ ಸೂಚಿಸಿದರು.
ರವೀಂದ್ರ ನಗರದಲ್ಲಿರುವ ಹನುಮ್ಮಮ್ಮ ಶಾಲೆ ಮತ್ತು ಆಡುವಳಿಯಲ್ಲಿರುವ ಪ್ರೌಢ ಶಾಲೆಯ ದುರಸ್ತಿಗೆ ಸಂಬಂಧಪಟ್ಟಂತೆ ಮತ್ತು ಶಾಲಾ ಆವರಣದಲ್ಲಿರುವ ಹಳೇಯ ಮರಗಳನ್ನು ತೆರವು ಗೊಳಿಸುವಂತೆ ಮನವಿ ಮಾಡಿದರು. ಈ ನಿಟ್ಟಿನಲ್ಲಿ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ತಕ್ಷಣ ಭೇಟಿ ನೀಡಿ ಪರಿಶೀಲನೆ ಮಾಡಿ ವರದಿ ನೀಡುವಂತೆ ಸೂಚಿಸಿದರು.ಕರ್ನಾಟಕ ಬ್ಯಾಂಕ್‌ನವರು ರೈತರಿಗೆ ನೀಡಿರುವ ಸಾಲ ತಿರುವಳಿಯಲ್ಲಿ ಎಸ್.ಬಿ.ಐ. ಮತ್ತು ಕೆನರಾ ಬ್ಯಾಂಕ್‌ನಲ್ಲಿ ಸಾಲ ವಸೂಲಾತಿಯಲ್ಲಿ ಅನುಸರಿಸುವ ನಿಯಮಗಳನ್ನು ಪಾಲಿಸಬೇಕು ಎಂದು ಮನವಿ ಬಂದ ಹಿನ್ನೆಲೆಯಲ್ಲಿ ಸಭೆ ಕರೆಯುವಂತೆ ಲೀಡ್ ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದರು.ಪರಿಸರ ಸ್ನೇಹಿ ಮೂರ್ತಿಗಳ ಬಳಕೆ ಕ್ರಮ ವಹಿಸಿ:
ಗೌರಿ-ಗಣೇಶ ಹಬ್ಬಗಳ ಸಂದರ್ಭದಲ್ಲಿ ಪರಿಸರ ಹಾಳು ಮಾಡದಂತೆ ತಡೆಯುವ ನಿಟ್ಟಿನಲ್ಲಿ ಸಾರ್ವಜನಿಕರು ಪರಿಸರ ಸ್ನೇಹಿ ಮೂರ್ತಿಗಳನ್ನು ಪೂಜೆಗೆ ಬಳಕೆ ಮಾಡುವಂತೆ ಕ್ರಮವಹಿಸಲು ಜಿಲ್ಲಾಧಿಕಾರಿ ಲತಾ ಕುಮಾರಿ ಅವರು ಅಧಿಕಾರಿಗಳಿಗೆ ತಿಳಿಸಿದ್ದಾರೆ. ನಗರಕ್ಕೆ ಪಿಒಪಿ ಮೂರ್ತಿಗಳು ಪ್ರವೇಶವಾಗದಂತೆ ತಡೆಯುವಂತೆ ನಿರ್ದೇಶನ ನೀಡಿದರಲ್ಲದೆ, ಪರಿಸರ ಸ್ನೇಹಿ ಮೂರ್ತಿಗಳನ್ನು ಮಾತ್ರ ಮಾರಾಟ ಮಾಡಲು ಅವಕಾಶ ಕಲ್ಪಿಸಿ, ರಾಸಾಯನಿಕ ಪದಾರ್ಥಗಳನ್ನು ಬಳಸಿ ತಯಾರಿಸಿದ ಮೂರ್ತಿಗಳನ್ನು ಮಾರಾಟವಾಗದಂತೆ ತಡೆಯುವುದರ ಜೊತೆಗೆ ಎಲ್ಲಿಯಾದರೂ ಕಂಡು ಬಂದಲ್ಲಿ ಜಪ್ತಿ ಮಾಡಿ ಕ್ರಮಬದ್ಧವಾಗಿ ವಿಲೇವಾರಿ ಮಾಡುವಂತೆ ಸೂಚಿಸಿದರು. ನೈಸರ್ಗಿಕ ಬಣ್ಣಗಳನ್ನು ಬಳಸಿ ತಯಾರಿಸುವ ಮೂರ್ತಿಗಳನ್ನು ಮಾತ್ರ ಬಳಕೆ ಮಾಡುವಂತೆ ಸಾರ್ವಜನಿಕರಲ್ಲಿ ತಿಳಿವಳಿಕೆ ನೀಡುವಂತೆ ಸೂಚಿಸಿದರು.ಅಪರ ಜಿಲ್ಲಾಧಿಕಾರಿ ಮಂಜುನಾಥ್, ಉಪ ವಿಭಾಗಾಧಿಕಾರಿಗಳಾದ ಮಾರುತಿ, ರಾಜೇಶ್, ಮತ್ತಿತರ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.