ಹಿಂದುಳಿದ ಪ್ರತಿ ಸಮುದಾಯಕ್ಕೂ ನಿಗಮ ಸ್ಥಾಪಿಸಿ

KannadaprabhaNewsNetwork | Published : Feb 19, 2024 1:32 AM

ಸಾರಾಂಶ

ಸರ್ಕಾರ ಈಗ ಅನೇಕ ಸಮುದಾಯಗಳಿಗೆ ನಿಗಮ ಮಾಡಿದೆ ಅದರ ಜತೆಯಲ್ಲೇ ಹಲವಾರು ಜಾತಿಗಳನ್ನು ಕೈಬಿಟ್ಟಿದ್ದು, ತಾರತಮ್ಯ ಎಸಗಿದೆ, ಎಲ್ಲಾ ಹಿಂದುಳಿದ ಜಾತಿಗಳಿಗೂ ನಿಗಮ ಮಾಡಿ ಆಗಿರುವ ಅನ್ಯಾಯ ಸರಿಪಡಿಸುವ ಕೆಲಸ ಮಾಡಲಿ

ಕನ್ನಡಪ್ರಭ ವಾರ್ತೆ ಕೋಲಾರ

ಸಮಾಜದಲ್ಲಿನ ಎಲ್ಲ ಹಿಂದುಳಿದ ಸಮುದಾಯಗಳಿಗೂ ಒಂದೊಂದು ನಿಗಮ ಮಾಡಿ ಸರ್ಕಾರದಿಂದ ಆಗಿರುವ ತಾರತಮ್ಯ ಸರಿಪಡಿಸಿ, ಅದು ಸಾಧ್ಯವಾಗದಿದ್ದಲ್ಲಿ ದೇವರಾಜ ಅರಸು ಅಭಿವೃದ್ದಿ ನಿಗಮಕ್ಕೆ ಐದು ಸಾವಿರ ಕೋಟಿ ಅನುದಾನ ನೀಡಿ ಅದರಡಿ ಎಲ್ಲಾ ಹಿಂದುಳಿದ ವರ್ಗಗಳ ವೃತ್ತಿಗಳಿಗೂ ಅವಕಾಶ ಕಲ್ಪಿಸಿ ಎಂದು ಸರ್ಕಾರವನ್ನು ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಒತ್ತಾಯಿಸಿದರು.

ನಗರದ ಜ್ಯೋತಿ ಎಜುಕೇಷನಲ್ ಟ್ರಸ್ಟ್‌ನ ಜನೋಪಕಾರಿ ದೊಡ್ಡಣ್ಣಸ್ವಾಮಿ ರಂಗಮಂದಿರಲ್ಲಿ ನಡೆದ ಗಾಣಿಗ ಹಾಗೂ ಇತರೆ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಸರ್ಕಾರ ಈಗ ಅನೇಕ ಸಮುದಾಯಗಳಿಗೆ ನಿಗಮ ಮಾಡಿದೆ ಅದರ ಜತೆಯಲ್ಲೇ ಹಲವಾರು ಜಾತಿಗಳನ್ನು ಕೈಬಿಟ್ಟಿದ್ದು, ತಾರತಮ್ಯ ಎಸಗಿದೆ, ಎಲ್ಲಾ ಹಿಂದುಳಿದ ಜಾತಿಗಳಿಗೂ ನಿಗಮ ಮಾಡಿ ಆಗಿರುವ ಅನ್ಯಾಯ ಸರಿಪಡಿಸುವ ಕೆಲಸ ಮಾಡಲಿ ಎಂದು ಪ್ರತಿಪಾದಿಸಿದರು.

ಯೋಜನೆಯಲ್ಲಿ ಗಾಣಿಗವೃತ್ತಿ ನಿರ್ಲಕ್ಷ್ಯ

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವಕರ್ಮ ಯೋಜನೆಯಲ್ಲೂ ಹಿಂದುಳಿದ ಗಾಣಿಗ ವೃತ್ತಿಯಪ್ರಸ್ತಾಪವಿಲ್ಲ ಎಂದು ಟೀಕಿಸಿದ ಅವರು, ಗಾಣಿಗರದ್ದು ಕಾಯಕ ಸಮಾಜವಾಗಿದೆ ಎಂದು ಅರಿತು ಸರಿಪಡಿಸಬೇಕು ಎಂದು ತಿಳಿಸಿ, ಈ ಅನ್ಯಾಯದ ಕುರಿತು ಪ್ರಧಾನ ಮಂತ್ರಿಗೂ ಪತ್ರ ಬರೆದಿದ್ದೇನೆ ಎಂದರು.ಅವಳಿ ಜಿಲ್ಲೆಗೆ ಬಜೆಟ್‌ ನಿರಾಶೆ

ಬಜೆಟ್ ಕುರಿತು ಮಾತನಾಡಿ, ರಾಜ್ಯ ಸರ್ಕಾರ ಮಂಡಿಸಿರುವ ಬಜೆಟ್ ಅವಳಿ ಜಿಲ್ಲೆಗಳ ಪಾಲಿಗೆ ನಿರಾಶಾದಾಯಕ, ಚುನಾವಣೆಗೆ ಮುನ್ನಾ ಕೋಲಾರಕ್ಕೆ ನೀಡಿರುವ ಭರವಸೆ ಈಡೇರಿಸಲು ಮುಖ್ಯಮಂತ್ರಿ ಜೂನ್‌ನಲ್ಲಿನ ಮಂಡಿಸುವ ಸಪ್ಲಿಮೇಟರಿ ಬಜೆಟ್‌ನಲ್ಲಿ ಸರಿದೂಗಿಸುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.

ಅಖಿಲ ಕರ್ನಾಟಕ ಗಾಣಿಗ ಮಹಾಸಭಾ ಅಧ್ಯಕ್ಷ ರಾಜಶೇಖರ್, ಕೋಲಾರದ ಜ್ಯೋತಿ ಎಜುಕೇಷನ್ ಟ್ರಸ್ಟ್ ರಾಜ್ಯಕ್ಕೆ ಮಾದರಿಯಾಗಿದೆ, ಇಲ್ಲಿನ ಚಟುವಟಿಕೆಗಳನ್ನು ರಾಜ್ಯ ಸಂಘದಲ್ಲೂ ಅಳವಡಿಸಿಕೊಂಡಿದ್ದೇವೆ ಎಂದು ಅಭಿನಂದಿಸಿದರು.ಸಾಧಕರಿಗೆ ಸನ್ಮಾನ ಗೌರವ ಅರ್ಪಣೆ:

ಇದೇ ಸಂದರ್ಭದಲ್ಲಿ ಅಖಿಲ ಕರ್ನಾಟಕ ಗಾಣಿಗ ಮಹಾಸಭಾ ಅಧ್ಯಕ್ಷ ರಾಜಶೇಖರ್, ನಗರಸಭೆ ಮಾಜಿ ಅಧ್ಯಕ್ಷ ಪ್ರಕಾಶ್, ಪ್ರಗತಿಪರ ರೈತ ಪ್ರಶಸ್ತಿ ಪುರಸ್ಕೃತ ರಾಧಾಕೃಷ್ಣ, ಉಪನ್ಯಾಸಕ ವಲ್ಲಂಬಳ್ಳಿ ಅಮರೇಂದ್ರ, ಹೈನುಗಾರಿಕೆ ರಾಜ್ಯ ಪ್ರಶಸ್ತಿಪಡೆದ ವೆಂಕಟಲಕ್ಷ್ಮಿರನ್ನು ಸನ್ಮಾನಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜ್ಯೋತಿ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಎಂ.ಆರ್.ಗೋಪಾಲಕೃಷ್ಣ ವಹಿಸಿದ್ದು, ಉಪಾಧ್ಯಕ್ಷೆ ಭಾರತೀದೇವಿ, ಸಂಘಟನಾ ಕಾರ್ಯದರ್ಶಿ ರವಿ, ಖಜಾಂಚಿ ಅಪ್ಪಯ್ಯಶೆಟ್ಟಿ, ವ್ಯವಸ್ಥಾಪಕ ಸುನೀಲ್ ಸಂದೀಪ್, ಟ್ರಸ್ಟ್ ಆಡಳಿತ ಮಂಡಳಿಯ ರಾಧಾಕೃಷ್ಣ, ಮತ್ತಿತರರು ಇದ್ದರು.

Share this article