ಸದಾನಂದ ಮಜತಿ
ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆ ಒಂದು ದಿಸೆಯಲ್ಲಿ ಹೆಣ್ಮಕ್ಕಳ ಆರ್ಥಿಕ ಮಟ್ಟ ಸುಧಾರಣೆಗೆ ಸಹಾಯಕವಾಗಿರುವುದೇನೋ ನಿಜ. ಮತ್ತೊಂದೆಡೆ, ದೇಶದ ಬೆನ್ನೆಲುಬಾದ ಕೃಷಿಯ ಬೆನ್ನು ಮೂಳೆಯನ್ನೇ ಮುರಿಯುತ್ತಿದೆ.
ಉಚಿತ ಬಸ್ ಪ್ರಯಾಣ ಆರಂಭವಾದ ಬಳಿಕ ಗ್ರಾಮೀಣ ಭಾಗದ ಮಹಿಳೆಯರು ಕೃಷಿ ಕೆಲಸಗಳಿಗೆ ಗುಡ್ ಬೈ ಹೇಳಿ ಕೆಲಸಕ್ಕಾಗಿ ಪಟ್ಟಣ, ನಗರಗಳ ಮೊರೆ ಹೋಗಿದ್ದು, ಗ್ರಾಮಗಳಲ್ಲಿ ಕೃಷಿ ಕಾರ್ಯ ಮಾಡಲು ಕಾರ್ಮಿಕರಿಲ್ಲದೆ ಕೃಷಿ ವಲಯ ತತ್ತರಿಸಿದೆ.ಗ್ರಾಮೀಣ ಭಾಗಕ್ಕೆ ಹೋದರೆ ಗ್ರಾಮಗಳು ಬಣಗುಡುತ್ತವೆ. ಬೆಳಗಿನ ಬಸ್‌ಗಳಲ್ಲಿ ಮಹಿಳೆಯರೇ ತುಂಬಿಕೊಂಡಿರುತ್ತಾರೆ. ದುಡಿಯುವ ವರ್ಗದ ಮಹಿಳೆಯರು ಬೆಳಗ್ಗೆ ಹೋಗಿ ಪಟ್ಟಣ, ನಗರ ಪ್ರದೇಶದಲ್ಲಿನ ಮನೆಗೆಲಸ, ಬಟ್ಟೆ ಅಂಗಡಿ, ಕೆಟರಿಂಗ್ ಮುಂತಾದ ಕೆಲಗಳನ್ನು ಮಾಡಿ ಸಂಜೆ ಮನೆಗೆ ಮರಳುತ್ತಿದ್ದಾರೆ.ನಗರ ಕೆಲಸಕ್ಕೆ ಆಕರ್ಷಣೆ:
ಕೃಷಿ ಕೆಲಸ ದೈಹಿಕವಾಗಿ ಶ್ರಮದಾಯಕ ಕೆಲಸ, ಏಳೆಂಟು ತಾಸು ಬಿಸಿಲಿನಲ್ಲಿ ಬೆವರು ಸುರಿಸುತ್ತ ಕೆಲಸ ಮಾಡಬೇಕಾಗುತ್ತದೆ. ಅಲ್ಲದೆ ಅದರಿಂದ ಸಿಗುವ ಕೂಲಿಯೂ ಕಡಿಮೆ. ಅದೇ ಬಟ್ಟೆ ಅಂಗಡಿ, ಹೋಟೆಲ್, ಮದುವೆ, ಕೆಟರಿಂಗ್ ಸೇರಿದಂತೆ ಇನ್ನಿತರ ಕಾರ್ಯಗಳಿಗೆ ನಗರಗಳಲ್ಲಿ ಮಹಿಳೆಯರಿಗೆ ಉದ್ಯೋಗಾವಕಾಶ ಇದ್ದು, ದೈಹಿಕ ಶ್ರಮದ ಕೆಲಸವೂ ಅಲ್ಲ. ಉತ್ತಮ ಕೂಲಿಯೂ ಸಿಗುತ್ತದೆ. ಮುಂಚೆ ಬಸ್ ಟಿಕೆಟ್‌ಗೆ ಅರ್ಧ ಹಣ ಖರ್ಚಾಗುತ್ತಿದ್ದ ಕಾರಣ ಹಿಂದೇಟು ಹಾಕುತ್ತಿದ್ದರು. ಈಗ ಉಚಿತ ಬಸ್ ಸೌಲಭ್ಯ ಇರುವುದರಿಂದ ಸಿಗುವ ಕೂಲಿಯ ಹಣವೆಲ್ಲ ಉಳಿತಾಯವಾಗುತ್ತದೆ. ಹೀಗಾಗಿ, ಕೃಷಿಗೆ ಕಾರ್ಮಿಕರ ಕೊರತೆ ಊಂಟಾಗಿದೆ.ಗೋಗರೆದರೂ ಸಿಗುತ್ತಿಲ್ಲ ಕೂಲಿ ಕಾರ್ಮಿಕರು:
ಕೃಷಿ ಕುಟುಂಬದಲ್ಲಿ ನಾಲ್ಕೈದು ಜನ ದುಡಿಯವ ಜನರಿದ್ದರೆ ಮಾತ್ರ ಕೃಷಿ ಮಾಡಲು ಸಾಧ್ಯ. ಮನೆಯಲ್ಲಿ ದುಡಿಯುವವರು ಇಲ್ಲದಿದ್ದರೆ ಕೃಷಿ ಕಾಯಕ ಮಾಡುವುದು ಕಷ್ಟ. ಊರೆಲ್ಲ ಅಲೆದರೂ ಈಗ ಕೃಷಿ ಕೆಲಸಕ್ಕೆ ಕಾರ್ಮಿಕರು ಸಿಗುತ್ತಿಲ್ಲ. ಬಿತ್ತನೆಯ ನಂತರ ಕಳೆ ತೆಗೆಯಲು ಕಾರ್ಮಿಕರು ಸಿಗದೇ ಗದ್ದೆಗಳು ಬೀಳು ಬೀಳುವಂತಾಗಿದೆ. ಸಾವಿರಾರು ರೂಪಾಯಿ ವೆಚ್ಚ ಮಾಡಿ ಬೆಳೆದ ಬೆಳೆ ಕಣ್ಮುಂದೆಯೇ ನಾಶವಾಗುತ್ತಿದ್ದರೂ ರೈತ ಅಸಹಾಯಕನಾಗಿದ್ದಾನೆ.ಪರಸ್ಪರ ಸಹಕಾರ ತಂತ್ರ:
ಈಗಿನ ಸಮಯದಲ್ಲಿ ರೈತರು ಕಾರ್ಮಿಕರನ್ನು ನಂಬಿ ಕೆಲಸ ಮಾಡುವ ಸ್ಥಿತಿಯೇ ಇಲ್ಲ. ಹೀಗಾಗಿ ರೈತರು ಇದಕ್ಕೆ ಪರ್ಯಾಯ ಕಂಡುಕೊಂಡಿದ್ದು, ಇಬ್ಬರು, ಮೂವರು ರೈತ ಕುಟುಂಬಗಳು ಸೇರಿ ಪರಸ್ಪರ ಸಹಕಾರದ ಮೂಲಕ ಕೃಷಿ ಕಾರ್ಯ ಮುಂದುವರಿಸಿದ್ದಾರೆ. ಆದರೆ, ಇದು ಕಡಿಮೆ ಜಮೀನು ಇದ್ದರೆ ಓಕೆ, ಹೆಚ್ಚಿನ ಜಮೀನು ಇರುವ ರೈತರ ಗೋಳು ಕೇಳವವರೇ ಇಲ್ಲವಾಗಿದೆ.ದುಡಿಯುವ ಅನಿವಾರ್ಯತೆಯೂ ಇಲ್ಲ:
ಈಗ ಮೊದಲಿನಂತೆ ದುಡಿದರೆ ಹೊಟ್ಟೆ ತುಂಬುತ್ತದೆ ಎಂಬ ಪ್ರಮೇಯವೂ ಇಲ್ಲ. ದುಡಿಯುವ ವರ್ಗದ ಬಹುತೇಕರ ಬಳಿ ಬಿಪಿಎಲ್ ಕಾರ್ಡ್ ಇದ್ದು, ತಿಂಗಳಿಗೆ ಉಂಡು ಉಳಿಯುವಷ್ಟು ಉಚಿತ ಅಕ್ಕಿ ಸಿಗುತ್ತದೆ. ಜೊತೆಗೆ ಗೃಹಲಕ್ಷ್ಮೀ ಯೋಜನೆಯಡಿ ತಿಂಗಳಿಗೆ ₹2000 ಸಿಗುತ್ತದೆ. ಇನ್ನು, ಕುಟುಂಬದಲ್ಲಿ ಏನಿಲ್ಲವೆಂದರೂ ಒಬ್ಬಿಬ್ಬರಿಗಾದರೂ ಸಂಧ್ಯಾ ಸುರಕ್ಷಾ, ಅಂಗವಿಕಲರ ವೇತನ ಪಿಂಚಣಿ ಸಿಗುತ್ತಿದ್ದು, ದುಡಿಯದೇ ಇದ್ದರೂ ಆರಾಮಾಗಿ ಜೀವನ ಸಾಗುತ್ತಿದೆ. ದುಡಿದರೆ ಮಾತ್ರ ಜೀವನ ನಡೆಯುತ್ತದೆ ಎಂಬ ಕಾಲ ಮುಗಿದು ಹೋಗಿದೆ.----ಕೋಟ್---
ಗ್ರಾಮದಲ್ಲಿ ಕೃಷಿ ಕಾರ್ಯ ಮಾಡುವುದು ಕಠಿಣವಾಗಿದೆ. ಕೃಷಿ ಕಾರ್ಮಿಕರು ಸಿಗುತ್ತಿಲ್ಲ. ಮನೆಯಲ್ಲಿ ನಾಲ್ಕೈದು ಜನ ದುಡಿಯುವ ಜನರಿದ್ದರೆ ಮಾತ್ರ ಕೃಷಿಯನ್ನು ಅವಲಂಬಿಸಬೇಕು. ಒಬ್ಬರು, ಇಬ್ಬರು ಇದ್ದರೆ ಗದ್ದೆಯಿಂದ ಫಸಲು ಮನೆಗೆ ಸೇರುವುದು ಕನಸಿನ ಮಾತಾಗಿದೆ. ಸರ್ಕಾರ ಕೃಷಿ ಕೆಲಸವನ್ನು ನರೇಗಾ ಯೋಜನೆಗೆ ಸೇರಿಸಿದರೆ ಮಾತ್ರ ಕೃಷಿ ಕ್ಷೇತ್ರ ಉಳಿಯಲಿದೆ.- ಆನಂದ ಮುನೆನ್ನಿ, ಹಣ್ಣಿಕೇರಿ ಗ್ರಾಮದ ರೈತ.