ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಪ್ರಧಾನ ಅಂಚೆ ಕಚೇರಿ ಬಳಿ ಸೇರಿದ ಕಾರ್ಯಕರ್ತರು, ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಘೋಷಣೆ ಕೂಗಿದರು. ಬಳಿಕ ಪೋಸ್ಟರ್‌ಗಳನ್ನು ಅಂಗಡಿ ಮುಂಗಟ್ಟುಗಳ ಮುಂದೆ, ವಾಹನಗಳಿಗೆ ಅಂಟಿಸುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಜಗತ್ತಿನ ದೊಡ್ಡ ದೇಶಭಕ್ತ ಸಂಘಟನೆಯಾದ ಆರಸ್‌ಎಸ್‌ಎಸ್ ಸುಮಾರು 80 ಸಾವಿರ ಶಾಖೆಗಳು, ಕೋಟ್ಯಂತರ ಸ್ವಯಂ ಸೇವಕರನ್ನು ಹೊಂದಿದೆ. ಆರ್‌ಎಸ್‌ಎಸ್ ಇಲ್ಲದಿದ್ದರೆ ನೆರೆಯ ಶ್ರೀಲಂಕಾ, ಬಾಂಗ್ಲಾ ಹಾಗೂ ನೇಪಾಳ ದೇಶಗಳಲ್ಲಿ ಆದ ಗಲಭೆಗಳು ನಡೆಯುತ್ತಿದ್ದವು ಎಂದು ಕಿಡಿಕಾರಿದರು.ಭಾರತವನ್ನು ಮತ್ತೊಮ್ಮೆ ವಿಭಜನೆ ಮಾಡಲು ಬಾಹ್ಯ ಶಕ್ತಿಗಳು ‘ಘಜ್ವಾ ಏ ಹಿಂದ್’ ಹೆಸರಿನಲ್ಲಿ ಜಾಗತಿಕ ಮಟ್ಟದಲ್ಲಿ ಪಿತೂರಿ ನಡೆಯುತ್ತಿದೆ. ಬಾಂಗ್ಲಾ ದೇಶದ ಯುನಿವರ್ಸಿಟಿಗಳಲ್ಲಿ ಈ ಬಗ್ಗೆ ಹತ್ತಾರು ವರ್ಷದಿಂದ ಸಂಶೋಧನೆ ನಡೆಯುತ್ತಿದೆ. 2050ರ ವೇಳೆಗೆ ಮತ್ತೊಮ್ಮೆ ಭಾರತವನ್ನು ಧರ್ಮದ ಹೆಸರಿನಲ್ಲಿ ಭಾಗ ಮಾಡುವ ಪಿತೂರಿ ನಡೆಯುತ್ತಿದೆ. ಅದಕ್ಕೆ ಇಂದು ತಡೆಗೋಡೆಯಾಗಿ ನಿಂತಿರುವುದು ಆರ್‌ಎಸ್‌ಎಸ್ ಸಂಘಟನೆ ಎಂದರು.
ಈ ಹಿಂದೆ ನೆಹರು, ಇಂದಿರಾ ಗಾಂಧಿ ಆಡಳಿತದ ಅವಧಿಯಲ್ಲಿ ಆರ್‌ಎಸ್‌ಎಸ್ ಸಂಘಟನೆ ನಿಷೇಧ ಮಾಡುವ ವ್ಯರ್ಥ ಪ್ರಯತ್ನ ಮಾಡಿತ್ತು. ನಿಷೇಧದ ಬಗ್ಗೆ ನ್ಯಾಯಾಲಯ ಕೂಡ ಕಾಂಗ್ರೆಸ್‌ಗೆ ಕಪಾಳ ಮೋಕ್ಷ ಮಾಡಿದೆ. ಇದನ್ನು ಮರೆತ ಪ್ರಿಯಾಂಕ್ ಖರ್ಗೆ ತಮ್ಮ ನಾಲಿಗೆ ಹರಿ ಬಿಟ್ಟಿರುವುದು ನಗೆ ಪಾಟಲಿನ ವಿಚಾರವಾಗಿದೆ ಎಂದರು.
ಸ್ವತಃ ಪ್ರಿಯಾಂಕ್ ಖರ್ಗೆ ಪ್ರತಿನಿಧಿಸುವ ಕಲುಬುರ್ಗಿ ಜಿಲ್ಲೆಯಲ್ಲೇ ಕನಿಷ್ಠ ಮೂಲ ಸೌಲಭ್ಯಗಳಿಲ್ಲ. ಬಸ್ ನಿಲ್ದಾಣವಿಲ್ಲದೆ ಜನರು ಬಸ್ ಬಂದಾಗಲೆಲ್ಲಾ ಅದರ ಹಿಂದೆ ಓಡಿಹೋಗಿ ಬಸ್ಸನ್ನೇರುವಂತಹ ವಾತಾವರಣ ಇದೆ. ಇಂತಹ ಸಮಸ್ಯೆ ಬಗೆಹರಿಸುವ ಬದಲು ಆರ್‌ಎಸ್ಎಸ್ ನಿಷೇಧದ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.