ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಅಧಿಕಾರಿಗಳು ರೈತರ ಸಮಸ್ಯೆಗಳ ಪರಿಹಾರಕ್ಕೆ ತಕ್ಷಣವೇ ಸ್ಪಂದಿಸುವ ಗುಣ ಬೆಳೆಸಿಕೊಳ್ಳಬೇಕು ಎಂದು ರಾಜ್ಯ ಕೈಮಗ್ಗ ನಿಗಮದ ಅಧ್ಯಕ್ಷ ಬಿ.ನಾಗೇಂದ್ರ ಕುಮಾರ್ ಕಿವಿಮಾತು ಹೇಳಿದರು.ತಾಲೂಕಿನ ನಾಟನಹಳ್ಳಿ ಬಳಿ 10 ಕಿ.ಮೀನಲ್ಲಿ ಮಂದಗೆರೆ ನಾಲೆಯಲ್ಲಿ ಮಾಳೆ ಬಿದ್ದು (ಕಿರುಗಂಡಿ) ರೈತರಿಗೆ ಅನಾನುಕೂಲವಾಗಿದ್ದರೂ ಅದನ್ನು ದುರಸ್ತಿಗೊಳಿಸದ ಎಂಜಿನಿಯರ್ ವಿರುದ್ಧ ರೈತರು ನೀಡಿದ ದೂರಿನ ಮೇರೆಗೆ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳ ಕಾರ್ಯವೈಖರಿಗೆ ತರಾಟೆ ತೆಗೆದುಕೊಂಡರು.
ಕಳೆದ ಅ.10 ರಂದು ಹೇಮಾವತಿ ನದಿಗೆ ಮಂದಗೆರೆ ಬಳಿ ನಿರ್ಮಿಸಿರುವ ಮಂದಗೆರೆ ಬಲದಂಡೆ ನಾಲೆ ನಾಟನಹಳ್ಳಿ ಬಳಿ 10 ಕಿ.ಮೀ.ನಲ್ಲಿ ಮಾಳೆ ಬಿದ್ದು ನೀರು ನಾಲಾ ಏರಿಯ ತಳಭಾಗದಿಂದ ಹೊರಬರಲಾರಂಭಿಸಿದೆ. ರೈತರು ಸಕಾಲಕ್ಕೆ ಎಂಜಿನಿಯರ್‌ಗಳಿಗೆ ಸುದ್ದಿ ಮುಟ್ಟಿಸಿದ ಪರಿಣಾಮ ತಕ್ಷಣವೇ ನಾಲೆಯಲ್ಲಿ ನೀರು ಬಂದ್ ಮಾಡಿದ್ದಾರೆ ಎಂದರು.ಸಕಾಲದಲ್ಲಿ ನಾಲೆ ನೀರು ನಿಲ್ಲಿಸದಿದ್ದರೆ ಕಾಲುವೆ ಏರಿ ಒಡೆದು ಬಾರೀ ಅನಾಹುತ ಸಂಭವಿಸುತ್ತಿತ್ತು. ನಾಲೆಯ ನೀರು ಬಂದ್ ಮಾಡಿ ರಿಪೇರಿ ನಂತರ ಮರುದಿನವೇ ನಾಲಾ ಏರಿ ಕಿರುಗಂಡಿಯನ್ನು ಮುಚ್ಚಿ ರೈತರಿಗೆ ಅಗತ್ಯ ನೀರು ಒದಗಿಸಲು ಮುಂದಾಗಿಲ್ಲ. ಇದರ ಪರಿಣಾಮ ನಾಲಾ ಬಯಲಿನಲ್ಲಿ ಬೆಳೆದು ನಿಂತಿರುವ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬೆಳೆ ಸಂಕಷ್ಠಕ್ಕೆ ಸಿಲುಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕಷ್ಟದ ಸನ್ನಿವೇಶದಲ್ಲಿ ಎಂಜಿನಿಯರ್ ರೈತರ ಸಮಸ್ಯೆಗೆ ಸ್ಪಂದಿಸಿ ಕಾಲುವೆಯಲ್ಲಿನ ನೀರು ನಿಲ್ಲಿಸಿ ಕೈತೊಳೆದುಕೊಂಡರೆ ರೈತರಿಗೆ ಉಂಟಾಗುವ ನಷ್ಟವನ್ನು ಭರಿಸಿಕೊಡುವವರ್‍ಯಾರು? ಎಂದು ಪ್ರಶ್ನಿಸಿದರು.
ನಾಲೆಯಲ್ಲಿ ಹೂಳು ತೆಗೆದಿಲ್ಲ. ಏರಿ ಮೇಲೆ ಜಂಗಲ್ ಕಟ್ಟಿಂಗ್ ಮಾಡಿಲ್ಲ. ಇದರಿಂದ ನೀರು ಸುಲಲಿತವಾಗಿ ಹರಿಯುತ್ತಿಲ್ಲ ಎಂದು ಕೆಲವು ರೈತರು ಎಂಜಿನಿಯರ್‌ಗಳ ಮೇಲೆ ಹರಿಹಾಯ್ದರು.ನಂತರ ಎಂಜಿನಿಯರ್ ಆನಂದ್ ಮಂದಗೆರೆ ಬಲದಂಡೆ ನಾಲೆ ಮಾಳೆಯನ್ನು ದುರಸ್ತಿ ಮಾಡಲಾಗುತ್ತಿದೆ. ಇನ್ನೊಂದು ದಿನದಲ್ಲಿ ನಾಲೆಯಲ್ಲಿ ನೀರು ಹರಿಸಲಾಗುವುದು ಎಂದರು.
ಈ ವೇಳೆ ತಾಪಂ ಮಾಜಿ ಸದಸ್ಯ ನಾಟನಹಳ್ಳಿ ನಿಂಗೇಗೌಡ, ಕಾಂಗ್ರೆಸ್ ಕಾರ್ಯಕರ್ತರಾದ ಬಿ.ಕೆ.ರವೀಂದ್ರನಾಥ್, ಆಕಾಶ್, ಚೇತನ್, ಕಾರ್ತಿಕ್ ಇದ್ದರು.