ರೈಲ್ವೆ ಪೊಲೀಸ್ ಡಿಐಜಿ ಜೆ.ಕೆ. ರಶ್ಮಿ ಅರಸೀಕೆರೆ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ ಸ್ಥಳೀಯ ರೈಲ್ವೆ ಪೊಲೀಸ್ ಸಿಬ್ಬಂದಿಯ ಕಾರ್ಯವೈಖರಿಯನ್ನು ಪರಿಶೀಲಿಸಿದರು. ರೈಲು ಪ್ರಯಾಣಿಕರಿಗೆ ನಿರಂತರ ಭದ್ರತೆ ಒದಗಿಸುವ ಸಲುವಾಗಿ ರೈಲ್ವೆ ಪೊಲೀಸರು ಹಗಲು ಇರುಳು ಎನ್ನದೆ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೂ ಕೆಲವು ಸಂದರ್ಭಗಳಲ್ಲಿ ಪ್ರಯಾಣಿಕರನ್ನು ವಂಚಿಸಿ ಅವರ ಹಣ ಹಾಗೂ ಮೌಲ್ಯವಾದ ವಸ್ತುಗಳನ್ನು ಕಳವು ಮಾಡುವ ಪ್ರಕರಣಗಳು ವರದಿಯಾಗುತ್ತಿದ್ದು, ಇಂತಹ ಘಟನೆಗಳನ್ನು ತಡೆಗಟ್ಟಲು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.
ಕನ್ನಡಪ್ರಭ ವಾರ್ತೆ ಅರಸೀಕೆರೆ
ರೈಲು ಪ್ರಯಾಣಿಕರ ಭದ್ರತೆ ಮತ್ತು ಸುಗಮ ಸಂಚಾರಕ್ಕೆ ರೈಲ್ವೆ ಪೊಲೀಸರು ಇನ್ನಷ್ಟು ಪ್ರಯಾಣಿಕ ಸ್ನೇಹಿಯಾಗಿ ಕಾರ್ಯನಿರ್ವಹಿಸಬೇಕೆಂದು ರೈಲ್ವೆ ಪೊಲೀಸ್ ಡಿಐಜಿ ಜೆ.ಕೆ. ರಶ್ಮಿ ತಿಳಿಸಿದರು. ಅವರು ಮೊದಲ ಬಾರಿಗೆ ಅರಸೀಕೆರೆ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ ಸ್ಥಳೀಯ ರೈಲ್ವೆ ಪೊಲೀಸ್ ಸಿಬ್ಬಂದಿಯ ಕಾರ್ಯವೈಖರಿಯನ್ನು ಪರಿಶೀಲಿಸಿದರು.ಭೇಟಿಯ ಸಂದರ್ಭದಲ್ಲಿ ರೈಲ್ವೆ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ಸಭೆ ನಡೆಸಿದ ಡಿಐಜಿ, ನಿಲ್ದಾಣದ ಭದ್ರತಾ ವ್ಯವಸ್ಥೆ, ಪ್ಯಾಟ್ರೋಲಿಂಗ್ ವ್ಯವಸ್ಥೆ ಹಾಗೂ ಪ್ರಯಾಣಿಕರಿಗೆ ಒದಗಿಸಲಾಗುತ್ತಿರುವ ಸೇವೆಗಳ ಬಗ್ಗೆ ಸಮಗ್ರ ಮಾಹಿತಿ ಪಡೆದುಕೊಂಡರು. ಅಲ್ಲದೆ ಪ್ರಯಾಣಿಕರೊಂದಿಗೆ ನೇರವಾಗಿ ಸಂವಾದ ನಡೆಸಿ ಅವರ ಸಮಸ್ಯೆಗಳು ಹಾಗೂ ಸಲಹೆಗಳನ್ನು ಆಲಿಸಿದರು.ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈಲು ಪ್ರಯಾಣಿಕರಿಗೆ ನಿರಂತರ ಭದ್ರತೆ ಒದಗಿಸುವ ಸಲುವಾಗಿ ರೈಲ್ವೆ ಪೊಲೀಸರು ಹಗಲು ಇರುಳು ಎನ್ನದೆ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೂ ಕೆಲವು ಸಂದರ್ಭಗಳಲ್ಲಿ ಪ್ರಯಾಣಿಕರನ್ನು ವಂಚಿಸಿ ಅವರ ಹಣ ಹಾಗೂ ಮೌಲ್ಯವಾದ ವಸ್ತುಗಳನ್ನು ಕಳವು ಮಾಡುವ ಪ್ರಕರಣಗಳು ವರದಿಯಾಗುತ್ತಿದ್ದು, ಇಂತಹ ಘಟನೆಗಳನ್ನು ತಡೆಗಟ್ಟಲು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.ರೈಲು ಹಾಗೂ ರೈಲ್ವೆ ನಿಲ್ದಾಣ ಆವರಣದಲ್ಲಿ ಅನುಮಾನಾಸ್ಪದ ಚಲನವಲನ ಕಂಡುಬಂದಲ್ಲಿ ತಕ್ಷಣ ಸ್ಥಳೀಯ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡುವಂತೆ ಪ್ರಯಾಣಿಕರಿಗೆ ಅವರು ಮನವಿ ಮಾಡಿದರು. ಪ್ರಯಾಣಿಕರ ಸಹಕಾರ ದೊರೆತಲ್ಲಿ ಅಪರಾಧಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಸಾಧ್ಯವಾಗುತ್ತದೆ ಎಂದರು.ಭೇಟಿಯ ಅಂತ್ಯದಲ್ಲಿ ರೈಲ್ವೆ ಪೊಲೀಸ್ ಸಿಬ್ಬಂದಿ ಶಿಷ್ಟಾಚಾರದಂತೆ ಡಿಐಜಿ ಜೆ.ಕೆ. ರಶ್ಮಿ ಅವರಿಗೆ ಸ್ವಾಗತ ಹಾಗೂ ಬೀಳ್ಕೊಡುಗೆ ಸಲ್ಲಿಸಿದರು.