ಕನ್ನಡಪ್ರಭ ವಾರ್ತೆ ಹಾಸನ
ಶಿವಪ್ರಸಾದ್ ಅವರು ತಮ್ಮ ಕಲಾಕೃತಿಗಳ ಮೂಲಕ ಸಾಮಾಜಿಕ ನ್ಯಾಯ, ಸಮಾನತೆ ಹಾಗೂ ಮಾನವೀಯ ಮೌಲ್ಯಗಳನ್ನು ಪ್ರತಿಬಿಂಬಿಸಿದ್ದರು. ರೈತ ಸಂಘ ಹಾಗೂ ದಲಿತ ಸಂಘರ್ಷ ಸಮಿತಿಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಪ್ರಗತಿಪರ ಚಿಂತನೆಗಳನ್ನು ಕಲೆಯ ಮೂಲಕ ಜನಸಾಮಾನ್ಯರಿಗೆ ತಲುಪಿಸಿದ ಅಪರೂಪದ ಕಲಾವಿದರೆಂದು ಗುರುತಿಸಿಕೊಂಡಿದ್ದರು. ಖ್ಯಾತ ಉದ್ಯಮಿ ದಿವಂಗತ ಕಾರ್ಲೆ ಅವರ ಪುತ್ರರಾಗಿದ್ದ ಶಿವಪ್ರಸಾದ್ ಅವರು ಹಿರಿಯ ಸಾಹಿತಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಪರಮಾಪ್ತ ಸ್ನೇಹಿತರಾಗಿದ್ದರು. ಸಾಹಿತ್ಯ, ಕಲೆ ಮತ್ತು ಸಾಮಾಜಿಕ ಚಳವಳಿಗಳ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸಿದ ಅವರು, ರಾಜ್ಯದ ಸಾಂಸ್ಕೃತಿಕ ವಲಯದಲ್ಲಿ ವಿಶಿಷ್ಟ ಛಾಪು ಮೂಡಿಸಿದ್ದರು. ಕುಟುಂಬದ ಸದಸ್ಯರ ಮಾಹಿತಿಯಂತೆ, ಅವರ ಪಾರ್ಥಿವ ಶರೀರವನ್ನು ಬುಧವಾರ (ಇಂದು) ಬೆಳಿಗ್ಗೆ ಬೆಂಗಳೂರಿನಿಂದ ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನಕ್ಕೆ ತರಲಾಗುವುದು. ಬೆಳಿಗ್ಗೆ ೯.೩೦ರಿಂದ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಮಧ್ಯಾಹ್ನ ೨ ಗಂಟೆಗೆ ಹಾಸನದ ಬಿಟ್ಟಗೋಡನಹಳ್ಳಿ ಶಾಂತಿಧಾಮದಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ.ಕೆ.ಟಿ. ಶಿವಪ್ರಸಾದ್ ಅವರ ನಿಧನಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ವಿಶ್ವಕರ್ಮ ಸಮಾಜ, ವಿವಿಧ ಸಂಘ ಸಂಸ್ಥೆಗಳು ತೀವ್ರ ಸಂತಾಪ ವ್ಯಕ್ತಪಡಿಸಿವೆ.