ಹೆದ್ದಾರಿ ಹಾದಿಯಲ್ಲಿ ಬಂದೆರಗಿದ ಜವರಾಯ

KannadaprabhaNewsNetwork |  
Published : May 30, 2026, 01:15 AM IST
ಚಿತ್ರದುರ್ಗ ಎರಡನೇ ಪುಟದ ಲೀಡ್  | Kannada Prabha

ಸಾರಾಂಶ

ಯುವಕರ ದುರ್ಮರಣಕ್ಕೆ ತಲ್ಲಣಿಸಿದ ಚಳ್ಳಕೆರೆ । ಮೃತರ ಆಕ್ರಂದನ. ಬದುಕಿ ಬಾಳಬೇಕಿದ್ದ ಯುವಕರ ದುರಂತ ಅಂತ್ಯ

ಜಡೇಕುಂಟೆ ಮಂಜುನಾಥ್

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ಅವರೆಲ್ಲರೂ ನಲವತ್ತರ ಆಸುಪಾಸಿನವರು. ಈಗಿನ್ನೂ ಬದುಕಿನ ಹದಕಂಡುಕೊಂಡವರು. ಮಕ್ಕಳಿನ್ನೂ ಚಿಕ್ಕವರು. ಮನೆತನಗಳಿಗೆ ಇವರೇ ಆಸರೆ. ಇವರನ್ನು ನಂಬಿಕೊಂಡವರು ಅನೇಕರಿದ್ದರು. ಇಷ್ಟು ಬೇಗನೇ ವಿಧಿ ಅವರನ್ನು ಶಾಶ್ವತವಾಗಿ ಮರೆಯಾಗುವಂತೆ ಮಾಡಿಬಿಟ್ಟಿದ್ದು ಮಾತ್ರ ವಿಪರ್ಯಾಸ.

ಮೊಳಕಾಲ್ಮೂರು ತಾಲೂಕು ತುಮಕೂರ್ಲಹಳ್ಳಿ ಹೆದ್ದಾರಿಯಲ್ಲಿ ಗುರುವಾರ ರಾತ್ರಿ ಸಂಭವಿಸಿದ ಅಪಘಾತದಲ್ಲಿ ಐವರು ಯುವಕರು ಅಸುನೀಗಿದ ಈ ದುರಂತ ದುರ್ಘಟನೆಗೆ ಇಡೀ ಚಳ್ಳಕೆರೆಯೆಂಬ ಚಳ್ಳಕೆರೆಯೇ ತಲ್ಲಣಿಸಿ ಹೋಗಿದೆ.

ಪ್ರತಿಯೊಬ್ಬರ ಬಾಯಲ್ಲೂ ಇದೇ ಸುದ್ದಿ. ದುರ್ಮರಣಕ್ಕೆ ತುತ್ತಾದ ಯುವಕರನ್ನು ನೆನೆಯುತ್ತಾ ಕಣ್ಣೀರಾಗುವ ಕುಟುಂಬಸ್ಥರು, ಸಾರ್ವಜನಿಕರು, ಗೆಳೆಯರು ಸತ್ತವರ ಜೊತೆಗಿದ್ದ ಒಡನಾಟದ ಮೆಲುಕು ಹಾಕುತ್ತಿದ್ದ ದೃಶ್ಯ ಎಂಥವರ ಕಣ್ಣಾಲಿಗಳೂ ತೇವಗೊಂಡಿದ್ದವು.

ಎರಡು ಬಾರಿ ನಗರಸಭೆ ಸದಸ್ಯನಾಗಿದ್ದ ಪ್ರಮೋದ್ ಅಪಾರ ಸ್ನೇಹ ಬಳಗವನ್ನು ಹೊಂದಿದವನು. ಈತನಿಗೆ ಈಗಿನ್ನೂ ಎರಡು ವರ್ಷದ ಹಸುಗೂಸಿದೆ. ಅಂತರ್ ಧರ್ಮೀಯ ವಿವಾಹವಾಗಿ ಆದರ್ಶದ ಬದುಕಿಗೆ ಅಣಿಯಾಗಿ ಸುಂದರ ಬದುಕು ಕಟ್ಟಿಕೊಳ್ಳುವ ಭರವಸೆಯಲ್ಲಿದ್ದಂತಹ ಯುವಕ.

ಗುರುವಾರ ಸಂಜೆಯ ಹೊತ್ತಿನಲ್ಲಿ ಚಳ್ಳಕೆರೆಯಲ್ಲಿ ಓಡಾಡುತ್ತಿದ್ದ ಮನುಷ್ಯ ರಾತ್ರಿ 11 ಗಂಟೆ ಹೊತ್ತಿಗೆ ಮೃತಪಟ್ಟಿರುವ ಸುದ್ಧಿ ಚಳ್ಳಕೆರೆ ಜನತೆಯನ್ನು ದಿಗ್ಭ್ರಮೆಗೊಳಿಸಿದೆ. ಗೆಳೆಯರ ಜೊತೆಗೆ ರಾಯದುರ್ಗಕ್ಕೆ ಹೋಗಿ ವಾಪಾಸ್ ಬರುವಾಗ ಮೊಳಕಾಲ್ಮೂರು ತಾಲೂಕಿನ ತುಮಕೂರ್ಲಹಳ್ಳಿ ಬಳಿ ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟವರಲ್ಲಿ ಪ್ರಮೋದ್ ಕೂಡ ಇದ್ದರು ಎಂಬುದನ್ನು ಫೋಟೋಗಳಲ್ಲಿ ನೋಡಿ ತಿಳಿದ ಕೂಡಲೇ ರಾಜಕೀಯ ಕ್ಷೇತ್ರದ ಮಿತ್ರರೆಲ್ಲಾ ಅಪಘಾತದ ಸ್ಥಳಕ್ಕೆ ಹೋದಾಗಲೇ ರಕ್ತದ ಮಡುವಿನಲ್ಲಿ ಬಿದ್ದಿದ್ದ ಇನ್ನೂ ನಾಲ್ವರ ಮೃತದೇಹಗಳ ಗುರುತು ಸಿಕ್ಕುಬಿಟ್ಟಿತ್ತು. ಒಟ್ಟು ಐದು ಜನರೂ ಕೂಡ ಚಳ್ಳಕೆರೆಯವರೇ ಎಂಬುದನ್ನು ಅರಗಿಸಿಕೊಳ್ಳಲು ಆ ಸಂದರ್ಭದಲ್ಲಿ ಯಾರಿಗೂ ಸಾಧ್ಯವಾಗಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಈ ದುರ್ಮರಣದ ಸುದ್ದಿ ವೈರಲ್ ಆದಾಗಲೇ ಚಳ್ಳಕೆರೆ ಜನತೆ ನಿಜಕ್ಕೂ ಬೆಚ್ಚಿಬಿದ್ದಿತ್ತು.

ಫೋಟೋ ಲ್ಯಾಮಿನೇಷನ್ ಅಂಗಡಿ ಇಟ್ಟುಕೊಂಡು ಕೆಲಸ ಮಾಡಿಕೊಂಡು ಎಲ್ಲರಿಗೂ ಚಿರಪರಿಚಿತನಾಗಿದ್ದ ರಘು, ಚಿಕನ್ ಅಂಗಡಿ ಇಟ್ಟುಕೊಂಡು ಉತ್ತಮ ಬದುಕುಕಟ್ಟಿಕೊಂಡಿದ್ದ ರುದ್ರೇಶ್, ಬೋರಪ್ಪನಹಟ್ಟಿಯ ಸೋಮ್ಲಾನಾಯಕ್, ಡಿಟಿಎಚ್ ಮಲ್ಲಿಕಾರ್ಜುನ ಎಲ್ಲರೂ ಜವಾಬ್ಧಾರಿಯ ಯುವಕರೇ.

ಎಲ್ಲರೂ ಸೇರಿ ಆಂಧ್ರದ ರಾಯದುರ್ಗಕ್ಕೆ ಕಾರ್ಯನಿಮಿತ್ತ ತೆರಳಿದ್ದಾರೆ. ವಾಪಾಸ್ ಬರುವಾಗ ಡಾಬಾ ಮುಂದೆ ನಿಲ್ಲಿಸಿದ್ದ ಲಾರಿಗೆ ಕಾರಿನ ಟೈಯರ್ ಸಿಡಿದು ನೇರವಾಗಿ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಐದೂ ಜನ ಪ್ರಾಣ ತೆತ್ತಿದ್ದಾರೆ.

ಹೊತ್ತಲ್ಲದ ಹೊತ್ತಿನಲ್ಲಿ ಹೆದ್ದಾರಿಯ ಹಾದಿಯಲ್ಲಿ ಬರುವಾಗ ಇವರ ಪ್ರಾಣಪಕ್ಷಿಗಳು ಹಾರಿಹೋದ ಸುದ್ದಿ ಮಾತ್ರ ಚಳ್ಳಕೆರೆ ಜನತೆಗೆ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ. ಇವರೆಲ್ಲರ ಅನ್ನದ ಋಣ ರಸ್ತೆ ಅಪಘಾತದಲ್ಲಿ ಅಸುನೀಗುವ ಮೂಲಕ ಮುಗಿದುಹೋಗಿದ್ದು ಮಾತ್ರ ದೊಡ್ಡ ದುರಂತವೇ ಸರಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯ ರಾಜಕಾರಣದಲ್ಲೇ ಉಳಿಯುವೆನೆಂಬ ಸಿದ್ದುಹೇಳಿಕೆ ಡಿಕೆಶಿಗೆ ಎಚ್ಚರಿಕೆ ಘಂಟೆ:ಸಂಸದ ಸುಧಾಕರ್‌
ಸಚಿವ ಸ್ಥಾನದ ರೇಸ್‌ನಲ್ಲಿ ತರೀಕೆರೆ ಶಾಸಕ ಶ್ರೀನಿವಾಸ್‌