ಕನ್ನಡಪ್ರಭ ವಾರ್ತೆ ಹಾಸನ
ಗೃಹಲಕ್ಷ್ಮಿ ಹಣವನ್ನು ಪ್ರತಿ ತಿಂಗಳು ಸರಿಯಾದ ಸಮಯಕ್ಕೆ ಜಮೆ ಮಾಡಬೇಕು ಮತ್ತು ಉಳಿದ ಗ್ಯಾರಂಟಿಗಳನ್ನು ಸಮರ್ಪಕವಾಗಿ ನೀಡುವಂತೆ ಆಗ್ರಹಿಸಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಜೆಡಿಎಸ್ ಪಕ್ಷದಿಂದ ಗುರುವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಸಿ. ಸತ್ಯಭಾಮ ಅವರಿಗೆ ಮನವಿ ಸಲ್ಲಿಸಲಾಯಿತು.ಇದೇ ವೇಳೆ ಮಾಜಿ ಶಾಸಕರಾದ ಕೆ.ಎಸ್. ಲಿಂಗೇಶ್ ಮತ್ತು ಎಚ್.ಕೆ. ಕುಮಾರಸ್ವಾಮಿ ಮಾಧ್ಯಮದೊಂದಿಗೆ ಮಾತನಾಡಿ, ಹಾಲಿ ಆಡಳಿತದಲ್ಲಿರುವ ಕಾಂಗ್ರೆಸ್ ಪಕ್ಷವು ಗೃಹಲಕ್ಷ್ಮಿ, ಅನ್ನಭಾಗ್ಯ, ಯುವನಿಧಿ ಸೇರಿದಂತೆ ಐದು ಗ್ಯಾರಂಟಿ ಯೋಜನೆಗಳ ಭರವಸೆಯೊಂದಿಗೆ ಅಧಿಕಾರಕ್ಕೆ ಏರಿದೆ. ಅಂತೆಯೇ ಪಂಚ ಗ್ಯಾರಂಟಿಗಳಲ್ಲಿ ಯಾವುದೇ ಲೋಪ ಆಗದಂತೆ ಪ್ರತೀ ತಿಂಗಳು ಹಣವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆ ಮಾಡುವುದಾಗಿ ಬಣ್ಣದ ಮಾತುಗಳನ್ನೂ ಆಡಿತ್ತು. ಆದರೆ ಆರಂಭದಿಂದಲೂ ಪ್ರತಿ ತಿಂಗಳು ಅರ್ಹ ಫಲಾನುಭವಿಗಳ ಖಾತೆಗೆ ಹಣ ಹಾಕದೇ ಇರುವುದನ್ನು ಖಂಡಿಸುತ್ತೇವೆ ಎಂದರು.
ನಾವು ನುಡಿದಂತೆ ನಡೆದಿದ್ದೇವೆ ಎಂದು ಪದೇ ಪದೆ ಹೇಳುವ ಸಿಎಂ ಮತ್ತು ಸಚಿವರು, ಪ್ರತಿ ತಿಂಗಳು ನಿಗದಿತ ಸಮಯಕ್ಕೆ ಹಣ ಹಾಕದೆ ತಾಂತ್ರಿಕ ಸಮಸ್ಯೆ ನೆಪ ಒಡ್ಡುತ್ತಿರುವುದು ನಿಜಕ್ಕೂ ಹಾಸ್ಯಾಸ್ಪದ. ಬೆಂಗಳೂರು ಭಾರತದ ಸಿಲಿಕಾನ್ ಕ್ಯಾಪಿಟಲ್, ಜಾಗತಿಕ ತಂತ್ರಜ್ಞಾನ ಕೇಂದ್ರದಲ್ಲಿ ಡಿಬಿಟಿ ವರ್ಗಾವಣೆ ಸರಿಪಡಿಸಲಾಗುವುದಿಲ್ಲವೇ. ಮುಖ್ಯಮಂತ್ರಿಗಳು ಹಾಗೂ ಹಣಕಾಸು ಸಚಿವರೂ ಆಗಿರುವ ಸಿದ್ದರಾಮಯ್ಯ ಅವರು ಬಜೆಟ್ ರೂಪಿಸುವಲ್ಲಿ ನಿರತರಾಗಿದ್ದೀರಿ. ವಿಪರ್ಯಾಸವೆಂದರೆ, ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ಹಣಕ್ಕಾಗಿ ೩-೪ ತಿಂಗಳು ಕಾಯಬೇಕಾಗಿದೆ. ಯಾವುದಾದರೂ ಚುನಾವಣೆಗಳು ಸಮೀಪಿಸಿದಾಗ ಮಾತ್ರ ಮ್ಯಾಜಿಕ್ ಆಗಿ ಹಣ ಜಮೆ ಆಗಲಿದೆ. ಇಲ್ಲದಿದ್ದರೆ ಕಾಯುವುದು ಅನಿವಾರ್ಯವಾಗಿದೆ. ಕೂಡಲೇ ಈ ಎಲ್ಲ ಲೋಪದೋಷ ಸರಿಪಡಿಸಬೇಕು ಎಂಬುದು ನಮ್ಮ ಆಗ್ರಹವಾಗಿದೆ ಎಂದರು.ವಿವಿ ಮುಂದುವರಿಸಿ:
ಹಾಸನ ನಗರದ ಮೇಲ್ಸೇತುವೆ ಉಳಿಕೆ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಬೇಕು. ವಿಮಾನ ನಿಲ್ದಾಣ ಕಾಮಗಾರಿಯನ್ನು ಈ ವರ್ಷವೇ ಮುಗಿಸಬೇಕು. ರೈತರ ಸಮಸ್ಯೆ ಬಗೆಹರಿಸಬೇಕು, ಹಾಸನ ವಿಶ್ವವಿದ್ಯಾನಿಲಯವನ್ನು ಯಾವುದೇ ಕಾರಣಕ್ಕೂ ಮುಚ್ಚದೆ ಅಥವಾ ಮೈಸೂರು ವಿವಿಯೊಂದಿಗೆ ವಿಲೀನ ಮಾಡದೇ, ಇಲ್ಲೇ ಮುಂದುವರಿಸಬೇಕು. ಹಾಸನ ಕೃಷಿ ಕಾಲೇಜನ್ನು ಬೆಂಗಳೂರು ಕೃಷಿ ಕಾಲೇಜು ವ್ಯಾಪ್ತಿಯಲ್ಲಿ ಉಳಿಸಬೇಕು. ಇಲ್ಲವಾದರೆ ಹಾಸನ ಕೃಷಿ ಕಾಲೇಜನ್ನೇ ಪ್ರತ್ಯೇಕ ಕೃಷಿ ವಿಶ್ವ ವಿದ್ಯಾನಿಲಯವನ್ನಾಗಿ ಮಾಡಬೇಕು ಹಾಗೂ ಜಿಲ್ಲೆಯ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಬೇಕು, ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಿತಿ ಮೀರಿರುವ ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಹಿಡಿಯಬೇಕು ಎಂದು ಈ ಮೂಲಕ ಆಗ್ರಹ ಪಡಿಸುತ್ತೇವೆ. ಈಗಾಗಲೇ ನಮ್ಮ ನಾಯಕರಾದ ಹಾಗೂ ಜಾತ್ಯತೀತ ಜನತಾದಳದ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡಿ ಗ್ಯಾರಂಟಿ ಕ್ಯಾಲೆಂಡರ್ ಬಿಡುಗಡೆಗೆ ಆಗ್ರಹಿಸಲಾಗಿದೆ. ಇಂದು ಅದರ ಮುಂದಿನ ಭಾಗವಾಗಿ ಇಂದು ಹಾಸನ ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನೆ ನಡೆಸುವ ಮೂಲಕ ರಾಜ್ಯ ಸರ್ಕಾರವನ್ನು ಆಗ್ರಹಿಸುತ್ತೇವೆ ಎಂದು ಹೇಳಿದರು. ಮೌನ ಪ್ರತಿಭಟನೆಯಲ್ಲಿ ನಗರಸಭೆ ಅಧ್ಯಕ್ಷ ಎಂ. ಚಂದ್ರೇಗೌಡ, ಜೆಡಿಎಸ್ ಮುಖಂಡರಾದ ಆಲೂರು ತಾಲೂಕು ಅಧ್ಯಕ್ಷ ಮಂಜೇಗೌಡ, ಸಮೀರ್, ಲಕ್ಷ್ಮಣ್, ರುದ್ರೇಗೌಡ, ಸಂಗಂ, ದಯಾನಂದ್, ಕುಮಾರ್, ಸಯ್ಯದ್ ಅಕ್ಬರ್, ಇತರರು ಉಪಸ್ಥಿತರಿದ್ದರು.