ಹಾನಗಲ್ಲ: ಒಂದು ಲಕ್ಷ ರು. ಹಣವನ್ನು ಪಡೆದು ಮೂರು ತಿಂಗಳಲ್ಲಿ ದ್ವಿಗುಣ ಮಾಡಿ ಕೊಡುವುದಾಗಿ ಹೇಳಿದ ವ್ಯಕ್ತಿಯೋರ್ವನ ಮಾತು ನಂಬಿ ಮೋಸ ಹೋದ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ ಘಟನೆ ತಾಲೂಕಿನ ಅರಳೇಶ್ವರ ಗ್ರಾಮದಲ್ಲಿ ಬುಧವಾರ ನಡೆದಿದೆ.ಅರಳೇಶ್ವರ ಗ್ರಾಮದ ಸುಮಲತಾ ಪಾಟೀಲ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ. ತಾಲೂಕಿನ ಬೊಮ್ಮನಹಳ್ಳಿ ಗ್ರಾಮದ ಈಶ್ವರ ಎಂಬವರು ಮೂರು ತಿಂಗಳಲ್ಲಿ ಹಣ ಡಬಲ್ ಮಾಡಿ ಕೊಡುವುದಾಗಿ ಮಹಿಳೆಯನ್ನು ನಂಬಿಸಿದ್ದ. ಇದನ್ನು ನಂಬಿದ ಸುಮಲತಾ ತಾನಷ್ಟೇ ಅಲ್ಲದೇ ಹತ್ತಾರು ಹಳ್ಳಿಗಳ 40ಕ್ಕೂ ಹೆಚ್ಚು ಮಹಿಳೆಯರಿಂದ ₹48 ಲಕ್ಷಕ್ಕೂ ಹೆಚ್ಚು ಹಣ ತೊಡಗಿಸಿದ್ದರು.ಆದರೆ ಹಣ ಪಡೆದ ವ್ಯಕ್ತಿ ನಾಪತ್ತೆಯಾಗಿದ್ದು, ಇದರ ಬೆನ್ನಲ್ಲೇ ಹಣ ಹಾಕಿದ ಮಹಿಳೆಯರು ತಮ್ಮ ಹಣ ವಾಪಸ್ ಕೊಡಿಸುವಂತೆ ಸುಮಲತಾ ಪಾಟೀಲ ಅವರಿಗೆ ದುಂಬಾಲು ಬಿದ್ದಿದ್ದರು. ಆಗ ಹಣ ಡಬಲ್ ಮಾಡಿ ಕೊಡುವ ಮೋಸಕ್ಕೆ ಸಿಲುಕಿದ ಬಗ್ಗೆ ಅರಿವಾದ ಸುಮಲತಾ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅಸ್ವಸ್ಥಗೊಂಡ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.ಹಣ ಕಳೆದುಕೊಂಡ ಮಹಿಳೆಯರು ನಂಬಿಸಿ ಮೋಸ ಮಾಡಿರುವ ಈಶ್ವರ ಎಂಬ ವ್ಯಕ್ತಿಯನ್ನು ಪತ್ತೆ ಮಾಡಿ, ತಮ್ಮ ಹಣ ವಾಪಸ್ ಕೊಡಿಸುವಂತೆ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಕುರಿತು ಆಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಅತ್ಯಾಚಾರಕ್ಕೆ ಯತ್ನ, ಜಿಲ್ಲಾಸ್ಪತ್ರೆ ಆರ್‌ಎಂಒ ಮೇಲೆ ಕೇಸ್
ಹಾವೇರಿ: ಅತ್ಯಾಚಾರಕ್ಕೆ ಯತ್ನಿಸಿದ್ದಲ್ಲದೇ ಜಾತಿನಿಂದನೆ ಮಾಡಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ಜಿಲ್ಲಾಸ್ಪತ್ರೆ ಸ್ಥಾನಿಕ ವೈದ್ಯಾಧಿಕಾರಿ (ಆರ್‌ಎಂಒ) ಡಾ. ಪರಸಪ್ಪ ಚುರ್ಚಿಹಾಳ ವಿರುದ್ಧ ದೂರು ನೀಡಿದ್ದು, ಮಹಿಳಾ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.ತಾಲೂಕಿನ ಹಿರೇಲಿಂಗದಹಳ್ಳಿ ಗ್ರಾಮದ ಮಹಿಳೆಯೊಬ್ಬರು ದೂರು ನೀಡಿದ್ದಾರೆ. ಇಲ್ಲಿಯ ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಸ್ಥಾನಿಕ ವೈದ್ಯಾಧಿಕಾರಿ ಡಾ.ಪರಸಪ್ಪ ಚುರ್ಚಿಹಾಳ ಅವರ ವಸತಿಗೃಹದಲ್ಲಿ ಫೆ.13ರಂದು ಬೆಳಗ್ಗೆ ಮನೆಗೆಲಸಕ್ಕೆ ಹೋದಾಗ ಡಾ. ಪರಸಪ್ಪ ಚುರ್ಚಿಹಾಳ ಅವರು ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಅಲ್ಲದೇ ಜಾತಿ ನಿಂದನೆ ಮಾಡಿದ್ದಾರೆ. ಈ ಕುರಿತು ಮಹಿಳಾ ಪೊಲೀಸ್ ಠಾಣೆ ಪಿಐ ಸಿದ್ಧಾರೂಢ ಬಡಿಗೇರ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣದ ಕುರಿತು ಹಾವೇರಿ ಡಿವೈಎಸ್ಪಿ ತನಿಖೆ ನಡೆಸುತ್ತಿದ್ದು, ಸ್ಥಳ ಮಹಜರು ನಡೆಸಿದ್ದಾರೆ. ಹೆಚ್ಚಿನ ವಿಚಾರಣೆ ನಡೆಸಲಾಗುತ್ತದೆ. ಇದುವರೆಗೆ ಆರೋಪಿಯನ್ನು ಬಂಧಿಸಿಲ್ಲ ಎಂದು ಎಸ್ಪಿ ಅಂಶುಕುಮಾರ್ ತಿಳಿಸಿದ್ದಾರೆ.