ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ‘ಕಂದೀಲು’ ಆಯ್ಕೆ

KannadaprabhaNewsNetwork | Published : Feb 24, 2024 2:36 AM

ಸಾರಾಂಶ

ಫೆ.29 ರಿಂದ ಮಾ.7ರ ವರೆಗೆ ಬೆಂಗಳೂರಿನ ಒರಿಯಾನ್ ಮಾಲ್‌ನಲ್ಲಿ ನಡೆಯುವ ಚಲನಚಿತ್ರೋತ್ಸವದ ಕನ್ನಡ ಸ್ಪರ್ಧಾತ್ಮಕ ವಿಭಾಗದಲ್ಲಿ ಕಂದೀಲು ಕನ್ನಡ ಚಲನಚಿತ್ರ ಪ್ರದರ್ಶನಗೊಳ್ಳಲಿದೆ. ಸ್ವಸ್ತಿಕ್ ಎಂಟರ್ಟೈನ್ಮೆಂಟ್ ಕೊಟ್ಟುಕತ್ತೀರ ಯಶೋಧಾ ಪ್ರಕಾಶ್ ನಿರ್ದೇಶನದ ಸಿನಿಮಾ ಇದು.

ಕನ್ನಡಪ್ರಭ ವಾರ್ತೆ ಮಡಿಕೇರಿ ಈಗಾಗಲೇ 29ನೇ ಕೊಲ್ಕೊತ್ತಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಇಂಡಿಯನ್ ಕಾಂಪಿಟೀಷನ್ ವಿಭಾಗದಲ್ಲಿ ಅಧಿಕೃತವಾಗಿ ಆಯ್ಕೆಗೊಂಡು ಹೆಸರು ಮಾಡಿರುವ ಸ್ವಸ್ತಿಕ್ ಎಂಟರ್ಟೈನ್ಮೆಂಟ್ ಕೊಟ್ಟುಕತ್ತೀರ ಯಶೋಧಾ ಪ್ರಕಾಶ್ ನಿರ್ದೇಶನದ ‘ಕಂದೀಲು’ ಕನ್ನಡ ಸಿನಿಮಾ 15ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ.

ಫೆ.29 ರಿಂದ ಮಾ.7ರ ವರೆಗೆ ಬೆಂಗಳೂರಿನ ಒರಿಯಾನ್ ಮಾಲ್‌ನಲ್ಲಿ ನಡೆಯುವ ಚಲನಚಿತ್ರೋತ್ಸವದ ಕನ್ನಡ ಸ್ಪರ್ಧಾತ್ಮಕ ವಿಭಾಗದಲ್ಲಿ ಪ್ರದರ್ಶನಗೊಳ್ಳಲಿದೆ.

ಮೊದಲನೆಯ ನಿರ್ದೇಶನದ ‘ರಂಗ ಪ್ರವೇಶ’ ಕೊಡಗಿನ ಕನ್ನಡ ಸಿನಿಮಾದ ಮೊದಲನೆಯ ನಿರ್ದೇಶಕಿ ಎಂಬ ಹೆಗ್ಗಳಿಕೆ ಕೊಟ್ಟುಕತ್ತೀರ ಯಶೋಧ ಪ್ರಕಾಶ್ ಅವರದ್ದು. ಅವರ ನಿರ್ದೇಶನ ಮತ್ತು ನಿರ್ಮಾಣದಲ್ಲಿ ಮೂಡಿ ಬಂದಿರುವ 2ನೇ ಚಿತ್ರ ‘ಕಂದೀಲು’. ಈಗಾಗಲೇ ಮಾನ್ಯತೆ ಪಡೆದಿರುವ ಎರಡು ಉತ್ಸವಗಳಿಗೆ ಆಯ್ಕೆಯಾಗಿರುವುದು ಕೊಡಗಿಗೆ ಹೆಮ್ಮೆ. ಈ ಬಾರಿಯ ಚಿತ್ರೋತ್ಸವದ ಕರ್ನಾಟಕದಿಂದ ಸುಮಾರು 15 ಚಿತ್ರಗಳು ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದು, ಯಶೋಧಾ ಪ್ರಕಾಶ್ ಕೊಟ್ಟುಕತ್ತಿರ ಒಬ್ಬರೇ ಮಹಿಳಾ ನಿರ್ದೇಶಕಿಯಾಗಿರುವುದು ವಿಶೇಷ.ವಿಭಿನ್ನ ಕಥಾಹಂದರ: ವಿಭಿನ್ನ ಕಥಾ ಹಂದರದ ‘ಕಂದೀಲು’ ಚಿತ್ರದ ಮುಖ್ಯಪಾತ್ರದಲ್ಲಿ ಪ್ರಭಾಕರ್ ಬಿ.ಕುಂದರ, ವಿನಿತಾ ರಾಜೇಶ್, ಗುರುತೇಜಸ್, ಚಂದ್ರಕಾಂತ್ ಕೋಟುಪಾಡಿ, ವೆಂಕಟೇಶ್‌ಪ್ರಸಾದ್, ಹರಿಣಿ ವಿಜಯ್, ರಮೇಶ್‌ ಕೂಡ್ಲು, ಬಸವರಾಜ್, ಆಡುಗುಡಿ ಶ್ರೀನಿವಾಸ್, ಮಂಜುನಾಥ್, ಶಿವಕುಮಾರ್, ಹನುಮಂತ, ಜಿ.ಸಿ.ಪರಮೇಶ್ ಗೂಗರದೊಡ್ಡಿ, ದೊಡ್ಡಣ್ಣ, ಬಂಗಾರ ಶೆಟ್ಟಿ ಮುದುವಾಡಿ, ರತ್ನಾಕುಮಾರಿ, ರೋಹಿಣಿ, ಬಾಲ ನಟಿಯಾಗಿ ಈರಮಂಡ ಕುಷಿ ಕಾವೇರಮ್ಮ ಅಭಿನಯಿಸಿದ್ದಾರೆ.

ಶ್ರೀ ಸುರೇಶ್ ಸಂಗೀತ, ಪಿ.ವಿ.ಆರ್.ಸ್ವಾಮಿ ಛಾಯಾಗ್ರಹಣ ಚಿತ್ರಕ್ಕಿದ್ದು, ಕಥೆ, ಸಂಕಲನ, ಸಂಭಾಷಣೆ ಎನ್.ನಾಗೇಶ್, ಚಿತ್ರಕಥೆ ಸ.ಹರೀಶ್ ಹಾಗೂ ಎನ್.ನಾಗೇಶ್ ಒದಗಿಸಿದ್ದಾರೆ. ಪ್ರಸನ್ನ ಪನಕನಹಳ್ಳಿ, ನಾಗರಾಜ್ ಡಿಕ್ಕಿ, ಇತಿಹಾಸ್ ಶಂಕರ್, ಕಲರಿಂಗ್ ಬುಟ್ಟಂಡ ನಿಖಿಲ್ ಕಾರ್ಯಪ್ಪ, ಕಲಾ ನಿರ್ದೇಶನ ಚೇತನ್ ಕೆಂಕೆರೆ, ಮೇಕಪ್ ಶಿವು, ಕಾಸ್ಟ್ಯೂಮ್‌ ಡಿಸೈನರ್ ಸುಧಾ ಪ್ರೊಡಕ್ಸನ್ ಟೀಮ್ ಮೂರ್ತಿ, ಲೈಟಿಂಗ್ ಟೀಮ್ ಎಚ್‌ಎಸ್‌ಎಂ ಸಿನಿ ಸರ್ವಿಸ್, ಪೋಸ್ಟ್ ಪ್ರೊಡಕ್ಷನ್ ರಾಷ್ಟ್ರಕ್ ಮಿಡಿಯಾ ಸೆಲ್ಯೂಷನ್, ಪೋಸ್ಟ್ ಡಿಸೈನರ್ ದೇವು, ಪ್ರೊಡಕ್ಷನ್ ಡಿಸೈನರ್ ಪಿವಿಆರ್ ಸ್ವಾಮಿ ನಿರ್ವಹಿಸಿದ್ದಾರೆ. ಕನಕಪುರದ ಗೂಗಾರೇದೊಡ್ಡಿ ಮತ್ತಿತರ ಊರುಗಳಲ್ಲಿ ‘ಕಂದೀಲು’ ಚಿತ್ರೀಕರಣಗೊಂಡಿದೆ.

ಬಡ ರೈತ ಕುಟುಂಬದಲ್ಲಿ ಆಘಾತ ಉಂಟಾದಾಗ ಆ ಸಂಕಷ್ಟದ ದಿನಗಳನ್ನು ಚಿತ್ರದಲ್ಲಿ ಮನೋಜ್ಞವಾಗಿ ತೋರಿಸಲಾಗಿದೆ.

Share this article