ಬೇಡಿಕೆ ಈಡೇರಿಸದಿದ್ದರೆ ಮತದಾನ ಬಹಿಷ್ಕಾರ

KannadaprabhaNewsNetwork | Published : Feb 24, 2024 2:36 AM

ಸಾರಾಂಶ

ರಾಜ್ಯದ ಎಲ್ಲ ವಿಕಲಚೇತನರ ಮನೆಯ ಬಾಗಿಲಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಎಲ್ಲ ಯೋಜನೆಗಳನ್ನು ತಲುಪಿಸುವ ಕಾರ್ಯ ಮಾಡುತ್ತಿದ್ದೇವೆ. ಇದುವರೆಗೂ ಯಾವುದೇ ಮೂಲ ಸೌಕರ್ಯಗಳಿಲ್ಲದಿದ್ದರೂ ಕಾರ್ಯ ನಿರ್ವಹಿಸುತ್ತಿದ್ದೇವೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ರಾಜ್ಯದಲ್ಲಿರುವ ಗ್ರಾಮೀಣ, ನಗರ ಪುನರ್ವಸತಿ ಕಾರ್ಯಕರ್ತರ ಹಾಗೂ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರನ್ನು ಖಾಯಂಗೊಳಿಸುವುದು ಮತ್ತು ಈ ಸೇವಾ ಅವಧಿಯನ್ನು ವಿವಿಧ ನೇಮಕಾತಿಗಳಲ್ಲಿ ಆದ್ಯತೆ ಜತೆಗೆ ಮುಂಬಡ್ತಿಗೆ ಪರಿಗಣಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಶುಕ್ರವಾರ ಕರ್ನಾಟಕ ಎಂಆರ್‌ಡಬ್ಲ್ಯು, ವಿಆರ್‌ಡಬ್ಲ್ಯು ಹಾಗೂ ಯುಆರ್‌ಡಬ್ಲ್ಯು ಗೌರವಧನ ಕಾರ್ಯಕರ್ತರ ಸಂಘದ ನೇತೃತ್ವದಲ್ಲಿ ವಿಕಲಚೇತನರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ನಗರದ ಡಾ.ಅಂಬೇಡ್ಕರ ಉದ್ಯಾನದಿಂದ ಪ್ರತಿಭಟನಾ ರ್‍ಯಾಲಿ ಆರಂಭಿಸಿ ಜಿಲ್ಲಾಧಿಕಾರಿ ಕಚೇರಿವರೆಗೆ ತಮ್ಮ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದರು. ನಂತರ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಕುಳಿತ ಪ್ರತಿಭಟನಾಕಾರರು, ರಾಜ್ಯದಲ್ಲಿ 6860 ಜನ ವಿಕಲಚೇತನರ ಕಾರ್ಯಕರ್ತರುಗಳು 2008 ರಿಂದ ಗೌರವಧನ ಆಧಾರದಲ್ಲಿ ಸೇವೆ ಸಲ್ಲಿಸಿಸುತ್ತಿದ್ದಾರೆ. ರಾಜ್ಯದ ಎಲ್ಲ ವಿಕಲಚೇತನರ ಮನೆಯ ಬಾಗಿಲಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಎಲ್ಲ ಯೋಜನೆಗಳನ್ನು ತಲುಪಿಸುವ ಕಾರ್ಯ ಮಾಡುತ್ತಿದ್ದೇವೆ. ಇದುವರೆಗೂ ಯಾವುದೇ ಮೂಲ ಸೌಕರ್ಯಗಳಿಲ್ಲದಿದ್ದರೂ ಕಾರ್ಯ ನಿರ್ವಹಿಸುತ್ತಿದ್ದೇವೆ. ನಮ್ಮ ಶ್ರಮಕ್ಕೆ ತಕ್ಕ ವೇತನ ನೀಡದೆ ಸರ್ಕಾರಗಳು ವಂಚನೆ ಮಾಡುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ವಿಷಯವಾಗಿ ಹಲವು ಭಾರಿ ಸಂಬಂಧಿಸಿದ ಸಚಿವರಿಗೆ ಹಾಗೂ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ 2024 ರ ಲೋಕಸಭಾ ಚುನಾವಣೆ ಸಮಯದಲ್ಲಿ ಜಿಲ್ಲೆಯಲ್ಲಿನ ವಿಕಲಚೇತನರ ಪುನರ್ವಸತಿ ಕಾರ್ಯಕರ್ತರು ಹಾಗೂ ಅವರ ಕುಟುಂಬಸ್ಥರು ಸೇರಿದಂತೆ ಸುಮಾರು 80 ಸಾವಿರ ಜನರು ಮತದಾನ ಬಹಿಷ್ಕರಿಸಲು ನಿರ್ಧರಿಸಿದ್ದೇವೆ ಎಂದರು ಎಚ್ಚರಿಸಿದರು.

ಸರ್ಕಾರಿ ಅನುದಾನಗಳಲ್ಲಿ ಶೇ.5 ರಷ್ಟು ಮೀಸಲು ಅನುದಾನದಲ್ಲಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ಹಾಗೂ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರಿಗೆ ಟಿಎ, ಡಿಎ ನೀಡಲು ಕ್ರಮಕೈಗೊಳ್ಳಬೇಕು. ರಾಜ್ಯದಲ್ಲಿರುವ ಎಲ್ಲ ವಿವಿಧ ವಿಕಲಚೇತನರಿಗೆ ನೇಮಕಾತಿ ಮತ್ತು ಸರ್ಕಾರಿ ಸೌಲಭ್ಯಗಳಲ್ಲಿ ಸಮಾನ ಮೀಸಲಾತಿ ನೀಡಬೇಕು. ರಾಜ್ಯದಲ್ಲಿರುವ ಗ್ರಾಪಂಗಳಿಗೆ ವಿವಿಧ ಹುದ್ದೆಗಳ್ನು ನೇರ ನೇಮಕಾತಿ ಮಾಡುವಾಗ ವಿಕಲಚೇತನರಿಗೆ ಆದ್ಯತೆ ನೀಡಬೇಕು ಮತ್ತು ಸರ್ಕಾರಿ ನೌಕರರ ಸವಲತ್ತುಗಳನ್ನು ಕಲ್ಪಿಸಬೇಕು. ಮಹಾರಾಷ್ಟ್ರ ಮಾದರಿಯಲ್ಲಿ ವಿಕಲಚೇತನರಿಗೆ ಪ್ರತ್ಯೇಕ ಸಚಿವಾಲಯ ಮಾಡಬೇಕು. ಸೇವಾ ಅವಧಿಯಲ್ಲಿ ಮರಣ ಹೊಂದಿದಲ್ಲಿ ₹5 ಲಕ್ಷದವರೆಗೆ ಸಹಾಯಧನ ಹೆಚ್ಚಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.

Share this article