ಬಿಎಸ್‌ವೈ ಅಭಿಮಾನೋತ್ಸವ ಕಾರ್ಯಕ್ರಮದ ಹಿನ್ನಲೆ ಪೆಂಡಾಲ್ ನಿರ್ಮಾಣದ ಪೂರ್ವಭಾವಿಯಾಗಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಗೋಪೂಜೆ ನೆರವೇರಿಸಿದರು.
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ 50 ವರ್ಷಗಳ ಸುದೀರ್ಘ ರಾಜಕೀಯ ಜೀವನ ಹಾದಿ ಸವೆಸಿದ ಹಿನ್ನಲೆ ಚಿತ್ರದುರ್ಗದಲ್ಲಿ ಹಮ್ಮಿಕೊಳ್ಳಲಾದ ಬಿಎಸ್‌ವೈ ಅಭಿಮಾನೋತ್ಸವಕ್ಕೆ ರಾಜ್ಯದ ವಿವಿಧ ಮೂಲೆಗಳಿಂದ 10 ಲಕ್ಷಕ್ಕೂ ಅಧಿಕ ಪ್ರಮಾಣದಲ್ಲಿ ಜನತೆ ಪಾಲ್ಗೊಳ್ಳಲಿದ್ದಾರೆ ಎಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಸಂಸದ ಗೋವಿಂದ ಕಾರಜೋಳ ಹೇಳಿದರು.
ಬಿಎಸ್‌ವೈ ಅಭಿಮಾನೋತ್ಸವದ ಹಿನ್ನಲೆ ಭಾನುವಾರ ಪೆಂಡಾಲ್ ಪೂಜೆ ನೆರವೇರಿಸಿದ ನಂತರ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕರ್ನಾಟಕಕ್ಕೆ ಯಡಿಯೂರಪ್ಪ ಅವರ ಕೊಡುಗೆ ಅಪಾರ. ರಾಜ್ಯದಾದ್ಯಂತ ಅವರು ಪಕ್ಷಾತೀತ ಅಭಿಮಾನಿಗಳ ಹೊಂದಿದ್ದಾರೆ. ಎಲ್ಲ ಅಭಿಮಾನಿಗಳ ಪರವಾಗಿ ಗೌರವಿಸುವ ಕೆಲಸ ಮಾಡಲಾಗುತ್ತಿದೆ. ನಭೂತೋ ನ ಭವಿಷ್ಯತ್ ಎನ್ನುವ ರೀತಿ ಕಾರ್ಯಕ್ರಮ ಮಾಡ್ತೀವಿ. ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾರ್ಯಕ್ರಮ ಉದ್ಘಾಟನೆಗೆ ಆಗಮಿಸಲಿದ್ದಾರೆ. ರಾಜ್ಯದ ಭೀಮಾ ನದಿಯಿಂದ ಕಾವೇರಿವರೆಗಿನ ಜನತೆ ಭಾಗವಹಿಸುವರು ಎಂದರು.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ವಿಜಯೇಂದ್ರ ಮಾತನಾಡಿ, ಯಡಿಯೂರಪ್ಪನವರ 50 ವರ್ಷದ ಸಾರ್ಥಕ ಸೇವೆ ಹಿನ್ನೆಲೆ ಅಭಿಮಾನಿಗಳಿಂದ ಸನ್ಮಾನಿಸುವ ಕಾರ್ಯಕ್ರಮ ಇದಾಗಿದೆ. ಕಾರ್ಯಕ್ರಮ ತಂಬಾ ವಿಶೇಷವಾಗಿರುತ್ತೆ. ಎಲ್ಲರೂ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ವಿನಂತಿಸಿದರು.
ಇಂದಿನ ಯುವ ರಾಜಕಾರಣಿಗಳಿಗೆ ಹಾಗೂ ಯುವ ಪೀಳಿಗೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದಾರಿ ದೀಪವಾಗಿದ್ದಾರೆ. ಅವರ 50 ವರ್ಷದ ರಾಜಕೀಯ ಜೀವನ ಬೇರೆಯವರಿಗೆ ಮಾರ್ಗದರ್ಶನವಾಗಬೇಕಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.
ಯಡಿಯೂರಪ್ಪ ಅಂದರೆ ಹೋರಾಟಗಳಿಗೆ ಅವರೊಂದು ಶಕ್ತಿ ಎಂದೇ ಕರೆಯಲಾಗುತ್ತದೆ. ಜನ ಸೇವೆಗಾಗಿಯೇ ತಮ್ಮ ಜೀವನನ್ನೇ ಮುಡುಪಾಗಿ ಇಟ್ಟಿದ್ದಾರೆ. ದಲಿತರು, ಪರಿಶಿಷ್ಟ ಜಾತಿ ಮತ್ತು ಪಂಗಡ, ಮಹಿಳೆಯರಿಗೆ ಧ್ವನಿಯಾಗಿ ಕೆಲಸವನ್ನು ಮಾಡಿದ್ದಾರೆ. 50 ವರ್ಷ ಬಡವರ ಪರವಾಗಿ ಕೆಲಸವನ್ನು ಮಾಡಿದ್ದಾರೆ. ಸೈಕಲ್ ಮೇಲೆ ರಾಜ್ಯ ಪ್ರವಾಸ ಮಾಡಿ, ಪಕ್ಷವನ್ನು ಕಟ್ಟಿ ಬೆಳೆಸಿದ ಅವರ ಹೋರಾಟ ಮುಂದಿನ ಪೀಳಿಗೆಗೆ ಪ್ರೇರಣೆಯಾಗಲಿ ಎಂದರು.
ವಿಧಾನ ಸಭೆ ವಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ಚಿತ್ರದುರ್ಗದ ಕಾರ್ಯಕ್ರಮ ಒಂದು ರೀತಿ ತಾಯಿ ಆಗಿ ಕಾರ್ಯನಿರ್ವಹಿಸಬೇಕು. ಎಲ್ಲರನ್ನೂ ಸಂತೈಸಿ, ಸಮಾಧಾನ ಮಾಡಿ ಕಳಿಸುವ ಕೆಲಸ ಆಗಬೇಕು. ಕಾರ್ಯಕ್ರಮಕ್ಕೆ ಬಂದವರಿಗೆ ಎಲ್ಲಾ ರೀತಿಯ ಸೌಕರ್ಯ ಮಾಡಿಕೊಡಬೇಕು. ಹಾಗಾಗಿ ಎಲ್ಲಾ ತಯಾರಿಗಳನ್ನು ಕಾರ್ಯಕರ್ತರು ನಿಂತು ಮಾಡಬೇಕು. ಯಡಯೂರಪ್ಪನವರ ಸಾಧನೆ ಬಿಂಬಿಸುವ ಕಾರ್ಯಕ್ರಮ ಇದಾಗಬೇಕು. ಉತ್ತಮ ಮುಹೂರ್ತದಲ್ಲಿ ಕಾರ್ಯಕ್ರಮದ ಗುದ್ದಲಿ ಪೂಜೆ ಮಾಡಿದ್ದೇವೆ. ಕಾರ್ಯಕ್ರಮದ ಮೂಲಕ ಯಡಿಯೂರಪ್ಪ ಅವರ ಸಾಧನೆಯ ರಾಜ್ಯದ ಜನತೆಗೆ ತಿಳಿಸುವ ಪ್ರಮುಕ ಆಶಯ ಹೊಂದಲಾಗಿದೆ. ಪಕ್ಷಾತೀತವಾಗಿ ಮಾಡುವ ಕಾರ್ಯಕ್ರಮ ಎಂದರು.
ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವ ಕಾಂಗ್ರೆಸ್‍ಗೆ ಶಕ್ತಿ ನೀಡಿದಂತೆ, ಚಿತ್ರದುರ್ಗದ ಈ ಅಭಿಮಾನೋತ್ಸವ ಬಿಜೆಪಿಯನ್ನು ಮತ್ತೆ ಅಧಿಕಾರದ ಗದ್ದುಗೆಗೆ ಏರಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, ಯಡಿಯೂರಪ್ಪ ಪಕ್ಷ ಕಟ್ಟುವ ಮುನ್ನ ಬಿಜೆಪಿಗೆ ಮತದಾರರೇ ಇರಲಿಲ್ಲ. ಜನ ಸಂಘಕ್ಕೆ ರಾಜ್ಯದಲ್ಲಿ ಒಂದೇ ಒಂದು ಓಟು ಕೂಡಾ ಬರುತ್ತಿರಲಿಲ್ಲ. ಹಿಮಾಲಯದಿಂದ ಕನ್ಯಾಕುಮಾರಿ ವರೆಗೆ ಪಕ್ಷ ಕಟ್ಟಿದ್ದು ಯಡಿಯೂರಪ್ಪ. ದಕ್ಷಿಣ ಭಾರತದಲ್ಲಿ ಸೈಕಲ್ ತುಳಿದು ಬಿಎಸ್‌ವೈ ಪಕ್ಷ ಕಟ್ಟಿದ್ದು ಅಂಥ ಧೀಮಂತ ನಾಯಕನ ಕಾರ್ಯಕ್ರಮ ಮಾಡ್ತಿರೋದು ನಮಗೆ ಹೆಮ್ಮೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ನಾಯಕರಾದ ಜಿ.ಎಂ.ಸಿದ್ದೇಶ್ವರ, ಬಿ.ಸಿ.ಪಾಟೀಲ್, ಎ.ನಾರಾಯಣಸ್ವಾಮಿ, ಎನ್.ರವಿಕುಮಾರ್, ರೇಣುಕಾಚಾರ್ಯ, ಮುನಿರತ್ನ, ಎನ್.ಮಹೇಶ್, ಹರತಾಳು ಹಾಲಪ್ಪ, ಕೆ.ಎಸ್.ನವೀನ್, ರೂಪಾಲಿ ನಾಯ್ಕ್, ಸಂಜಯ್ ಪಾಟೀಲ್, ಮಂಜುಳಾ, ಎಸ್.ಕೆ.ಬಸವರಾಜನ್, ಪ್ರೀತಂ ಗೌಡ್ರು, ಹರೀಶ್ ಪೂಂಜಾ, ಎಂ.ಚಂದ್ರಪ್ಪ, ದೊಡ್ಡನಗೌಡ ಪಾಟೀಲ್, ಬಸವರಾಜ ದಡೆಸೂಗುರು, ಧನಂಜಯ ಸರ್ಜಿ, ಶಿವಯೋಗಿಸ್ವಾಮಿ, ಕೃಷ್ಣನಾಯ್ಕ್, ಕುಡಚಿ ರಾಜೀವ್, ತಮ್ಮೇಶ್ ಗೌಡ್ರು, ಲಿಂಗಮೂರ್ತಿ, ಜ್ಯೊತಿ ಗಣೇಶ್, ವೈ.ಎ.ನಾರಾಯಣಸ್ವಾಮಿ, ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ಬಿಜೆಪಿ ಮುಖಂಡ ಉಮೇಶ್ ಕಾರಜೋಳ, ವಿಭಾಗ ಸಹಾ ಪ್ರಬಾರಿ ಎ.ಮುರಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಧುರಿ ಗೀರೀಶ್, ಡಾ.ಪಿ.ಎಂ.ಮಂಜುನಾಥ್, ವೆಂಕಟೇಶ್ ಯಾದವ್, ವೀರಶೈವ ಬ್ಯಾಂಕ್ ಅಧ್ಯಕ್ಷ ಪಟೇಲ್ ಶಿವಕುಮಾರ್, ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಿದ್ದಾಪುರದ ಸುರೇಶ್, ಮಾಜಿ ಪ್ರಧಾನ ಕಾರ್ಯದರ್ಶಿಗಳಾದ ಸಂಪತ್ ಕುಮಾರ್, ಜಿಲ್ಲಾ ವಕ್ತಾರ ನಾಗರಾಜ್ ಬೇದ್ರೇ, ಎಸ್.ಸಿ.ಮೋರ್ಚಾದ ಅಧ್ಯಕ್ಷ ಪರಶುರಾಮ್, ಗ್ರಾಮಾಂತರ ಅಧ್ಯಕ್ಷ ನಾಗರಾಜ್, ದಗ್ಗೆ ಶಿವಪ್ರಕಾಶ್ ಮುಂತಾದವರು ಪಾಲ್ಗೊಂಡಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.