ಕಾಫಿನಾಡಿನಲ್ಲಿ ಧರೆಗಿಳಿದ ಜಾನಪದ ಸಾಂಸ್ಕೃತಿಕ ಲೋಕ

KannadaprabhaNewsNetwork |  
Published : Apr 27, 2026, 01:15 AM IST
ಸಸ | Kannada Prabha

ಸಾರಾಂಶ

ಚಿಕ್ಕಮಗಳೂರುಎತ್ತಿನ ಗಾಡಿ ಮೆರವಣಿಗೆ, ಜಾನಪದ ಕಲಾ ತಂಡಗಳ ಕಲಾ ಪ್ರದರ್ಶನದೊಂದಿಗೆ ಇಡೀ ಜಾನಪದ ಸಾಂಸ್ಕೃತಿಕ ಲೋಕ ಕಾಫಿನಾಡಿನ ಚಿಕ್ಕಮಗಳೂರಿನಲ್ಲಿ ಭಾನುವಾರ ಧರೆಗಿಳಿದಿತ್ತು.

- ನಗರದ ಕುವೆಂಪು ಕಲಾಮಂದಿರದಲ್ಲಿ ಆರನೇ ಜಾನಪದ ಸಮ್ಮೇಳನ ಉದ್ಘಾಟನೆ । ಸಮ್ಮೇಳನಾಧ್ಯಕ್ಷರ ಎತ್ತಿನಗಾಡಿ ಮೆರವಣಿಗೆ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಎತ್ತಿನ ಗಾಡಿ ಮೆರವಣಿಗೆ, ಜಾನಪದ ಕಲಾ ತಂಡಗಳ ಕಲಾ ಪ್ರದರ್ಶನದೊಂದಿಗೆ ಇಡೀ ಜಾನಪದ ಸಾಂಸ್ಕೃತಿಕ ಲೋಕ ಕಾಫಿನಾಡಿನ ಚಿಕ್ಕಮಗಳೂರಿನಲ್ಲಿ ಭಾನುವಾರ ಧರೆಗಿಳಿದಿತ್ತು.

ಭಾನುವಾರ ಕರ್ನಾಟಕ ಜಾನಪದ ಪರಿಷತ್ ನಿಂದ ನಗರದ ಕುವೆಂಪು ಕಲಾಮಂದಿರದಲ್ಲಿ 6 ನೇ ಜಿಲ್ಲಾ ಜಾನಪದ ಸಮ್ಮೇಳನ ಜಾನಪದ ಲೋಕವನ್ನೇ ಅನಾವರಣಗೊಳಿಸಿ ಅದ್ಧೂರಿಯಾಗಿ ಜರುಗಿತು.

ಸಮ್ಮೇಳನಾಧ್ಯಕ್ಷರು, ಉದ್ಘಾಟಕರು, ಸಮ್ಮೇಳನದಲ್ಲಿ ಭಾಗವಹಿಸಿದ್ದ ಗಣ್ಯರ ಭಾಷಣದ ವೇಳೆ ಜಾನಪದ ಗೀತೆಗಳನ್ನು ಹಾಡುವ ಮೂಲಕ ರಂಜಿಸಿದರು. ಜಾನಪದ ಕಲೆ, ಕಲೆ, ಸಾಹಿತ್ಯ, ಸಂಸ್ಕೃತಿ, ರೈತ ಜಾನಪದ, ಮಹಿಳಾ ಜಾನಪದ, ಜಾನಪದ ಜಗುಲಿ ಕುರಿತ ವಿಚಾರಗೋಷ್ಠಿಗಳು, ಜಾನಪದ ಗೀತೆಗಳ ಗಾಯನ, ನೃತ್ಯ ನೋಡುಗರ ಗಮನ ಸೆಳೆದವು. ಕಲಾಮಂದಿರದಲ್ಲಿ ಜಾನಪದರು ಬಳಸುತ್ತಿದ್ದ ಅಪರೂಪದ ಪರಿಕರಗಳ ಪ್ರದರ್ಶನ ಏರ್ಪಡಿಸಲಾಗಿತ್ತು.

ಬೆಳಗ್ಗೆ ಆಶಾಕಿರಣ ಅಂಧ ಮಕ್ಕಳ ಶಾಲೆ ಅಧ್ಯಕ್ಷ ಡಾ.ಜೆ.ಪಿ.ಕೃಷ್ಣೇಗೌಡ ರಾಷ್ಟ್ರ ಧ್ವಜಾರೋಹಣ, ಕರ್ನಾಟಕ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಪ್ರೋ.ಹಿ.ಚಿ. ಬೋರಲಿಂಗಯ್ಯ ನಾಡ ಧ್ವಜಾರೋರಣ, ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಬಿ.ಜಿ.ಸುರೇಶ್ ಜಾನಪದ ಪರಿಷತ್ ಧ್ವಜಾರೋಹಣ ನೇರವೇರಿಸಿದರು.

ಸಮ್ಮೇಳನಾಧ್ಯಕ್ಷರ ಎತ್ತಿನಗಾಡಿ ಮೆರವಣಿಗೆ:ಭಾನುವಾರ ತಾಲೂಕು ಕಚೇರಿ ಆವರಣದಿಂದ ವಿವಿಧ ಜಾನಪದ ಕಲಾತಂಡ ಮತ್ತು ಪೂರ್ಣ ಕುಂಭದೊಂದಿಗೆ ಸಮ್ಮೇಳನಾಧ್ಯಕ್ಷೆ ಮಾಜಿ ಸಚಿವೆ, ಹಿರಿಯ ಜಾನಪದ ಕಲಾವಿದೆ ಡಾ.ಮೋಟಮ್ಮ ಅವರನ್ನು ಜೋಡೆತ್ತಿನ ಗಾಡಿಯಲ್ಲಿ ಮೆರವಣಿಗೆ ಮೂಲಕ ಕುವೆಂಪು ಕಲಾಮಂದಿರಕ್ಕೆ ಕರೆತರಲಾಯಿತು. ವೀರಗಾಸೆ, ಡೊಳ್ಳುಕುಣಿತ, ಪಟಕುಣಿತ, ದೇವರ ಅಡ್ಡೆ ಸೇರಿದಂತೆ ಜಾನಪದ ಕಲಾತಂಡಗಳ ನೃತ್ಯಮೆರವಣಿಗೆಗೆ ಸಾಥ್‌ ನೀಡಿದವು. ಮಕ್ಕಳಿಂದ ನಡೆದ ವೀರಗಾಸೆ ಕುಣಿತ ನೋಡುಗರ ಗಮನ ಸೆಳೆಯಿತು.

ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಮಾಜಿ ಸಚಿವ ಬಿ.ಬಿ.ನಿಂಗಯ್ಯ ಚಾಲನೆ ನೀಡಿ ಗ್ರಾಮೀಣ ವಾದ್ಯಗಳ ಲಯಕ್ಕೆಹೆಜ್ಜೆ ಹಾಕಿದರು.ಇವರೊಂದಿಗೆ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಜಿ.ಜಿ.ಸುರೇಶ್, ವೈದ್ಯ ಡಾ.ಜೆ.ಪಿ.ಕೃಷ್ಣೇಗೌಡ ಸೇರಿದರು. ನೆರೆದಿದ್ದವರು ಮಕ್ಕಳು ಹಿರಿಯರು ಕುಣಿದು ಕುಪ್ಪಳಿಸಿದರು. ಸಮ್ಮೇಳನಾಧ್ಯಕ್ಷೆ ಡಾ.ಮೋಟಮ್ಮ ಸಾಂಪ್ರದಾಯಿಕ ಧಿರಿಸಿನಲ್ಲಿ ಗಮನ ಸೆಳೆದರು. -- ಬಾಕ್ಸ್--

ಸಮ್ಮೇಳನಾಧ್ಯಕ್ಷರನ್ನಾಗಿ ಮೋಟಮ್ಮ ಆಯ್ಕೆ ಅಭಿನಂದನೀಯ: ತಮ್ಮಯ್ಯ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಸಮ್ಮೇಳನಾಧ್ಯಕ್ಷರಾದ ಮೋಟಮ್ಮ ಅವರನ್ನು ಕಂಡರೆ ಅವರು ರಾಜಕಾರಣಿ ಅನಿಸುವುದಿಲ್ಲ. ಅವರೊಬ್ಬ ಹಿರಿಯ ಜಾನಪದ ಕಲಾವಿದೆ. ಸಾಂಸ್ಕೃತಿಕ ರಾಯಬಾರಿಯಾಗಿದ್ದಾರೆ. ಸಮ್ಮೇಳನಾಧ್ಯಕ್ಷರನ್ನಾಗಿ ಅವರನ್ನು ಮಾಡಿರುವುದು ಅಭಿನಂದನೀಯ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.

ಭಾನುವಾರ ನಗರದ ಕುವೆಂಪು ಕಲಾಮಂದಿರದಲ್ಲಿ ಜಿಲ್ಲಾ ಜಾನಪದ ಪರಿಷತ್ ನಿಂದ ಹಮ್ಮಿಕೊಂಡಿದ್ದ ಆರನೇ ಜಾನಪದ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ಇತಿಹಾಸದಲ್ಲಿ ಇದೆ ಮೊದಲ ಬಾರಿಗೆ ಶೋಷಿತ ಸಮುದಾಯದ ಮಹಿಳೆಯನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಮಾಡಿರುವುದು ಸಂತಸ ತಂದಿದೆ ಎಂದರು.ಜಾನಪದ ಕೇವಲ ಕಲೆಯಲ್ಲ, ಅದು ಜೀವನ ಕ್ರಮ, ರೈತರು ಮತ್ತು ಗ್ರಾಮೀಣ ಮಹಿಳೆಯರಿಂದ ಬೆಳೆದು ಬಂದಿರುವ ಜಾನಪದ ವನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು. ಜಾನಪದ ಮುಂದಿನ ಪೀಳಿಗೆಗೆ ಹಸ್ತಾಂತರಿಸಬೇಕು ಎಂದು ಹೇಳಿದರು.

ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಪ್ರೊ. ಹಿ.ಚಿ.ಬೋರಲಿಂಗಯ್ಯ ಮಾತನಾಡಿ, ಇಡೀ ದೇಶದಲ್ಲಿ ಅತ್ಯಂತ ಹೆಚ್ಚು ಜಾನಪದ ಕಲೆಗಳನ್ನು ಹೊಂದಿರುವ ರಾಜ್ಯ ನಮ್ಮದು. ಇಲ್ಲಿ 184 ಪ್ರಕಾರದ ಜಾನಪದ ಕಲೆಗಳಿವೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬೇರೆ ಬೇರೆ ರೀತಿಯ ಜಾನಪದ ಕಲೆಗಳಿವೆ ಎಂದು ತಿಳಿಸಿದರು.ಜಾನಪದ ಪರಿಷತ್ ಕಳೆದ 46 ವರ್ಷಗಳಿಂದ ದೇಶ ವಿದೇಶಗಳಲ್ಲಿ ಜಾನಪದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ಬೆಳೆಸುವ ಕೆಲಸ ಮಾಡುತ್ತಿದೆ. ಆದರೆ, ಜಾನಪದ ಕಲಾವಿದರನ್ನು 2ನೇ ದರ್ಜೆಯ ಕಲಾವಿದರಂತೆ ನಡೆಸಿಕೊಳ್ಳುತ್ತಿರುವುದು ವಿಷಾಧನೀಯ ಎಂದರು.

ಜಾನಪದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ಉಳಿದು, ಬೆಳೆಯಬೇಕಾದರೇ ಗ್ರಾಮೀಣ ಜಾನಪದ ಕಲಾವಿದರಿಗೆ ಕಲಾ ಪ್ರದರ್ಶನಕ್ಕೆ ನಗರಗಳಲ್ಲಿ ವೇದಿಕೆ ಕಲ್ಪಿಸಿಕೊಡಬೇಕು. ಮಾಸಾಶನ ನೀಡಬೇಕು ಎಂದರು.

ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಜಿ.ಬಿ.ಸುರೇಶ್ ಮಾತನಾಡಿ, ಜಾನಪದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪರಿಷತ್ ಜಿಲ್ಲಾ ಘಟಕದಿಂದ ಹೋಬಳಿ, ತಾಲೂಕು, ಜಿಲ್ಲಾ ಕೇಂದ್ರಗಳಲ್ಲಿ ನೂರಕ್ಕೂ ಹೆಚ್ಚು ಜಾನಪದ ಸಮ್ಮೇಳನವನ್ನು ಹಾಗೂ ೧೩೦ಕ್ಕೂ ಹೆಚ್ಚು ಜಾನಪದ ಕರ‍್ಯಕ್ರಮ ಮತ್ತು ತರಬೇತಿ ಶಿಬಿರ ನಡೆಸಲಾಗಿದೆ ಎಂದರು.ಪರಿಷತ್ತಿನ ಗೌರವಾಧ್ಯಕ್ಷ ಡಾ.ಜೆ.ಪಿ.ಕೃಷ್ಣೇಗೌಡ ಪ್ರಾಸ್ತಾವಿಕವಾಗಿ ಮಾತನಾಡಿ, ಜಗತ್ತಿನ ಎಲ್ಲಾ ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯ ಮೂಲಬೇರು ಜಾನಪದ. ಈ ನಿಟ್ಟಿನಲ್ಲಿ ಜಾನಪದವನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಬೇಕು ಎಂದು ಹೇಳಿದರು.

ಇದೇ ವೇಳೆ ಜಾನಪದ ಸಿರಿ ಸ್ಮರಣಿಕೆ ಬಿಡುಗಡೆಗೊಳಿಸಲಾಯಿತು. ಆಶ್ರಯ ಫೌಂಡೇಶನ್ ಸಂಸ್ಥಾಪಕಿ ವರ್ಷಾ, ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಲೋಕೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್ ಶೆಟ್ಟಿ, ಹಿರಿಯ ವೀರಗಾಸೆ ಕಲಾವಿದ ಡಾ. ಮಾಳೇನಹಳ್ಳಿ ಬಸಪ್ಪ, ಡಾ. ವಿನಾಯಕ್ ಸಿಂದಿಗೆರೆ, ಉದ್ಯಮಿ ನಂಜೇಶ್ ಬೆಣ್ಣೂರು, ಲಯನ್ಸ್ ಅಧ್ಯಕ್ಷ ಸಿ.ಎನ್.ಕುಮಾರ್, ಪರಿಷತ್ತಿನ ತಾಲೂಕು ಗೌರವಾಧ್ಯಕ್ಷೆ ಸುಮಾ ಪ್ರಸಾದ್ ಇದ್ದರು.

----ಬಾಕ್ಸ್-----

ಜಾನಪದ ನಮ್ಮ ಹಿರಿಯರ ಜೀವನ, ಆಚಾರ ವಿಚಾರಗಳ ಸಮ್ಮಿಲನ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಜಾನಪದ ಎಂದರೇ ನಮ್ಮ ಹಿರಿಯರ ಜೀವನ. ಅವರ ನಡೆ ನುಡಿ, ಆಚಾರ ವಿಚಾರಗಳ ಸಮ್ಮಿಲನ ಎಂದು ಸಮ್ಮೇಳನಾಧ್ಯಕ್ಷೆ ಹಾಗೂ ಹಿರಿಯ ಜಾನಪದ ಕಲಾವಿದೆ ಡಾ. ಮೋಟಮ್ಮ ಹೇಳಿದರು.

ಕುವೆಂಪು ಕಲಾಮಂದಿರದಲ್ಲಿ ಜಿಲ್ಲಾ ಜಾನಪದ ಪರಿಷತ್ ನಿಂದ ಹಮ್ಮಿಕೊಂಡಿದ್ದ ಆರನೇ ಜಿಲ್ಲಾ ಜಾನಪದ ಸಮ್ಮೇಳನಾಧ್ಯಕ್ಷೆಯಾಗಿ ಮಾತನಾಡಿದರು. ಜಾನಪದ ಉಳಿದು ಬೆಳೆಯ ಬೇಕಾದರೇ ಹೆತ್ತವರು ತಮ್ಮ ಮಕ್ಕಳಿಗೆ ಜಾನಪದ ಕಲಿಸಬೇಕು. ಶಾಲಾ ಕಾಲೇಜುಗಳಲ್ಲಿ ಜಾನಪದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದರು.ಆಧುನಿಕ ಜಗತ್ತಿನಲ್ಲಿ ಪಾಶ್ಚಾತ್ಯ ಸಂಸ್ಕೃತಿ ಗೀಳಿನಿಂದ ನಮ್ಮ ನಡೆ, ನುಡಿ, ಆಚಾರ ವಿಚಾರ, ಆಹಾರ ಪದ್ಧತಿ ಎಲ್ಲಾವೂ ಬದಲಾಗಿದೆ. ಹಸೆ ಹಾಡುಗಳು, ಸೋಭಾನೆ ಪದಗಳು, ನಮ್ಮ ಹಿರಿಯರು ಮಾಡುತ್ತಿದ್ದ ನೈಸರ್ಗಿಕ, ಆರೋಗ್ಯಕ್ಕೆ ಪೂರಕವಾದ ಆಹಾರಗಳು, ಕೂಡು ಕುಟುಂಬ ಇಂದು ಕಣ್ಮರೆಯಾಗಿವೆ. ಕೆಮಿಕಲ್ ಬೆರೆಸಿ ಮಾಡಿದ ಬರ್ಗರ್‌, ಪಿಜ್ಜಾ, ಮನಸ್ಸು ಕೆರಳಿಸುವ ಗೀತೆಗಳು, ಪಾಶ್ಚಾತ್ಯ ಸಂಸ್ಕೃತಿ ಹರುಕು ಬಟ್ಟೆ, ಚಿಕ್ಕಪ್ಪ, ಚಿಕ್ಕಮ್ಮ, ಅತ್ತೆ ಮಾವ ಪದಗಳ ಬದಲಿಗೆ ಎಲ್ಲರಿಗೂ ಅನ್ವಯಿಸುವ ಆಂಟಿ, ಅಂಕಲ್ ಪದಗಳು. ಆ ಸಂಸ್ಕೃತಿ, ಸಂಸ್ಕಾರ ನಮಗೆ ಬೇಕಾ ಎಂದು ಪ್ರಶ್ನಿಸಿದರು. ಹೆತ್ತವರು ತಮ್ಮ ಮಕ್ಕಳಿಗೆ ನಮ್ಮ ಹಿರಿಯರ ಆಚಾರ, ವಿಚಾರ, ನಡೆ ನುಡಿ, ಸಂಸ್ಕೃತಿ, ಸಂಸ್ಕಾರ ಹಾಡು ಹಸೆ ಸಂಪ್ರದಾಯ ಕಲಿಸಬೇಕು. ಆಗ ಮಾತ್ರ ಜಾನಪದ ಉಳಿಯುತ್ತದೆ ಎಂದರು. ಇದೇ ವೇಳೆ ಗೆಳತಿಯರೊಂದಿಗೆ ಸೋಭಾನೆ ಪದಗಳನ್ನು ಹಾಡಿ ಸಭಿಕರನ್ನು ರಂಜಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆವಿಷ್ಕಾರಗಳತ್ತ ಹೆಜ್ಜೆ ಇಡಲು ಅವಕಾಶ ಸದ್ಬಳಸಿಕೊಳ್ಳಿ
ಜನರ ಆಶೋತ್ತರಗಳಿಗೆ ಪಂಚಾಯತ್‌ ವ್ಯವಸ್ಥೆ ದನಿಯಾಗಲಿ