ಗಜೇಂದ್ರಗಡ: ಪ್ರಾತಿನಿಧಿತ್ವ ಮತ್ತು ಅವಕಾಶ ವಂಚಿತವಾಗಿರುವ ಹಿಂದುಳಿದ ಸಮುದಾಯಗಳ ಅಭಿವೃದ್ಧಿಗೆ ಕಾಂತರಾಜ್ ವರದಿ ಬಿಡುಗಡೆಗೆ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತೇವೆ ಎಂದು ಕಾಂತರಾಜ ವರದಿ ಜಾರಿ ಸಮನ್ವಯ ಹೋರಾಟ ಸಮಿತಿ ತಾಲೂಕು ಘಟಕದ ಮುಖಂಡ ಎಂ.ಎಸ್. ಹಡಪದ ಹೇಳಿದರು.ಕಾಂತರಾಜ ವರದಿ ಬಿಡುಗಡೆಗೆ ಆಗ್ರಹಿಸಿ ಪಟ್ಟಣದಲ್ಲಿ ಅ. ೧೮ರಂದು ನಡೆಯುವ ಪ್ರತಿಭಟನೆ ಹಿನ್ನೆಲೆಯಲ್ಲಿ ಭಾನುವಾರ ಇಲ್ಲಿನ ವೀರಗಂಟಿ ಮಡಿವಾಳ ಮಾಚಿದೇವರ ಸಮುದಾಯ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಇಡೀ ದೇಶದಲ್ಲಿ ಮಂಡಲ ಆಯೋಗ ರಚನೆಯಾದ ಬಳಿಕ ಹಿಂದುಳಿದ ೨೭ ಪ್ರತಿಶತ ಮೀಸಲಾತಿಯನ್ನು ಜಾರಿಗೆ ಕೆಲ ಶಕ್ತಿಗಳ ಪ್ರಬಲ ವಿರೋಧದ ನಡುವೆ ಮೀಸಲಾತಿ ಅವಕಾಶ ಸಿಕ್ಕಿದೆ. ಆದರೆ ಸಿಕ್ಕ ಮೀಸಲಾತಿಯಲ್ಲಿ ಯಾರಿಗೆ ಎಷ್ಟು ಪ್ರಮಾಣದಲ್ಲಿ ಲಾಭ ಸಿಕ್ಕಿದೆ. ಅಭಿವೃದ್ಧಿಗೆ ಮೀಸಲಿಟ್ಟ ಹಣವು ಯಾವ ತಳ ಸಮುದಾಯಗಳಿಗೆ ಸಿಕ್ಕಿದೆ ಎನ್ನುವ ಮಾಹಿತಿ ಬಗ್ಗೆ ಸ್ಪಷ್ಟತೆಯಿಲ್ಲ. ಹಿಂದುಳಿದ ವರ್ಗ ಎಂದರೆ ಎಲ್ಲರೂ ಹಿಂದುಳಿದ ವರ್ಗ ಎನ್ನುತ್ತಿದ್ದಾರೆ. ಹೀಗಾಗಿ ಹಿಂದುಳಿದ ವರ್ಗದಲ್ಲಿ ಶೋಷಣೆಗೆ ಒಳಗಾದವರ ಅಂಕಿ ಸಂಖ್ಯೆ ಬಿಡುಗಡೆ ಅವಶ್ಯಕವಾಗಿದೆ. ಇಲ್ಲದಿದ್ದರೆ ಗುಂಪಿನಲ್ಲಿ ಗೋವಿಂದ ಎನ್ನುವಂತೆ ಹಿಂದುಳಿದ ವರ್ಗಗಳಲ್ಲಿನ ದೊಡ್ಡ ಸಮುದಾಯಗಳಿಗೆ ಲಾಭ ಲಭಿಸುತ್ತಿದೆ. ಹೀಗಾಗಿ ನಮಗೆ ಪ್ರಾತಿನಿಧಿತ್ವ ಮತ್ತು ಅವಕಾಶ ವಂಚಿತವಾಗಿರುವ ಪರಿಣಾಮ ವಿಧಾನಸಭೆ, ಲೋಕಸಭೆಯಲ್ಲಿ ತಳಸಮುದಾಯದಿಂದ ಇಂದಿಗೂ ಸಹ ಯಾರೂ ಆಯ್ಕೆಯಾಗಿಲ್ಲ. ಎಲ್ಲ ರಂಗಗಳಲ್ಲಿಯೂ ನಮ್ಮ ಹುಟ್ಟಿನ ಮೂಲವನ್ನು ನೋಡಿ ಅವಕಾಶ ಕೊಡಬೇಕಾದ ಸ್ಥಿತಿಯಿದ್ದು, ನಾವು ಹೆಸರಿಗೆ ಮಾತ್ರ ಲಿಂಗಾಯತರು, ಇಂದಿಗೂ ಲಿಂಗಾಯತರಲ್ಲಿನ ಒಳಪಂಗಡಗಳು ಮತ್ತು ಅಸ್ಪೃಶತೆ ಆಚರಣೆಯಿಂದ ಅವಮಾನಕ್ಕಿಡಾಗುವ ಸಮುದಾಗಳಾಗಿದ್ದೇವೆ. ಹೀಗಾಗಿ ಸರ್ಕಾರವು ಕಾಂತರಾಜು ವರದಿಯನ್ನು ಬಿಡುಗಡೆಗೊಳಿಸುವ ಮೂಲಕ ನಮಗೆ ನ್ಯಾಯ ನೀಡಲು ಮುಂದಾಗಬೇಕಿದೆ ಎಂದರು.
ಮಡಿವಾಳ ಮಾಚಿದೇವ ಸಮಾಜದ ಅಧ್ಯಕ್ಷ ದೇವಪ್ಪ ಮಡಿವಾಳರ ಮಾತನಾಡಿ, ಸಂವಿಧಾನ ಬದ್ಧವಾಗಿ ನಮಗೆ ಮೀಸಲಾತಿಯನ್ನು ಕಲ್ಪಿಸಲಾಗಿದೆ. ಅದರಂತೆ ಹಿಂದುಳಿದ ವರ್ಗಗಳಲ್ಲಿ ಯಾವ ಸಮುದಾಯ ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹೊಂದಿರುವ ಸ್ಥಾನಮಾನಗಳನ್ನು ತಿಳಿಯಲು ಕಾಂತರಾಜು ವರದಿ ಬಿಡುಗಡೆ ಅವಶ್ಯಕವಾಗಿದೆ ಎಂದರು.
ಈ ವೇಳೆ ಹಪಡಪ ಅಪ್ಪಣ್ಣ ಸಮಾಜದ ಅಧ್ಯಕ್ಷ ಚಿದಾನಂದಪ್ಪ ಹಡಪದ, ಕುಂಬಾರ ಸಮಾಜದ ಬಿ.ಎಂ.ಕುಂಬಾರ, ಮಹಾದೇವಪ್ಪ ಮಡಿವಾಳರ, ಮಂಜುನಾಥ ಹೂಗಾರ, ಶಿವಾನಂದ ಮಡಿವಾಳರ, ಕಳಕಪ್ಪ ಮಡಿವಾಳರ, ಪರಶುರಾಮ ಮಡಿವಾಳರ, ಮಂಜು ಮಡಿವಾಳರ ಇದ್ದರು.