ವಿಘ್ನೇಶ್ ಎಂ. ಭೂತನಕಾಡು ಕನ್ನಡಪ್ರಭ ವಾರ್ತೆ ಮಡಿಕೇರಿ ಐತಿಹಾಸಿಕ ಮಡಿಕೇರಿ ದಸರಾದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ನಗರದ ನಾಲ್ಕು ಶಕ್ತಿ ದೇವತೆಗಳ ‘ಕರಗ ಉತ್ಸವ’ ಸಾಂಪ್ರದಾಯಿಕ ಪೂಜಾ ವಿಧಿ ವಿಧಾನಗಳೊಂದಿಗೆ ನಗರ ಪ್ರದಕ್ಷಿಣೆ ಆರಂಭಿಸುವ ಮೂಲಕ ಮಡಿಕೇರಿ ದಸರಾಗೆ ಭಾನುವಾರ ವೈಭವದ ಚಾಲನೆ ದೊರೆಯಿತು. ನಗರದ ಶ್ರೀ ಕುಂದುರು ಮೊಟ್ಟೆ ಚೌಟಿ ಮಾರಿಯಮ್ಮ, ಶ್ರೀ ದಂಡಿನ ಮಾರಿಯಮ್ಮ, ಶ್ರೀ ಕಂಚಿ ಕಾಮಾಕ್ಷಿ ಹಾಗೂ ಶ್ರೀ ಕೋಟೆ ಮಾರಿಯಮ್ಮ ದೇವರ ಕರಗಗಳು ಒಂಬತ್ತು ದಿನಗಳ ಕಾಲ ನಗರದಲ್ಲಿ ಸಂಚಾರ ಮಾಡಲಿವೆ. ನಗರದ ಪಂಪಿನ ಕೆರೆಯ ಬಳಿ ಮಡಿಕೇರಿ ನಗರ ದಸರಾ ಸಮಿತಿ, ದಸರಾ ಉಪ ಸಮಿತಿಗಳು, ದಶಮಂಟಪ ಸಮಿತಿಯ ಪದಾಧಿಕಾರಿಗಳು, ಸಾರ್ವಜನಿಕ ಪ್ರಮುಖರು, ಜನಪ್ರತಿನಿಧಿಗಳು, ಅಧಿಕಾರಿಗಳು ನಾಲ್ಕು ಶಕ್ತಿ ದೇವತೆಗಳ ಕರಗಗಳಿಗೆ ಸಂಜೆ 6 ಗಂಟೆ ವೇಳೆಗೆ ಪೂಜೆ ಸಲ್ಲಿಸಿ, ನಾಡಿನ ಒಳಿತಿಗೆ ಪ್ರಾರ್ಥಿಸುವ ಮೂಲಕ ಕರಗ ಮೆರವಣಿಗೆ ಆರಂಭಗೊಡಿತು. ಐತಿಹಾಸಿಕ ಮತ್ತು ಪೌರಾಣಿಕ ಹಿನ್ನೆಲೆಯನ್ನು ಒಳಗೊಂಡ ನಗರದ ರಾಜಾಸೀಟು ಬಳಿಯ ಶ್ರೀ ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ ಕರಗವನ್ನು ವ್ರತಧಾರಿ ಪಿ.ಪಿ.ಚಾಮಿ, ಗೌಳಿಬೀದಿಯ ಶ್ರೀ ಕಂಚಿಕಾಮಾಕ್ಷಿ ಕರಗವನ್ನು ಕಾರ್ತಿಕ್, ನಗರಸಭೆ ಬಳಿಯ ಶ್ರೀ ದಂಡಿನ ಮಾರಿಯಮ್ಮ ಕರಗವನ್ನು ಜಿ.ಎ. ಉಮೇಶ್ ಮತ್ತು ಪೆನ್ಶನ್ ಲೇನ್‌ನ ಶ್ರೀ ಕೋಟೆ ಮಾರಿಯಮ್ಮ ಕರಗವನ್ನು ಅನೀಶ್ ಹೊರುವ ಮೂಲಕ ನಗರ ಮೆರವಣಿಗೆಯನ್ನು ಆರಂಭಿಸಿದರು. ಮೆರವಣಿಗೆ ಮೆರುಗು: ಕರಗ ಉತ್ಸವಕ್ಕೆ ಆರಂಭ ನೀಡುವ ವೇಳೆ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಂಡು ಶಕ್ತಿ ದೇವತೆಗಳನ್ನು ಪ್ರಾರ್ಥಿಸಿದರು. ಮಹಿಳೆಯರು ಕಳಸ ಹಿಡಿದು ಸಾಗಿದರು. ನಾಲ್ಕು ಶಕ್ತಿ ದೇವತೆಗಳ ಕರಗಗಳನ್ನು ವಾದ್ಯಗೋಷ್ಠಿ ತಂಡ ಮುನ್ನೆಡೆಸಿತು. ಕರಗ ಸಾಗುವ ದಾರಿಯಲ್ಲಿ ವಾಹನ ಮೂಲಕ ದೀಪದ ವ್ಯವಸ್ಥೆ ಮಾಡಲಾಗಿತ್ತು. ನವರಾತ್ರಿ ಉತ್ಸವದ ಆರಂಭದ ಹಿನ್ನೆಲೆಯಲ್ಲಿ ಭಾನುವಾರ ಮಧ್ಯಾಹ್ನ ನಾಲ್ಕು ಶಕ್ತಿದೇವತೆಗಳ ದೇವಸ್ಥಾನಗಳಿಂದ ವ್ರತಧಾರಿಗಳೊಂದಿಗೆ ದೇವಾಲಯ ಸಮಿತಿಯವರು ಮಂಗಳವಾದ್ಯ ಸಹಿತ ಕರಗ ನಿರ್ಮಾಣಕ್ಕೆ ಅಗತ್ಯವಾದ ಸಾಮಗ್ರಿಗಳನ್ನು ಹೊತ್ತು ಮೆರವಣಿಗೆಯ ಮೂಲಕ ಪಂಪಿನ ಕರೆಗೆ ತೆರಳಿ ಅಗತ್ಯ ಪೂಜಾ ವಿಧಿ- ವಿಧಾನಗಳೊಂದಿಗೆ ಅತ್ಯಾಕರ್ಷಕವಾಗಿ ಕರಗಗಳನ್ನು ಕಟ್ಟಿ ಹೂವುಗಳಿಂದ ಅಲಂಕರಿಸಿ ಸಂಜೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿದರು. ಪಂಪಿನ ಕೆರೆ ಆವರಣದಿಂದ ಹೊರ ಬಂದ ನಾಲ್ಕು ಕರಗಗಳ ಮೆರವಣಿಗೆಗೆ ದಸರಾ ಉತ್ಸವ ಸಮಿತಿಯ ಪದಾಧಿಕಾರಿಗಳು ಈಡುಗಾಯಿ ಒಡೆಯುವ ಮೂಲಕ ವಿದ್ಯುಕ್ತವಾಗಿ ಚಾಲನೆ ನೀಡಿದರು. ಜಿಲ್ಲಾ ಉಸ್ತುವಾರಿ ಸಚಿವ ಭೋಸರಾಜು, ಶಾಸಕರಾದ ಎ.ಎಸ್. ಪೊನ್ನಣ್ಣ, ಮಂಥರ್ ಗೌಡ, ಮಾಜಿ ಶಾಸಕರಾದ ಅಪ್ಪಚ್ಚು ರಂಜನ್, ಕೆ.ಜಿ.ಬೋಪಯ್ಯ, ಮಾಜಿ ಎಂಎಲ್‌ಸಿ ವೀಣಾ ಅಚ್ಚಯ್ಯ, ಮಡಿಕೇರಿ ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ, ನಗರ ದಸರಾ ಸಮಿತಿ ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ, ಪ್ರಧಾನ ಕಾರ್ಯದರ್ಶಿ ರಾಜೇಶ್ ಯಲ್ಲಪ್ಪ, ಜಿಲ್ಲಾಧಿಕಾರಿ ವೆಂಕಟ ರಾಜಾ, ಎಸ್ಪಿ ರಾಮರಾಜನ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಪಂಪಿನಕೆರೆ ಬಳಿಯಿಂದ ಹೊರಟ ನಾಲ್ಕು ಕರಗಗಳು ಮಹದೇವಪೇಟೆಯ ಬಸವೇಶ್ವರ ದೇವಾಲಯ, ಚೌಡೇಶ್ವರಿ ದೇವಾಲಯದಲ್ಲಿ ಪೂಜೆ ಸ್ವೀಕರಿಸಿದ ಬಳಿಕ ಸಂಪ್ರದಾಯದಂತೆ ಪೇಟೆ ಶ್ರೀ ರಾಮಮಂದಿರ ತಲುಪಿ, ಅಲ್ಲಿಯೂ ಕರಗಗಳಿಗೆ ಪೂಜೆ ಸಲ್ಲಿಸಿದ ನಂತರ ತಮ್ಮ ತಮ್ಮ ದೇವಾಲಯಗಳಿಗೆ ತೆರಳಿದವು. ಕರಗಗಳ ಮುಂದೆ ವಾದ್ಯಗೋಷ್ಠಿ ತಂಡಗಳು ಮೆರುಗು ನೀಡಿತು. ಕಂಚಿ ಕಾಮಾಕ್ಷಿ ಕರಗದಲ್ಲಿ ಕೇರಳದ ಚಂಡೆ ವಾದ್ಯಗೋಷ್ಠಿಯಿತ್ತು. ನಗರ ಸಂಚಾರ ಮಾಡುವ ಕರಗಗಳು ಭಾನುವಾರ ಕರಗ ಉತ್ಸವಕ್ಕೆ ವಿಧ್ಯುಕ್ತ ಚಾಲನೆ ನೀಡಲಾಗಿದ್ದು, ಒಂಬತ್ತು ದಿನಗಳ ಕಾಲ ನಾಲ್ಕು ಶಕ್ತಿ ದೇವತೆಗಳ ಕರಗಗಳು ನಗರ ಸಂಚಾರವನ್ನು ಮಾಡಲಿವೆ. ನಗರದ ಎಲ್ಲ ಮನೆ ಮನೆಗಳಿಗೆ ತೆರಳಿ ಭಕ್ತರಿಗೆ ಅನುಗ್ರಹ ನೀಡಲಿದೆ. ವಿಜಯದಶಮಿಯಂದು ರಾತ್ರಿಯಿಡೀ ಸಂಚಾರವನ್ನು ನಡೆಸಿ ಬೆಳಗ್ಗೆ ನಗರದ ಬನ್ನಿ ಮಂಟಪದಲ್ಲಿ ಬನ್ನಿ ಕಡಿಯುವ ಮೂಲಕ ದಸರಾ ಉತ್ಸವಕ್ಕೆ ತೆರೆ ಬೀಳಲಿದೆ. ರಾಜರ ಕಾಲದಲ್ಲಿ ಮಡಿಕೇರಿಯಲ್ಲಿ ಸಾಂಕ್ರಮಿಕ ರೋಗ ತಲೆದೋರಿತ್ತು. ಇದರಿಂದ ರಾಜರು ನಾಲ್ಕು ಶಕ್ತಿ ದೇವತೆಗಳನ್ನು ಮಡಿಕೇರಿಯಲ್ಲಿ ಪ್ರತಿಷ್ಠಾಪಿಸಿದರು. ದೇವತೆಗಳ ಕರಗವನ್ನು ಹೊರಡಿಸಿದರು. ನಂತರ ಸಾಂಕ್ರಮಿಕ ರೋಗ ಮಾಯವಾಯಿತು ಎಂಬ ಐತಿಹ್ಯವಿದೆ.