ಕಾಫಿ ಬೆಳೆಗಾರರ ಸಮಸ್ಯೆ ಪರಿಹರಿಸಲು ಕ್ರಮ

KannadaprabhaNewsNetwork |  
Published : Oct 24, 2024, 12:31 AM IST
ರಾಯರಕೊಪ್ಪಲಿನಲ್ಲಿ ತಾಲೂಕು ಬೆಳೆಗಾರರ ಸಂಘದ ನೂತನ ಕಟ್ಟಡ ಹಾಗೂ ಕೃಷಿ ಮೇಳ. | Kannada Prabha

ಸಾರಾಂಶ

ಕಳೆದ ಎರಡೂವರೆ ದಶಕದಿಂದ ಈ ಭಾಗದಲ್ಲಿ ಕಾಡಾನೆ ಸಮಸ್ಯೆ ನಿರಂತರವಾಗಿದೆ. ಜೀವ, ಬೆಳೆ ಹಾಗೂ ಆಸ್ತಿಪಾಸ್ತಿ ಹಾನಿಯಾಗುತ್ತಿದೆ. ಆ ನಿಟ್ಟಿನಲ್ಲಿ ಈಗಾಗಲೇ ಬೆಳೆಗಾರರ ಸಂಘಟನೆಯೊಂದಿಗೆ ಅರಣ್ಯ ಸಚಿವರನ್ನು ಭೇಟಿಯಾಗಿ ಸಮಸ್ಯೆ ಗಂಭೀರತೆಯನ್ನು ತಿಳಿಸಲಾಗಿದೆ. ಕಾಫಿ ಬೆಳೆಗಾರರ ಸಂಘಟನೆ ಹೆಚ್ಚು ಬಲ ಹೊಂದಿದ್ದು, ಸಂಘಟನೆಯ ಶಕ್ತಿ ಹಾಗೂ ಶಾಸಕನಾಗಿ ಅಧಿಕಾರ ಬಳಸಿ ಸರ್ಕಾರದ ಮೇಲೆ ಹೆಚ್ಚು ಒತ್ತಡ ತಂದು ಬೆಳೆಗಾರರ ಸಮಸ್ಯೆಗಳಿಗೆ ಶಾಶ್ವತ ಪರಿಹಾರಕ್ಕೆ ಮುಂದಾಗುತ್ತೇನೆ ಎಂದು ಶಾಸಕ ಸಿಮೆಂಟ್‌ ಮಂಜು ತಿಳಿಸಿದರು.

ಕನ್ನಡಪ್ರಭ ವಾರ್ತೆ ಆಲೂರು

ಸಂಕಷ್ಟದಲ್ಲಿರುವ ಕಾಫಿ ಬೆಳೆಗಾರರ ಸಮಸ್ಯೆಗೆ ಪರಿಹರಿಸಲು ಮತ್ತು ಕೇಂದ್ರ ಸರಕಾರದ ಗಮನ ಸೆಳೆಯಲು ಅಗತ್ಯ ಕ್ರಮ ಕೈಗೊಳ್ಳಲಾಗುವುದೆಂದು ಶಾಸಕ ಸಿಮೆಂಟ್ ಮಂಜು ಹೇಳಿದರು.ಬುಧವಾರ ತಾಲೂಕಿನ ರಾಯರಕೊಪ್ಪಲಿನಲ್ಲಿ ಕರ್ನಾಟಕ ಬೆಳೆಗಾರರ ಒಕ್ಕೂಟ, ಹಾಸನ ಜಿಲ್ಲಾ ಪ್ಲಾಂಟರ್ಸ್‌ ಸಂಘ ಮತ್ತು ಆಲೂರು ತಾಲೂಕು ಕಾಫಿ ಬೆಳೆಗಾರರ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ, ತಾಲೂಕು ಕಾಫಿ ಬೆಳೆಗಾರರ ಸಂಘದ ನೂತನ ಕಟ್ಟಡದ ಉದ್ಘಾಟನೆ ಸಮಾರಂಭ ಮತ್ತು ಕೃಷಿ ಮೇಳದಲ್ಲಿ ಭಾಗವಹಿಸಿ ಮಾತಾಡಿದರು. ಕಳೆದ ಎರಡೂವರೆ ದಶಕದಿಂದ ಈ ಭಾಗದಲ್ಲಿ ಕಾಡಾನೆ ಸಮಸ್ಯೆ ನಿರಂತರವಾಗಿದೆ. ಜೀವ, ಬೆಳೆ ಹಾಗೂ ಆಸ್ತಿಪಾಸ್ತಿ ಹಾನಿಯಾಗುತ್ತಿದೆ. ಆ ನಿಟ್ಟಿನಲ್ಲಿ ಈಗಾಗಲೇ ಬೆಳೆಗಾರರ ಸಂಘಟನೆಯೊಂದಿಗೆ ಅರಣ್ಯ ಸಚಿವರನ್ನು ಭೇಟಿಯಾಗಿ ಸಮಸ್ಯೆ ಗಂಭೀರತೆಯನ್ನು ತಿಳಿಸಲಾಗಿದೆ. ಕಾಫಿ ಬೆಳೆಗಾರರ ಸಂಘಟನೆ ಹೆಚ್ಚು ಬಲ ಹೊಂದಿದ್ದು, ಸಂಘಟನೆಯ ಶಕ್ತಿ ಹಾಗೂ ಶಾಸಕನಾಗಿ ಅಧಿಕಾರ ಬಳಸಿ ಸರ್ಕಾರದ ಮೇಲೆ ಹೆಚ್ಚು ಒತ್ತಡ ತಂದು ಬೆಳೆಗಾರರ ಸಮಸ್ಯೆಗಳಿಗೆ ಶಾಶ್ವತ ಪರಿಹಾರಕ್ಕೆ ಮುಂದಾಗುತ್ತೇನೆ ಎಂದರು.

ರಾಜ್ಯ ಬೆಳೆಗಾರರ ಒಕ್ಕೂಟ, ಹಾಸನ ಜಿಲ್ಲಾ ಪ್ಲಾಂಟರ್ಸ್‌ ಸಂಘ, ಹೋಬಳಿ ಬೆಳೆಗಾರರ ಸಂಘಟನೆಗಳು ಹೆಚ್ಚು ಕ್ರಿಯಾತ್ಮಕವಾಗಿ ಬೆಳೆಗಾರರ ಪರ ಧ್ವನಿಯಾಗಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಭಾರತೀಯ ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ ದಿನೇಶ್ ಮಾತನಾಡಿ, ಭಾರತದಲ್ಲಿ ಉತ್ಕೃಷ್ಟ ದರ್ಜೆಯ ಕಾಫಿ ಬೆಳೆಯುತ್ತಿದ್ದಾರೆ. ಬೆಳೆಗಾರರು ನಿರ್ಲಕ್ಷ್ಯ ವಹಿಸಿದ್ದಲ್ಲಿ ಮುಂದಿನ ದಿನಗಳಲ್ಲಿ ಬೃಹತ್ ಕಂಪೆನಿಗಳು ವಿದೇಶಿ ಕಾಫಿಯನ್ನೇ ಖರೀದಿಸಲು ಸಿದ್ಧತೆ ಮಾಡಿಕೊಳ್ಳುತ್ತಿವೆ.

ಕಾಫಿ ಬೆಳೆಗಾರರು ಸರ್ಫೇಸಿ ಕಾಯ್ದೆಯಿಂದ ಸಮಸ್ಯೆ ಎದುರಿಸುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ರಾಜ್ಯ ಮಟ್ಟದ ಬೆಳೆಗಾರರ ಸಂಘಟನೆಗಳು ಮತ್ತು ಬೆಳೆಗಾರರ ಅಭಿಪ್ರಾಯ ಸಂಗ್ರಹಿಸಿ ಸಾಧಕ, ಬಾಧಕಗಳನ್ನು ಪರಿಶೀಲಿಸಿ ಕಾಫಿಯನ್ನು ವಾಣಿಜ್ಯೋದ್ಯಮದಿಂದ ಕೃಷಿ ವ್ಯಾಪ್ತಿಗೆ ತರಲು ಚಿಂತನೆ ನಡೆಸಲಾಗುವುದು. 2047ರ ವೇಳೆ ಕಾಫಿ ಉದ್ಯಮದಲ್ಲಿ ಬದಲಾವಣೆ ತರಲು 17 ಅಂಶದ ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ. ಕಾರ್ಮಿಕರ ಅಭಾವ ಜತೆಗೆ ಬೆಳೆಗಾರರು ಎದುರುಸುತ್ತಿರುವ ಸವಾಲುಗಳ ಕುರಿತು ಚಿಂತನೆ ಮಾಡಿ ಪೂರಕ ಯೋಜನೆಗಳನ್ನು ಹಂತ–ಹಂತವಾಗಿ ಕಾರ್ಯಗತಗೊಳಿಸಲಾಗುವುದು ಎಂದರು.

ಬೆಳೆಗಾರರು ಮೊದಲು ಅಲಕ್ಷ್ಯದಿಂದ ಎದ್ದು ಹೊರಬರಬೇಕಿದೆ. ನೂತನ ತಂತ್ರಜ್ಞಾನವನ್ನು ಬಳಸಿಕೊಂಡು, ಗುಣಮಟ್ಟದ ಕಾಫಿ ಬೆಳೆದಲ್ಲಿ ಮಾತ್ರ ನಮ್ಮ ಕಾಫಿಗೆ ಮಾರುಕಟ್ಟೆ ಸಿಗುತ್ತದೆ. ಕಾಫಿ ಮಂಡಳಿಯಿಂದ ಬೆಳೆಗಾರರಿಗೆ ₹307 ಕೋಟಿಯ ಸಹಾಯಧನ ಯೋಜನೆ ಇದ್ದು, ಬೆಳೆಗಾರರು ಬಳಸಿಕೊಳ್ಳಬೇಕು. ಅರೇಬಿಕಾ ಕಾಫಿ ಬೆಳೆಗಾರರು ಮೊದಲು ಸಂಘಟಿತರಾಗಬೇಕಿದೆ. ನಂತರ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಹೋರಾಡಿದಲ್ಲಿ ಯಶಸ್ಸುಗಳಿಸಲು ಸಾಧ್ಯ ಎಂದರು.

ಈ ಸಂಧರ್ಭದಲ್ಲಿ ತಾಲೂಕು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಎಚ್.ಎ ರವಿಕುಮಾರ್, ಮಾಜಿ ಶಾಸಕ ಎಚ್. ಎಂ ವಿಶ್ವನಾಥ್, ಜಿಲ್ಲಾ ಪ್ಲಾಂಟರ್ಸ್ ಸಂಘದ ಅಧ್ಯಕ್ಷ ಪರಮೇಶ್, ಕಾಫಿ ಮಂಡಳಿ ಸದಸ್ಯ ಉದಯಕುಮಾರ್, ಮಲೆನಾಡು ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಎಚ್.ಪಿ ಮೋಹನ್, ಕರ್ನಾಟಕ ಬೆಳೆಗಾರರ ಒಕ್ಕೂಟದ ಮಾಜಿ ಅಧ್ಯಕ್ಷ, ಎಚ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಕಬ್ನಳ್ಳಿ ಜಗದೀಶ್, ಬಿ.ಎ ಜಗನ್ನಾಥ್, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್, ನಾಗೇಂದ್ರ, ಜೆಡಿಎಸ್ ಮುಖಂಡ ಕೆ. ಎಸ್ ಮಂಜೇಗೌಡ, ಸಂಘದ ಕಾರ್ಯದರ್ಶಿ ಬೋಪಣ್ಣ, ಖಜಾಂಚಿ ನವೀನ್, ಜಂಟಿ ಕಾರ್ಯದರ್ಶಿ ಧರ್ಮರಾಜ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

* ಹೇಳಿಕೆ:

ಬೆಳೆಗಾರರ ನಿರಂತರ ಹೋರಾಟದಿಂದ ಹಿಂದಿನ ಸರ್ಕಾರ ಬೆಳೆಗಾರರ ಒತ್ತುವರಿ ಸರ್ಕಾರಿ ಭೂಮಿಯನ್ನು 25 ಎಕರೆವರೆಗೆ ಲೀಸ್‌ಗೆ ನೀಡಲು ಒಪ್ಪಿಗೆ ಸೂಚಿಸಿದೆ. ಈಗಿನ ಸರ್ಕಾರ ಕೂಡ ಶೀಘ್ರದಲ್ಲಿ ಇದನ್ನು ಜಾರಿಗೊಳಿಸುವುದಾಗಿ ಭರವಸೆ ನೀಡಿದೆ.

- ಡಾ. ಎಚ್‌.ಟಿ. ಮೋಹನ್‌ ಕುಮಾರ್, ರಾಜ್ಯ ಬೆಳೆಗಾರರ ಒಕ್ಕೂಟದ ಅಧ್ಯಕ್ಷ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ