ಕನ್ನಡಪ್ರಭ ವಾರ್ತೆ ಚಾಮರಾಜನಗರ
ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು ಎಂದು ರೋಟರಿ ಸಂಸ್ಥೆ ಅಧ್ಯಕ್ಷ ರಾಮಸಮುದ್ರ ನಾಗರಾಜು ಹೇಳಿದರು.ನಗರದ ರೋಟರಿ ಭವನದಲ್ಲಿ ನಡೆದ ಮಂಗಳವಾರದ ಸಭೆಯಲ್ಲಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಿ ಮಾತನಾಡಿದರು. ಮಕ್ಕಳಿಗೆ ವಿದ್ಯೆ ಕಲಿಸುವುದಕ್ಕೆ ಮಾತ್ರ ಸೀಮಿತವಾಗದ ಶಿಕ್ಷಕರು, ರಾಷ್ಟ್ರ ನಿರ್ಮಾಣದಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತಾರೆ. ದೇಶ ಬೆಳಗುವ ಮಕ್ಕಳ ಒಟ್ಟಾರೆ ಬೆಳವಣಿಗೆಗೆ ಕಾರಣರಾಗುವ ಶಿಕ್ಷಕರು ಬಲಿಷ್ಠ ಸಮಾಜದ ನಿರ್ಮಾತೃಗಳಾಗಿದ್ದಾರೆ. ಅಂತಹ ಶಿಕ್ಷಕರನ್ನು ಗುರುತಿಸಿ ಸನ್ಮಾನಿಸಲಾಗಿದೆ ಎಂದರು.ಸನ್ಮಾನ ಸ್ವೀಕರಿಸಿದ ಶಿಕ್ಷಕ ಸಿದ್ಧರಾಜು ಮಾತನಾಡಿ, ಅಂತಾರಾಷ್ಟ್ರೀಯ ರೋಟರಿ ಸಂಸ್ಥೆಯು ಶಿಕ್ಷಕರ ಸೇವೆ ಗುರುತಿಸಿ ಸನ್ಮಾನಿಸಿರುವುದು ತುಂಬಾ ಸಂತಸವಾಗಿದೆ. ನಾನು ಸೇವೆ ಸಲ್ಲಿಸುತ್ತಿರುವ ಆಲೂರಿನ ಸರ್ಕಾರಿ ಶಾಲಾ ಮಕ್ಕಳಿಗೆ ಊಟದತಟ್ಟೆ, ಲೋಟದ ಕೊರತೆ ಇದೆ. ರೋಟರಿ ಸಂಸ್ಥೆ ವತಿಯಿಂದ ಕೊಡಿಸಿಕೊಡಬೇಕು ಎಂದು ಮನವಿ ಮಾಡಿದರು.ಶಿಕ್ಷಕ ಸಿದ್ದಮಲ್ಲಪ್ಪ ಮಾತನಾಡಿ, ರೋಟರಿ ಸಂಸ್ಥೆಯು ಸರ್ಕಾರಿ ಶಾಲೆಗೆ ಅಗತ್ಯ ಪೀಠೋಪಕರಣ, ಮಕ್ಕಳಿಗೆ ಬ್ಯಾಗ್, ತಟ್ಟೆ, ಲೋಟ, ಶುದ್ಧ ಕುಡಿಯುವ ನೀರಿನ ಟ್ಯಾಂಕ್ ಕೊಡುಗೆಯಾಗಿ ನೀಡಿದೆ. ಅಲ್ಲದೆ ಡಯಾಲಿಸಿಸ್ ಸೆಂಟರ್ ತೆರೆದು ಕಡಿಮೆ ಶುಲ್ಕದಲ್ಲಿ ಡಯಾಲಿಸಿಸ್ ಸೇವೆ ಮಾಡುತ್ತಿದ್ದು, ಸಾಮಾಜಮುಖಿ ಸೇವೆ ಮಾಡುತ್ತಿದೆ. ಇಂತಹ ಸೇವಾ ಸಂಸ್ಥೆಗೆ ಮುಂದಿನ ದಿನಗಳಲ್ಲಿ ಶಿಕ್ಷಕರು ಸದಸ್ಯರಾಗಿ ಸೇವಾ ಮಾರ್ಗದಲ್ಲಿ ಪಾಲ್ಗೊಳ್ಳಬೇಕು ಮನವಿ ಮಾಡಿದರು.ಶಿಕ್ಷಕ ಕೆಂಪನಪುರ ಸಿದ್ಧರಾಜು ಪ್ರಾಸ್ತಾವಿಕವಾಗಿ ಮಾತನಾಡಿ, ದೇಶದ ಉತ್ತಮ ಪ್ರಜೆಗಳ ನಿರ್ಮಾಣ ಮಾಡುವ ಶಿಕ್ಷಕರನ್ನು ಗೌರವಿಸುವ ಕೆಲಸವನ್ನು ರೋಟರಿ ಸಂಸ್ಥೆ ಪ್ರತಿ ವರ್ಷವೂ ಮಾಡುತ್ತಿದೆ. ಶಿಕ್ಷಕ ತುಂಬಾ ಎತ್ತರದಲ್ಲಿರುತ್ತಾನೆ. ಯಾವುದೇ ದೇಶ ಶಿಕ್ಷಕರನ್ನು ಮೀರಿ ಬೆಳೆದಿಲ್ಲ. ರೋಟರಿ ಸಂಸ್ಥೆ ವತಿಯಿಂದ ಸನ್ಮಾನ ಸ್ವೀಕರಿಸಿರುವ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಿಗೆ ಮುಂದಿನ ದಿನಗಳಲ್ಲಿ ರಾಜ್ಯ ಮಟ್ಟದ ಪ್ರಶಸ್ತಿ, ಸನ್ಮಾನ ಲಭಿಸಲಿ ಎಂದು ಶುಭ ಕೋರಿದರು.ಸನ್ಮಾನ: ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಬಿ. ಕೃಷ್ಣಮೂರ್ತಿ, ಸಿ.ಎಸ್. ಮಹದೇವಸ್ವಾಮಿ, ಸಿದ್ದರಾಜು ಅವರಿಗೆ ಶಾಲು ಹೊದಿಸಿ, ಹೂವಿನ ಹಾರಹಾಕಿ, ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು. ಸಭೆಯಲ್ಲಿ ರೋಟರಿ ಸಂಸ್ಥೆ ಕಾರ್ಯದರ್ಶಿ ಎಚ್.ಎಂ. ಗುರುಸ್ವಾಮಿ, ಖಜಾಂಚಿ ಆರ್.ಎಂ.ಸ್ವಾಮಿ, ರೋಟರಿ ಸಂಸ್ಥೆ ಸಂಸ್ಥಾಪಕ ಶ್ರೀನಿವಾಸಶೆಟ್ಟಿ, ಕೆಂಪನಪುರ ಮಹದೇವಸ್ವಾಮಿ, ಅಂಕಶೆಟ್ಟಿ, ನಂಜುಂಡಸ್ವಾಮಿ, ಅಬ್ದುಲ್ ಅಜೀಜ್, ಪ್ರಭಕರ್, ಪ್ರಕಾಶ್, ಸುಭಾಷ್, ಸಂಜಯ್ ಜೈನ್, ಎಸ್ ಆರ್ ಎಸ್ ಶ್ರೀನಿವಾಸ, ಯೋಗರಾಜು, ಡಿ.ಪಿ.ಉಲ್ಲಾಸ್ ಇತರರು ಹಾಜರಿದ್ದರು.