ಕನ್ನಡಪ್ರಭ ವಾರ್ತೆ ಮಂಡ್ಯ
ಹನುಮಧ್ವಜ ವಿವಾದದಿಂದ ತಾಲೂಕಿನ ಕೆರಗೋಡು ಗ್ರಾಮದಲ್ಲಿ ಬೂದಿ ಮುಚ್ಚಿದ ಕೆಂಡದ ಪರಿಸ್ಥಿತಿ ಇದೆ. ಇದೇ ಸಮಯದಲ್ಲಿ ಸರ್ಕಾರಿ ಶಾಲೆಯಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಶಿಕ್ಷಕಿಯೊಬ್ಬರು ಆರ್‌ಎಸ್‌ಎಸ್ ಸಂಚಾಲಕನಿಂದ ಧ್ವಜಾರೋಹಣ ನೆರವೇರಿಸಿರುವುದು ವಿವಾದಕ್ಕೆ ಕಾರಣವಾಗಿದೆ.ಕೆರಗೋಡು ಗ್ರಾಮದ ಸರ್ಕಾರ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಸುಶೀಲಮ್ಮ ಸರ್ಕಾರದ ನಿಯಮಾವಳಿ ಉಲ್ಲಂಘಿಸಿ ಒಂದು ಧರ್ಮದ ಪರ ಒಲವು ತೋರಿರುವ ಬಗ್ಗೆ ಶಾಲೆಯ ಎಸ್‌ಡಿಎಂಸಿ ಸದಸ್ಯರು ಹಾಗೂ ಪೋಷಕರು ಶಾಲಾ ಶಿಕ್ಷಣ ಇಲಾಖೆಗೆ ದೂರು ಸಲ್ಲಿಸಿದ್ದಾರೆ.
ಗಣರಾಜ್ಯೋತ್ಸವ ದಿನದಂದು ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿ ಮಕ್ಕಳನ್ನು ವಿವಾದಿತ ಸ್ಥಳಕ್ಕೆ ಕರೆದೊಯ್ದು ಶ್ರೀ ಗೌರಿಶಂಕರ ಸೇವಾ ಟ್ರಸ್ಟ್ ನಡೆಸಿದ ಧ್ವಜಾರೋಹಣದಲ್ಲಿ ಭಾಗಿಯಾಗಿರುವುದು ಮತ್ತು ಅದೇ ದಿನ ಶಾಲೆಯಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ಆರ್‌ಎಸ್‌ಎಸ್ ಸಂಚಾಲಕ ಹಾಗೂ ಪಂಚೇಗೌಡನದೊಡ್ಡಿ ಗ್ರಾಪಂ ಸದಸ್ಯ ಕೆ.ಜಿ.ಮಹೇಶ್ ಅವರಿಂದ ಧ್ವಜಾರೋಹಣ ಮಾಡಿಸಿದ್ದಲ್ಲದೇ, ನಾವೆಲ್ಲಾ ಹಿಂದೂ ನಾವೆಲ್ಲಾ ಒಂದು ಎಂದು ಪ್ರತಿಜ್ಞಾವಿಧಿ ಬೋಧಿಸಿ ಜೈ ಶ್ರೀರಾಮ್ ಚಿಹ್ನೆ ಮುದ್ರಿತ ಇರುವ ಕವರ್‌ನಲ್ಲಿ ಲಾಡು ವಿತರಿಸಿರುವುದು ಬೆಳಕಿಗೆ ಬಂದಿದೆ.ಇಲಾಖೆಯ ಉಪನಿರ್ದೇಶಕರು, ಉತ್ತರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಿಗೆ ಶಾಲೆಯಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳ ಪೋಷಕರಾದ ಕೆ.ಎಂ.ಸಂತೋಷ್‌ಕುಮಾರ್, ಲೋಕೇಶ್, ಕೆ.ಸಿ.ಉಮಾಶಂಕರ್ ಸೇರಿದಂತೆ ಹಲವರು ದೂರು ಸಲ್ಲಿಸಿ ಶಿಕ್ಷಕಿಯ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಮುಖ್ಯ ಶಿಕ್ಷಕಿ ಸುಶೀಲಮ್ಮ ಅವರು ಗಣರಾಜ್ಯೋತ್ಸವ ದಿನದಂದು ಶಾಲೆಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷರು ಲಭ್ಯವಿದ್ದರೂ ಅವರನ್ನು ಪರಿಗಣಿಸದೆ ಇಲಾಖಾ ನಿಯಮ ಉಲ್ಲಂಘಿಸಿ ಉದ್ದೇಶಪೂರ್ವಕವಾಗಿ ಧ್ವಜಾರೋಹಣವನ್ನು ತಾಲೂಕು ಆರ್‌ಎಸ್‌ಎಸ್ ಸಂಚಾಲಕ ಕೆ.ಜಿ.ಮಹೇಶ್ ಅವರಿಂದ ಮಾಡಿಸಿದ್ದಾರೆ. ಸರ್ಕಾರಿ ಶಾಲೆಯಲ್ಲಿ ಎಲ್ಲ ಧರ್ಮದ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದರೂ ಶಿಕ್ಷಕಿ ಒಂದು ಧರ್ಮದ ಕಡೆಗೆ ಹೆಚ್ಚು ಒಲವನ್ನು ತೋರಿರುವುದು, ನಾವೆಲ್ಲಾ ಹಿಂದೂ ನಾವೆಲ್ಲಾ ಒಂದು ಎಂದು ಪ್ರತಿಜ್ಞಾವಿಧಿ ಮಾಡಿಸಿರುವುದಾಗಿ ಆರೋಪಿಸಿದ್ದಾರೆ.ಇದೇ ವೇಳೆ ಜ.೨೨ರಂದು ಅಯೋಧ್ಯೆ ರಾಮಮಂದಿರ ಪ್ರತಿಷ್ಠಾಪನೆಗೆ ತಯಾರಿಸಿದ್ದ ಜೈ ಶ್ರೀರಾಮ್ ಚಿಹ್ನೆ ಮುದ್ರಿತ ಇರುವ ಲಾಡನ್ನು ಗಣರಾಜ್ಯೋತ್ಸವ ದಿನದಂದು ಶಾಲೆಯ ಮಕ್ಕಳಿಗೆ ವಿತರಿಸಿದ್ದಾರೆ. ಮಕ್ಕಳ ಗಮನ ಸೆಳೆಯಲು ಜೈಶ್ರೀರಾಮ್ ಚಿಹ್ನೆ ಮುದ್ರಿತ ಲಾಡು ಪ್ಯಾಕೇಟ್‌ನ್ನು ವಿತರಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಶಾಲಾ ಅಭಿವೃದ್ಧಿ ಸಮಿತಿಯಲ್ಲಿ ಚರ್ಚಿಸಿದೆ ಪೋಷಕರ ಒಪ್ಪಿಗೆ ಪಡೆಯದೆ ಇಲಾಖೆ ಅನುಮತಿ ಪಡೆಯದೆ ಶಾಲೆಯಲ್ಲಿ ಗಣರಾಜ್ಯೋತ್ಸವದ ಮಧ್ಯಭಾಗದಲ್ಲಿ ಎಲ್ಲಾ ವಿದ್ಯಾರ್ಥಿಗಳೊಡನೆ ಪ್ರಸ್ತುತ ವಿವಾದಿತ ಸ್ಥಳದಲ್ಲಿರುವ ಬಸ್ ನಿಲ್ದಾಣದ ಮುಂಭಾಗದ ಆವರಣದಲ್ಲಿ ಗೌರಿಶಂಕರ ಸೇವಾ ಟ್ರಸ್ಟ್‌ನ ಧ್ವಜಾರೋಹಣ ಕಾರ್ಯಕ್ರಮಕ್ಕೆ ಒಂದು ಧರ್ಮದ ಪರವಾಗಿ ಏಕಾಏಕಿಯಾಗಿ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತರದೇ ತನ್ನ ಶಾಲಾ ವಿದ್ಯಾರ್ಥಿಗಳೊಡನೆ ಭಾಗಿಯಾಗಿ ಸರ್ಕಾರಿ ನಿಯಮಗಳನ್ನು ಮಿರಿ ಸರ್ವಾಧಿಕಾರಿ ಧೋರಣೆ ತೋರಿದ್ದಾರೆ ಎಂದು ಹೇಳಿದ್ದಾರೆ.ಕೆರಗೋಡಿನಲ್ಲಿ ಬದಲಾವಣೆಗೆ ಕಾರಣರಾಗಿ, ಆರ್‌ಎಸ್‌ಎಸ್ ಸಂಚಾಲಕರ ಜೊತೆ ನಿರಂತರವಾಗಿ, ಶಾಲೆಯಲ್ಲಿ ಹಿಂದೂಧರ್ಮದ ಪರವಾಗಿ ಮಕ್ಕಳ ಮನಸ್ಸಿನಲ್ಲಿ ಹಿಂದುತ್ವವನ್ನು ಬಿತ್ತಿ ಗೊಂದಲ ಮೂಡಿಸಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯವನ್ನು ಲೆಕ್ಕಿಸದೆ ಪ್ರತ್ಯೇಕ್ಷವಾಗಿ ಶಾಲಾ ಶಿಕ್ಷಣ ಇಲಾಖೆಗೆ ಅವಮಾನ ಮಾಡಿದ್ದಾರೆ. ಸಮುದಾಯ ಮತ್ತು ಶಾಲೆಯಲ್ಲಿ ಒಡಕು ಮೂಡಿಸಿದ್ದಾರೆ. ಹೀಗಾಗಿ ಮುಖ್ಯ ಶಿಕ್ಷಕರ ಮೇಲೆ ಶಿಸ್ತು ಮತ್ತು ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಮನವಿ ಮಾಡಿದ್ದಾರೆ.