ಕನ್ನಡಪ್ರಭ ವಾರ್ತೆ ಉಡುಪಿ
ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ‘ಪ್ರಜ್ಯೋತಿ - ೨೦೨೪’ ಭಾನುವಾರ ಭಾವಪ್ರಕಾಶ ಸಭಾಂಗಣದಲ್ಲಿ ನೆರವೇರಿತು.೧೯೯೪ನೇ ವರ್ಷದ ಹಳೆವಿದ್ಯಾರ್ಥಿ, ಪ್ರಸ್ತುತ ವಿ.ಪಿ.ವಿ.ಎಸ್. ಕೊಟ್ಟಕಲ್ ಆಯುರ್ವೇದ ಕಾಲೇಜಿನ ಸಹಪ್ರಾಧ್ಯಾಪಕ ಡಾ. ಗೋಪಿಕೃಷ್ಣ ಶ್ರೀರಾಮ್ ಅವರ ‘ಆಯುರ್ವೇದಿಕ್ ಮ್ಯಾನೇಜ್‌ಮೆಂಟ್ ಆಫ್ ಸ್ಕಿನ್ ಡಿಸೀಸಸ್ ಇನ್ ಜನರಲ್ ಪ್ರಾಕ್ಟೀಸ್’ ಎಂಬ ವಿಷಯದ ಬಗ್ಗೆ ವಿಚಾರ ಸಂಕಿರಣದೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು.ಮುಖ್ಯ ಅತಿಥಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿ, ನ್ಯಾಶನಲ್ ಕಮಿಷನ್ ಫಾರ್ ಇಂಡಿಯನ್ ಸಿಸ್ಟಂ ಆಫ್ ಮೆಡಿಸಿನ್ ನಡೆಸಿದ ಭಾರತೀಯ ವೈದ್ಯ ಪದ್ಧತಿಯ ಸಂಸ್ಥೆಗಳ ರಾಷ್ಟ್ರೀಯ ಗುಣಮಟ್ಟ ನಿಯಂತ್ರಣ ಸಂಸ್ಥೆಯ ಮೌಲ್ಯಮಾಪನದಲ್ಲಿ ದ್ವಿತೀಯ ಸ್ಥಾನ ಗಳಿಸಿದ ಕಾಲೇಜಿನ ಸಾಧನೆಯನ್ನು ಶ್ಲಾಘಿಸಿದರು.ಇದೇ ಸಂದರ್ಭ ಕಾಲೇಜಿಗೆ ೧೯೮೪-೮೯ ಸಾಲಿಗೆ ಪ್ರವೇಶ ಹೊಂದಿ ಪದವೀಧರರಾದ ವಿದ್ಯಾರ್ಥಿ ಸಮೂಹ ಗುರುವಂದನಾ ಕಾರ್ಯಕ್ರಮದಲ್ಲಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಕೆ.ಆರ್. ರಾಮಚಂದ್ರ ಹಾಗೂ ಶರೀರ ರಚನಾ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ. ಶ್ರೀಧರ ಹೊಳ್ಳ ಅವರನ್ನು ಸನ್ಮಾನಿಸಿತು.ಬಳಿಕ ಹಳೆವಿದ್ಯಾರ್ಥಿ ಸಂಘದ ವತಿಯಿಂದ ಕಾಲೇಜಿನ ಆರ್ಥಿಕವಾಗಿ ಹಿಂದುಳಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡಲಾಯಿತು. ಸಂಘದ ಹೊಸ ಕಾರ್ಯಕಾರಿಣಿ ಸಮಿತಿಯ ಪದಗ್ರಹಣ ನೆರವೇರಿಸಲಾಯಿತು. ಸಂಘದ ಸುದ್ದಿ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು.ಕಾಲೇಜಿನ ಪ್ರಾಂಶುಪಾಲ ಡಾ. ಮಮತಾ ಕೆ.ವಿ., ಸಂಸ್ಥೆಯ ಯಶಸ್ಸಿಗೆ ಕಾರಣರಾದ ಬೋಧಕ ಹಾಗೂ ಬೋಧಕೇತರ ವೃಂದದವರನ್ನು ಪ್ರಶಂಶಿಸಿ ಹಾಗೂ ಹಳೆಬೇರು ಹೊಸ ಚಿಗುರು ಕೂಡಿ ಸಂಸ್ಥೆಯ ಘನತೆಯನ್ನು ಉಳಿಸಿ ಬೆಳೆಸಬೇಕೆಂದು ಕರೆ ನೀಡಿದರು.ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಾ. ಭರತೇಶ್ ಎ. ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ನಾಗರಾಜ್ ಎಸ್. ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷ ಡಾ. ನಾರಾಯಣ ಟಿ. ಅಂಚನ್ ಸ್ವಾಗತಿಸಿದರು. ಜಂಟಿ ಕಾರ್ಯದರ್ಶಿ ಡಾ. ವ್ಯಾಸರಾಜ್ ತಂತ್ರಿ ವಾರ್ಷಿಕ ವರದಿ ವಾಚಿಸಿದರು. ಕಾರ್ಯದರ್ಶಿ ಡಾ. ಮೊಹಮ್ಮದ್ ಇಕ್ಬಾಲ್ ವಂದಿಸಿದರು. ಡಾ. ರಶ್ನಿ ಕಲ್ಕೂರ ಕಾರ್ಯಕ್ರಮ ನಿರೂಪಿಸಿದರು.