ಕನ್ನಡಪ್ರಭ ವಾರ್ತೆ ಭದ್ರಾವತಿ
ರಥಯಾತ್ರೆ ಬೆಳಿಗ್ಗೆ ಹಳೇನಗರದ ಕನಕಮಂಟಪದಿಂದ ಪ್ರಾರಂಭಗೊಂಡು ಡಾ. ಪುನೀತ್ ರಾಜಕುಮಾರ್ ರಸ್ತೆ, ರಂಗಪ್ಪ ವೃತ್ತ, ಮಾಧವಚಾರ್ ವೃತ್ತ, ಡಾ. ರಾಜಕುಮಾರ್ ರಸ್ತೆ, ಹಾಲಪ್ಪ ವೃತ್ತ, ಡಾ. ಬಿ.ಆರ್ ಅಂಬೇಡ್ಕರ್ ವೃತ್ತದ ಮೂಲಕ ವಿಐಎಸ್‌ಎಲ್ ಡಬ್ಬಲ್ ರಸ್ತೆ ಮೂಲಕ ಮಧ್ಯಾಹ್ನ ನ್ಯೂಟೌನ್ ಶ್ರೀ ಸತ್ಯ ಸಾಯಿ ಸೇವಾಕ್ಷೇತ್ರಕ್ಕೆ ತಲುಪಿತು.
ಬೃಹತ್ ರಥಯಾತ್ರೆಯಲ್ಲಿ ಡೊಳ್ಳು ಮತ್ತು ವೀರಗಾಸೆ ಹಾಗೂ ತಮಟೆ ತಲಾ ಎರಡು ತಂಡಗಳು, ಕೋಲಾಟ, ಮಂಗಳವಾದ್ಯ, ಕಹಳೆ, ಯಕ್ಷಗಾನ, ಗೊಂಬೆ ಆಟ ಸೇರಿದಂತೆ ೧೨ ಕಲಾತಂಡಗಳು ಭಾಗವಹಿಸಿದ್ದವು. ದಶವತಾರ, ಶ್ರೀಕೃಷ್ಣ ಅರ್ಜುನನಿಗೆ ಗೀತೋಪದೇಶ, ಏಸು ಕ್ರಿಸ್ತನ ಆರಾಧನೆ, ಕನಕದಾಸರು ಸೇರಿದಂತೆ ದಾರ್ಶನಿಕರು, ಸ್ವಾಮಿ ವಿವೇಕಾನಂದರ ಹಾಗೂ ಸಸಿ ನೆಡುವ ಮೂಲಕ ಪರಿಸರ ಸಂರಕ್ಷಣೆ ಕುರಿತ ಸ್ತಬ್ಧಚಿತ್ರಗಳು ಗಮನ ಸೆಳೆದವು.ನಗರದ ಕನಕ ವಿದ್ಯಾಸಂಸ್ಥೆ, ವಿವೇಕಾನಂದ ವಿದ್ಯಾಸಂಸ್ಥೆ, ಅನನ್ಯ ಶಿಕ್ಷಣ ಸಂಸ್ಥೆ, ವಿಶ್ವೇಶ್ವರಯ್ಯ ವಿದ್ಯಾಸಂಸ್ಥೆ, ಅಕ್ಕ ಮಹಾದೇವಿ ಶಿಕ್ಷಣ ಸಂಸ್ಥೆ, ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆ, ಬಸವೇಶ್ವರ ವಿದ್ಯಾಸಂಸ್ಥೆ, ಸೇಂಟ್ ಮೇರಿಸ್ ವಿದ್ಯಾಸಂಸ್ಥೆ ಹಾಗೂ ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆ ಒಟ್ಟು ೧೦ ಶಿಕ್ಷಣ ಸಂಸ್ಥೆಗಳ ಶಾಲಾ ಮಕ್ಕಳು, ಮಹಿಳಾ ಸಂಘಗಳ ಸದಸ್ಯರು, ಬಾಲವಿಕಾಸ ಮಕ್ಕಳು, ಭಕ್ತರು ಸೇರಿದಂತೆ ಸಹಸ್ರಾರು ಮಂದಿ ಪಾಲ್ಗೊಂಡಿದ್ದರು. ರಥಯಾತ್ರೆ ನೋಡುಗರ ಕಣ್ಮನ ಸೆಳೆಯಿತು.