ಬಿ. ಶೇಖರ್ ಗೋಪಿನಾಥಂ
ಕನ್ನಡಪ್ರಭ ವಾರ್ತೆ ಮೈಸೂರುಅಶ್ವರೋಹಿದಳ ತಂಡದಿಂದ ಶೋ ಜಂಪಿಂಗ್ ಮತ್ತು ಟೆಂಟ್ ಪೆಗ್ಗಿಂಗ್, 3 ಸಾವಿರ ಡ್ರೋನ್ ಗಳ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮ, ಪಂಜಿನ ಬೆಳಕಿನ ಚಿತ್ತಾರದ ಕವಾಯತಿನೊಂದಿಗೆ 2025ನೇ ಸಾಲಿನ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ತೆರೆ ಎಳೆಯಲಾಯಿತು.
ದಸರಾ ಅಂಗವಾಗಿ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಗುರುವಾರ ರಾತ್ರಿ ನಡೆದ ಪಂಜಿನ ಕವಾಯತು (ಟಾರ್ಚ್ ಲೈಟ್ ಪೆರೇಡ್) ಪ್ರದರ್ಶನವು ಆಕರ್ಷಕ ಜರುಗಿತು. ನೆರೆದಿದ್ದ ಸಹಸ್ರಾರು ಜನರು ಬೆಳಕಿನ ವೈಭವವನ್ನು ಕಣ್ಣು ತುಂಬಿಕೊಂಡು ಸಂಭ್ರಮಿಸಿದರು.ಕಾರ್ಯಕ್ರಮದ ಮೊದಲಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋತ್ ಅವರು ಪೊಲೀಸರು ಸೇರಿದಂತೆ 18 ವಿವಿಧ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿ ಪಂಜಿನ ಕವಾಯತು ಕಾರ್ಯಕ್ರಮಕ್ಕೆ ಮುನ್ನುಡಿ ಬರೆದರು. ಆ ನಂತರದಲ್ಲಿ ಪ್ರಧಾನ ದಳಪತಿ ಕೆ.ಎನ್. ಸುರೇಶ್, ಉಪ ಪ್ರಧಾನ ದಳಪತಿ ಎಸ್.ಡಿ. ಸಾಸನೂರ್ ಅವರ ನೇತೃತ್ವದಲ್ಲಿ ನಡೆದ ಪರೇಡ್ ಆಕರ್ಷಕವಾಗಿತ್ತು. ಅಶ್ವರೋಹಿ ದಳ ಸೇರಿದಂತೆ ವಿವಿಧ ಪೊಲೀಸ್ ತುಕಡಿಗಳು, ಎನ್ ಸಿಸಿ, ಸ್ಕೌಟ್ಸ್, ನವೋದಯ ಶಾಲೆ, ಸೇವಾ ದಳದ ಬಾಲಕ, ಬಾಲಕಿಯರು, ಗೃಹರಕ್ಷಕರು ಆಕರ್ಷಕ ಪರೇಡ್ ನಲ್ಲಿ ಪಾಲ್ಗೊಂಡಿದ್ದರು.
ನಂತರ ರಾಷ್ಟ್ರಗೀತೆಯನ್ನು ಪೊಲೀಸ್ ಬ್ಯಾಂಡ್ ಸದಸ್ಯರು ನುಡಿಸಿದರು. ಈ ವೇಳೆ 7 ಪಿರಂಗಿಗಳನ್ನು ಬಳಸಿ 21 ಕುಶಾಲತೋಪುಗಳನ್ನು ಸಿಡಿಸಲಾಯಿತು. ನಂತರ ನಾಡಗೀತೆಯನ್ನು ಚೈತ್ರಾ ಮತ್ತು ಸುಮಂತ್ ವಸಿಷ್ಠ ತಂಡದವರು ಹಾಡಿದರು.ಬಳಿಕ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ 300 ಡ್ರಮರ್ ಗಳು, ನೃತ್ಯಪಟುಗಳು ಹಾಗೂ ಮಕ್ಕಳು ನೃತ್ಯ ಪ್ರದರ್ಶಿಸಿ ಪ್ರೇಕ್ಷಕರ ಮನಗೆದ್ದರು. ಡ್ರಮ್ಸ್ ಹಾಗೂ ವಿವಿಧ ಗೀತೆಗಳಿಗೆ ನೂರಾರು ಮಂದಿ ಒಂದೇ ಬಾರಿಗೆ ನೀಡಿದ ನೃತ್ಯ ಪ್ರದರ್ಶನ ಚೆನ್ನಾಗಿತ್ತು. ಇದಕ್ಕೂ ಮುನ್ನ ನಡೆದ ಸೌಂಡ್ ಅಂಡ್ ಲೈಟ್ಸ್ ಪ್ರದರ್ಶನ ಮೈದಾನದಲ್ಲಿ ದನಿ ಮತ್ತು ಬೆಳಕಿನ ಆಟಕ್ಕೆ ಸಾಕ್ಷಿ ಆಯಿತು.
ಮೈಸೂರಿನ ಅಶ್ವರೋಹಿದಳದ ತಂಡದ ಸಿಬ್ಬಂದಿ ಶೋ ಜಂಪಿಂಗ್ ನಲ್ಲಿ ವಿವಿಧ ಪ್ರದರ್ಶನ ನಡೆಸಿಕೊಟ್ಟು ಗಮನ ಸೆಳೆದರೆ. ನಂತರ ಕುದುರೆಯಲ್ಲಿ ಶರ ವೇಗವಾಗಿ ಆಗಮಿಸಿ ಟೆಂಟ್ ಪೆಗ್ಗಿಂಗ್ ಮಾಡುವ ಮೂಲಕ ನೆರೆದಿದ್ದವರನ್ನು ಕೆಲಕಾಲ ರೋಮಾಂಚನಗೊಳಿಸಿದರು.3 ಸಾವಿರ ಡ್ರೋನ್ ಗಳ ಕಲರವ
ದಸರೆಯ ಪ್ರಮುಖ ಆಕರ್ಷಣೆಯಾಗಿರುವ ಡ್ರೋನ್ ಶೋ ನೋಡುಗರ ಕಣ್ಮನ ಸೆಳೆಯಿತು. ಬಣ್ಣ ಬಣ್ಣದ ದೀಪಗಳಿಂದ ಮಿನುಗುತ್ತಾ 3000 ಸಾವಿರ ಡ್ರೋನ್ ಗಳು ಬಾನಂಗಳದಲ್ಲಿ ಸಂಗೀತಗಳ ಹಿಮ್ಮೇಳದೊಂದಿಗೆ ಸೌರಮಂಡಲ, ವಿಶ್ವಭೂಪಟ, ದೇಶದ ಹೆಮ್ಮೆಯ ಸೈನಿಕ, ರಾಷ್ಟ್ರೀಯ ಪಕ್ಷಿ ನವಿಲು, ರಾಷ್ಟ್ರೀಯ ಪ್ರಾಣಿ ಹುಲಿ, ಡಾಲ್ಫಿನ್, ಈಗಲ್, ಸರ್ಪದ ಮೇಲೆ ಶ್ರೀಕೃಷ್ಣ ನೃತ್ಯ, ಕಾವೇರಿ ಮಾತೆ, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಭಾವಚಿತ್ರದೊಂದಿಗೆ ಪಂಚ ಗ್ಯಾರಂಟಿ ಯೋಜನೆಗಳಿಂದ ಕೂಡಿದ್ದ ಕರ್ನಾಟಕ ಭೂಪಟ, ಅಂಬಾರಿ ಆನೆ, ನಾಡದೇವತೆ ಚಾಮುಂಡೇಶ್ವರಿ ಕಲಾಕೃತಿಗಳು ನೋಡುಗರಿಗೆ ಅದ್ಭುತ ಮನರಂಜನೆ ನೀಡಿದವು. ಸೆಸ್ಕ್ ಆಯೋಜಿಸಿದ್ದ ಈ ಡ್ರೋನ್ ಪ್ರದರ್ಶನಕ್ಕೆ ಪ್ರೇಕ್ಷಕರು ಮನಸೋತರು.ಪಂಜಿನ ಕವಾಯತು
ಅಂತಿಮವಾಗಿ ಕರ್ನಾಟಕ ಪೊಲೀಸ್ ಇಲಾಖೆಯ 300 ಮಂದಿ ಸಿಬ್ಬಂದಿ ಆಕರ್ಷಕವಾಗಿ ಪಂಜಿನ ಕವಾಯತು ಪ್ರಸ್ತುತಪಡಿಸಿದರು. ಎಲ್ಲಾ ಪೊಲೀಸರು ಬಿಳಿ ಸಮವಸ್ತ್ರದೊಂದಿಗೆ ಬನ್ನಿಮಂಟಪ ಮೈದಾನದಕ್ಕೆ ಪಂಜಿನ ಕವಾಯತುನೊಂದಿಗೆ ಪ್ರವೇಶಿಸಿ, ಸುಸ್ವಾಗತ, ಜೈ ಚಾಮುಂಡಿ, ಗಾಂಧಿ ಜಯಂತಿ ಶುಭಾಶಯಗಳು, ನುಡಿ ಕನ್ನಡ- ನಡೆ ಕನ್ನಡ, ಜೀವನದಿ ಕಾವೇರಿ, ನೇಗಿಲಯೋಗಿಗೆ ನಮನ, ಕರ್ನಾಟಕ ಪೊಲೀಸ್, ನಮ್ಮ ಪೋಲಿಸ್- ನಮ್ಮ ಹೆಮ್ಮೆ, ಜೈ ಚಾಮುಂಡಿ, ಜೈ ಹಿಂದ್ ಮೊದಲಾದ ಪದಗಳನ್ನು ಕನ್ನಡ ಮತ್ತು ಇಂಗ್ಲಿಷ್ ಅಕ್ಷರಗಳಲ್ಲಿ ಪಂಜಿನ ಮೂಲಕ ಮೂಡಿಸಿದರು. ಅಲ್ಲದೆ, ಪಂಜಿನೊಂದಿಗೆ ವೈವಿಧ್ಯಮಯ ಪ್ರದರ್ಶನ ನೀಡಿದರು.ಇದರೊಂದಿಗೆ 11 ದಿನಗಳ ಕಾಲ ನಡೆದ ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವವು ವರ್ಣರಂಜಿತವಾಗಿ ಸಮಾರೋಪಗೊಂಡಿತು.
ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ಡಾ.ಎಚ್.ಸಿ. ಮಹದೇವಪ್ಪ, ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಮೊದಲಾದವರು ಭಾಗವಹಿಸಿದ್ದರು.-----------------
eom/mys/shekar/