ಕನ್ನಡಪ್ರಭ ವಾರ್ತೆ ಉಡುಪಿ
ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆಯು ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ಸಹಯೋಗದೊಂದಿಗೆ ಜೂ.15 ಮತ್ತು 16ರಂದು ಬೆಂಗಳೂರಿನ ಅರಮನೆ ಮೈದಾನದ ಪ್ರಿನ್ಸೆಸ್ ಶ್ರೈನ್ ಗೇಟ್ ನಂ.9ರಲ್ಲಿ ‘ದಕ್ಷಿಣ ಭಾರತ ಉತ್ಸವ -2024’ ನಡೆಯಲಿದೆ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಹಿರಿಯ ಉಪಾಧ್ಯಕ್ಷ ಎಂ.ಜಿ ಬಾಲಕೃಷ್ಣ ತಿಳಿಸಿದ್ದಾರೆ.ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮವು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೂಡಿಕೆಯ ಅವಕಾಶಗಳು ಮತ್ತು ಉದ್ಯೋಗ ಸೃಷ್ಟಿಗೆ ಪ್ರಾಮುಖ್ಯತೆ ನೀಡುವ ಮೂಲಕ ದಕ್ಷಿಣ ಭಾರತದ ರಾಜ್ಯಗಳ ಪ್ರವಾಸೋದ್ಯಮ ಸಾಮರ್ಥ್ಯವನ್ನು ಪ್ರದರ್ಶಿಸುವ ಗುರಿಯನ್ನು ಹೊಂದಿದೆ. ಪ್ರವಾಸೋದ್ಯಮ ಹೂಡಿಕೆದಾರರ ಸಭೆ, ದಕ್ಷಿಣ ರಾಜ್ಯಗಳ ಶ್ರೀಮಂತ ಸಂಸ್ಕೃತಿ, ಪಾಕಪದ್ಧತಿ ಮತ್ತು ಪ್ರವಾಸೋದ್ಯಮ ಕೊಡುಗೆಗಳನ್ನು ವಿಶ್ಲೇಷಿಸಿ ತೋರಿಸುವ ಪ್ರದರ್ಶನ, ಸಮ್ಮೇಳನಗಳು ಮತ್ತು ಬಿ2ಬಿ, ಬಿ2ಜಿ ಮತ್ತು ಬಿ2ಸಿ ಅಮೂಲ್ಯವಾದ ಸರಣಿ ಸಂವಹನಗಳ ಮೂಲಕ ಅವಕಾಶಗಳು ಸೇರಿದಂತೆ ವೈವಿಧ್ಯಮಯ ಚಟುವಟಿಕೆಗಳನ್ನು ಒಳಗೊಂಡಿದೆ ಎಂದರು.ಕರಾವಳಿಯ ಬೀಚ್ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸುವುದರಿಂದ ಉದ್ಯೋಗ ಸೃಷ್ಟಿ, ಆರ್ಥಿಕತೆಯಲ್ಲಿ ಚೇತರಿಕೆ ಕಾಣುತ್ತದೆ. ಕರ್ನಾಟಕದ ಕರಾವಳಿ ಭಾಗದಲ್ಲಿ ಸಾಕಷ್ಟು ಬೀಚ್‌ಗಳಿದ್ದು, ಅವುಗಳು ಹೇಳುವಷ್ಟು ಪ್ರಮಾಣದಲ್ಲಿ ಅಭಿವೃದ್ಧಿ ಕಂಡಿಲ್ಲ. ಕೇರಳ ಮತ್ತು ಮಾಲ್ಡೀವ್ಸ್‌ಗೆ ಹೋಲಿಸಿದರೆ, ನಮ್ಮ ಬೀಚ್‌ಗಳ ಅಭಿವೃದ್ಧಿ ಏನು ಸಾಲುತ್ತಿಲ್ಲ. ಇವುಗಳಿಗೆ ಸಿ.ಆರ್.ಝಡ್. ಸಮಸ್ಯೆ ಸೇರಿದಂತೆ ಕೆಲವು ತಾಂತ್ರಿಕ ಅಡಚಣೆಗಳಿವೆ. ಇದನ್ನು ಕಾರ್ಯಕ್ರಮದಲ್ಲಿ ಚರ್ಚಿಸಿ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದರು.
ಪ್ರವಾಸೋದ್ಯಮದ ಅಭಿವೃದ್ಧಿಗೆ ಸುಮಾರು 500 ಕೋಟಿ ರು. ಹೂಡಿಕೆ ಮಾಡಲು ಉದ್ಯಮದಾರರು, ಆಸಕ್ತರು ಪ್ರಸ್ತಾವನೆ ಸಲ್ಲಿಕೆಯಾಗಿದೆ. ಕಾರವಾರದಲ್ಲಿ ರೆಸಾರ್ಟ್ ನಿರ್ಮಾಣಕ್ಕೆ 30 ಕೋಟಿ ರು. ಪ್ರಸ್ತಾವನೆ ಬಂದಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಸಾಯಿರಾಧ ಮನೋಹರ್ ಶೆಟ್ಟಿ, ಅಂಡಾರು ದೇವಿಪ್ರಸಾದ್ ಶೆಟ್ಟಿ, ಪಿ.ಸಿ.ರಾವ್, ನಾಗರಾಜ್ ಹೆಬ್ಬಾರ್ ಉಪಸ್ಥಿತರಿದ್ದರು.