ಕನ್ನಡಪ್ರಭ ವಾರ್ತೆ ಕೊಪ್ಪಳ
ಮೇ 30ರಿಂದ ಆರಂಭವಾಗುವ ಸುಪ್ರಸಿದ್ಧ ಹುಲಿಗೆಮ್ಮದೇವಿ ಜಾತ್ರೆಯಲ್ಲಿ ದೇವಿಯ ಹೆಸರಿನಲ್ಲಿ ಸಾವಿರಾರು ಪ್ರಾಣಿಗಳನ್ನು ಬಲಿ ನೀಡಲಾಗುತ್ತದೆ. ಇದನ್ನು ತಡೆಯುವಂತೆ ವಿಶ್ವ ಪ್ರಾಣಿ ಕಲ್ಯಾಣ ಮಂಡಳಿಯ ಅಧ್ಯಕ್ಷ ದಯಾನಂದ ಸ್ವಾಮಿ ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಲಿಗೆಮ್ಮ ದೇವಸ್ಥಾನವು ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿದೆ. ಇಲ್ಲಿಯೇ ಪ್ರಾಣಿ ಬಲಿ ನೀಡಲಾಗುತ್ತಿದೆ. ಆದರೆ, ಹೈಕೋರ್ಟ್ ಆದೇಶದಂತೆ ಮತ್ತು ಸರ್ಕಾರದ ನಿಯಮದಂತೆ ದೇವರ ಹೆಸರಿನಲ್ಲಿ ಮತ್ತು ದೇವಸ್ಥಾನ ವ್ಯಾಪ್ತಿಯಲ್ಲಿ ಪ್ರಾಣಿ ಬಲಿ ನೀಡುವುದು ಅಕ್ಷಮ್ಯ ಅಪರಾಧವಾಗಿದೆ. ಹೀಗಾಗಿ, ಜಿಲ್ಲಾಡಳಿತ ಇದಕ್ಕೆ ಅವಕಾಶ ನೀಡಬಾರದು ಎಂದರು.
ಈ ಹಿಂದೆ ದೇವಸ್ಥಾನದಲ್ಲಿಯೇ ಪ್ರಾಣಿ ಬಲಿ ನೀಡಲಾಗುತ್ತಿತ್ತು, ಹುಲಿಗೆಮ್ಮ ದೇವಿಯ ಜಾತ್ರೆಯಲ್ಲಿ ಈಗ ದೂರದಲ್ಲಿ ಪ್ರಾಣಿ ಬಲಿ ನೀಡಲಾಗುತ್ತದೆ. ಆದರೆ, ಇದು ಕೂಡಾ ಕಾನೂನು ಪ್ರಕಾರ ತಪ್ಪಾಗಿರುವುದಿಂದ ತಡೆಯುವಂತೆ ಆಗ್ರಹಿಸಿದರು. ಅಷ್ಟೇ ಅಲ್ಲ, ಜಾತ್ರೆಯ ನಂತರದಲ್ಲಿ ಪ್ರಾಣಿ ಬಲಿ ನೀಡಲಾಗುತ್ತಿದೆ. ಜಾತ್ರೆ ಅಷ್ಟೆ ಅಲ್ಲ ಯಾವಾಗಲೂ ಪ್ರಾಣಿ ಬಲಿ ನೀಡುವುದನ್ನು ನಿಲ್ಲಿಸಬೇಕೆಂದು ಆಗ್ರಹಿಸಿದರು.ದೇಶದಲ್ಲಿಯೂ ಪ್ರಾಣಿ ಬಲಿ ಅವ್ಯಾಹತವಾಗಿ ನಡೆಯುತ್ತಿದೆ. ಮಾಂಸ ಮಾರಾಟದಲ್ಲಿ ಜಗತ್ತಿನಲ್ಲಿಯೇ ಭಾರತ ಎರಡನೇ ಸ್ಥಾನದಲ್ಲಿ ಇದೆ. ಪ್ರಧಾನಿ ನರೇಂದ್ರ ಮೋದಿ ಅವರು ಸಹ ಇದನ್ನು ತಡೆಯುವಲ್ಲಿ ವಿಫಲವಾಗಿದ್ದಾರೆ ಎಂದು ಆರೋಪಿಸಿದರು.
ಕೇವಲ ಹಸು ಅಲ್ಲ, ಯಾವುದೇ ಪ್ರಾಣಿಯನ್ನು ಬಲಿ ನೀಡುವುದು ತಪ್ಪು. ಯಾವ ಪ್ರಾಣಿಯನ್ನು ಕೊಲ್ಲುವುದಕ್ಕೆ ಮನುಷ್ಯನಿಗೆ ಅಧಿಕಾರ ಇಲ್ಲ. ಪ್ರತಿಯೊಂದು ಜೀವಿಗೂ ಬದುಕುವ ಹಕ್ಕಿದೆ. ಅದನ್ನು ಕಿತ್ತುಕೊಳ್ಳುವುದು ಸರಿಯಲ್ಲ. ಆದ್ದರಿಂದ ಮಾಂಸಾಹಾರ ತ್ಯಜಿಸಿ, ಸಸ್ಯಾಹಾರ ಬಳಕೆ ಮಾಡಬೇಕು ಎನ್ನುವುದು ನಮ್ಮ ಸದಾಶಯ ಮತ್ತು ಕಾಳಜಿ. ಹಾಗಂತ ನಾವು, ಮಾಂಸಾಹಾರ ಮಾಡುವುದು ತಪ್ಪು ಎಂದು ವಿರೋಧಿಸುವುದಿಲ್ಲ. ಆಹಾರ ಪದ್ಧತಿ ಅವರವರ ಹಕ್ಕಾಗಿದೆ ಎಂದರು.