ಸಮುದಾಯದ ಉನ್ನತಿಗೆ ಶಿಕ್ಷಣ ಅಸ್ತ್ರ ಬಳಸಿ

KannadaprabhaNewsNetwork | Published : May 30, 2024 12:54 AM

ಸಾರಾಂಶ

ಚಿತ್ರದುರ್ಗದ ನೀಲಕಂಠೇಶ್ವರಸ್ವಾಮಿ ಸಮುದಾಯ ಭವನದಲ್ಲಿ ಬುಧವಾರ ನಡೆದ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಶೇಖರಗೌಡ ಮಾಲಿ ಪಾಟೀಲ್ ಉದ್ಘಾಟಿಸಿದರು.

ಕನ್ನಡಪ್ರಭವಾರ್ತೆ ಚಿತ್ರದುರ್ಗ ಸಮುದಾಯದ ಉನ್ನತಿಗೆ ಶಿಕ್ಷಣದ ಅಸ್ತ್ರ ಬಳಸುವಂತೆ ವೀರಶೈವ ಲಿಂಗಾಯತ ಹೇಮರಡ್ಡಿ ಮಲ್ಲಮ್ಮ ಸಮಾಜದ ರಾಜ್ಯಾಧ್ಯಕ್ಷ ಶೇಖರಗೌಡ ಮಾಲಿ ಪಾಟೀಲ್ ಮನವಿ ಮಾಡಿದರು.ಜಿಲ್ಲಾ ವೀರಶೈವ ಲಿಂಗಾಯತ ಹೇಮರೆಡ್ಡಿ ಮಲ್ಲಮ್ಮ ಸಮಾಜದಿಂದ ನೀಲಕಂಠೇಶ್ವರಸ್ವಾಮಿ ಸಮುದಾಯ ಭವನದಲ್ಲಿ ಬುಧವಾರ ನಡೆದ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣದಿಂದ ಮಾತ್ರ ಸಾಧನೆ ಮಾಡಬಹುದು ಎಂಬ ಸಂಗತಿ ವಿದ್ಯಾರ್ಥಿಗಳ ಮನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ರೆಡ್ಡಿ ಸಮಾಜವನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಬೇಕಾಗಿರುವುದರಿಂದ ಪ್ರತಿಯೊಬ್ಬರು ಸದಸ್ಯತ್ವ ಪಡೆದುಕೊಳ್ಳುವುದು ಅಗತ್ಯ. ಶ್ರೀಶೈಲ ಪೀಠದ ಜಗದ್ಗುರುಗಳ ಆಶಯದಂತೆ 2016 ರಲ್ಲಿ ರಾಜ್ಯಾದ್ಯಂತ ಸಂಚರಿಸಿ ದೊಡ್ಡ ಜ್ಯೋತಿ ಯಾತ್ರೆ ನಡೆಸಿ ಸರ್ಕಾರದ ಗಮನ ಸೆಳೆದಾಗ, ಅಂದಿನಿಂದ ಸರ್ಕಾರ ಪ್ರತಿ ವರ್ಷ ಮೇ.10 ರಂದು ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಿಸಿಕೊಂಡು ಬರುತ್ತಿದೆ. ಕರ್ನಾಟಕದ 18 ಜಿಲ್ಲೆಗಳಲ್ಲಿ ನಮ್ಮ ರೆಡ್ಡಿ ಸಮಾಜ ಅಸ್ತಿತ್ವದಲ್ಲಿದೆ. ಇನ್ನು ಬಲವಾಗಿ ಸಂಘಟಿಸಬೇಕಾಗಿರುವುದರಿಂದ ಎಲ್ಲರೂ ಸದಸ್ಯತ್ವ ಪಡೆದುಕೊಂಡು ಬಡ ಪ್ರತಿಭಾವಂತ ಮಕ್ಕಳ ಶಿಕ್ಷಣಕ್ಕೆ ನೆರವಾಗಬೇಕು ಎಂದು ಹೇಳಿದರು.

ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮ ಶ್ರೀಶೈಲ ಮಲ್ಲಿಕಾರ್ಜುನನ ಧ್ಯಾನ ಮಾಡಿ ಬಂದ ಕಷ್ಟವನ್ನೆಲ್ಲಾ ಪರಿಹರಿಸಿಕೊಳ್ಳುತ್ತಾಳೆ. ಆಕೆಯ ಬದ್ಧತೆ ಎಲ್ಲರಿಗೂ ಮಾರ್ಗದರ್ಶಿಯಾಗಬೇಕೆಂದು ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹೆಚ್.ಟಿ.ನಾಗಿರೆಡ್ಡಿ ಮಾತನಾಡಿ, ವೀರಶೈವ ಲಿಂಗಾಯತ ಹೇಮರೆಡ್ಡಿ ಮಲ್ಲಮ್ಮ ಸಮಾಜದವರಿಗೆ ಈಗ ಸಂಘಟನೆಗೆ ಪ್ರೇರಣೆ ಒದಗಿದೆ. 600 ವರ್ಷಗಳ ಹಿಂದೆ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಶಿವಶರಣೆಯಾಗಿದ್ದಳು. ಗಂಡನ ಮನೆಯಲ್ಲಿ ಎಲ್ಲರೂ ಸೇರಿಕೊಂಡು ಕಿರುಕುಳ ಕೊಟ್ಟರು ಎದೆಗುಂದದೆ ಶ್ರೀಶೈಲ ಮಲ್ಲಿಕಾರ್ಜುನನ ಪ್ರಸಾದವೆಂದು ಸ್ವೀಕರಿಸಿದಳು. ತನ್ನ ಕುಟುಂಬಕ್ಕೆ, ಸ್ವಾರ್ಥಕ್ಕೆ ಏನನ್ನು ಕೇಳಲಿಲ್ಲ. ವೈಷ್ಣವ ಪಂಥ, ಶೈವ ಪಂಥ ಎರಡನ್ನು ನಮ್ಮ ಸಮಾಜ ಅನುಸರಿಸಿಕೊಂಡು ಬರುತ್ತಿದೆ. ಹೇಮರೆಡ್ಡಿ ಮಲ್ಲಮ್ಮನ ಜೀವನ ಚರಿತ್ರೆ, ನಡೆ ನುಡಿ ಆದರ್ಶವೇ ನಮಗೆ ದಾರಿದೀಪವಾಗಬೇಕಿದೆ ಎಂದರು.

ಜಿಲ್ಲಾ ವೀರಶೈವ ಲಿಂಗಾಯತ ಹೇಮರಡ್ಡಿ ಮಲ್ಲಮ್ಮ ಸಮಾಜದ ಅಧ್ಯಕ್ಷ ಜಿ.ಚಿದಾನಂದಪ್ಪ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಡಿ.ಟಿ.ಶಿವಾನಂದ, ನಿವೃತ್ತ ಶಾಲಾ ತನಿಖಾಧಿಕಾರಿ ಶಿವಪ್ರಸಾದ್, ಶ್ರೀಮತಿ ಸುನಂದಮ್ಮ, ಕೆ.ಟಿ.ಮಲ್ಲಿಕಾರ್ಜುನಪ್ಪ ದಂಪತಿಗಳು ವೇದಿಕೆಯಲ್ಲಿದ್ದರು.

ಗೀತ ರುದ್ರೇಶ್, ಜಯಶೀಲ ವೀರಣ್ಣ, ರಶ್ಮಿ ಉಮೇಶ್ ಪ್ರಾರ್ಥಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಜಿ.ಆರ್.ಮಲ್ಲಿಕಾರ್ಜುನಯ್ಯ ಸ್ವಾಗತಿಸಿದರು. ನ್ಯಾಯವಾದಿ ಎನ್.ಬಿ.ವಿಶ್ವನಾಥ್ ವಂದಿಸಿದರು.

Share this article