ಪೌತಿ ಖಾತೆ ಆಂದೋಲನದ ಪ್ರಯೋಜನ ಪಡೆಯಿರಿ

KannadaprabhaNewsNetwork | Published : May 22, 2025 12:48 AM
ತಾಲೂಕಿನಲ್ಲಿ ಬಾಗೂರು ಹೋಬಳಿ ಕೇಂದ್ರ ಹೆಚ್ಚು ವಿಸ್ತೀರ್ಣ ಹಾಗೂ ಜನಸಂಖ್ಯೆಯನ್ನು ಹೊಂದಿದೆ. ಆದ್ದರಿಂದಲೇ ಪೌತಿ ಖಾತೆ ಆಂದೋಲನಕ್ಕೆ ತಾಲೂಕಿನಲ್ಲೇ ಮೊದಲು ಹೋಬಳಿ ಕೇಂದ್ರವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ತಾಲೂಕು ಆಡಳಿತದ ವತಿಯಿಂದ ರೈತರಿಗೆ ತ್ವರಿತಗತಿಯಲ್ಲಿ ಅವರು ಸಲ್ಲಿಸುವ ಮನವಿಗಳಿಗೆ ಸ್ಪಂದಿಸುವಂತೆ ತಿಳಿಸಲಾಗಿದೆ. ಪೌತಿ ಖಾತೆ ಆಂದೋಲದಲ್ಲಿ ಈಗಾಗಲೇ ಸುಮಾರು 122 ಅರ್ಜಿಗಳು ಸಲ್ಲಿಕೆಯಾಗಿದ್ದು, ತಿದ್ದುಪಡಿಗಾಗಿ 30 ಅರ್ಜಿಗಳನ್ನು ರೈತರು ಈಗಾಗಲೇ ಸಲ್ಲಿಸಿದ್ದಾರೆ ಎಂದು ಶಾಸಕ ಬಾಲಕೃಷ್ಣ ತಿಳಿಸಿದರು.
Follow Us

ಕನ್ನಡಪ್ರಭ ವಾರ್ತೆ ಬಾಗೂರು

ಹೋಬಳಿ ಕೇಂದ್ರದಲ್ಲಿ ತಾಲೂಕು ಆಡಳಿತದ ವತಿಯಿಂದ ನಡೆಸಲಾಗುತ್ತಿರುವ ಪೌತಿ ಖಾತೆ ಆಂದೋಲನದಲ್ಲಿ ಸಾರ್ವಜನಿಕರು ಹಾಗೂ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರಯೋಜನ ಪಡೆಯುವಂತೆ ಶಾಸಕ ಸಿ ಎನ್‌ ಬಾಲಕೃಷ್ಣ ಮನವಿ ಮಾಡಿದರು.

ಹೋಬಳಿ ಕೇಂದ್ರದಲ್ಲಿ ತಾಲೂಕು ಆಡಳಿತ ವತಿಯಿಂದ ಏರ್ಪಡಿಸಲಾಗಿದ್ದ ಪೌತಿಖಾತೆ ಆಂದೋಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ತಾಲೂಕಿನಲ್ಲಿ ಬಾಗೂರು ಹೋಬಳಿ ಕೇಂದ್ರ ಹೆಚ್ಚು ವಿಸ್ತೀರ್ಣ ಹಾಗೂ ಜನಸಂಖ್ಯೆಯನ್ನು ಹೊಂದಿದೆ. ಆದ್ದರಿಂದಲೇ ಪೌತಿ ಖಾತೆ ಆಂದೋಲನಕ್ಕೆ ತಾಲೂಕಿನಲ್ಲೇ ಮೊದಲು ಹೋಬಳಿ ಕೇಂದ್ರವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ತಾಲೂಕು ಆಡಳಿತದ ವತಿಯಿಂದ ರೈತರಿಗೆ ತ್ವರಿತಗತಿಯಲ್ಲಿ ಅವರು ಸಲ್ಲಿಸುವ ಮನವಿಗಳಿಗೆ ಸ್ಪಂದಿಸುವಂತೆ ತಿಳಿಸಲಾಗಿದೆ. ಪೌತಿ ಖಾತೆ ಆಂದೋಲದಲ್ಲಿ ಈಗಾಗಲೇ ಸುಮಾರು 122 ಅರ್ಜಿಗಳು ಸಲ್ಲಿಕೆಯಾಗಿದ್ದು, ತಿದ್ದುಪಡಿಗಾಗಿ 30 ಅರ್ಜಿಗಳನ್ನು ರೈತರು ಈಗಾಗಲೇ ಸಲ್ಲಿಸಿದ್ದಾರೆ. ಸಂಜೆವರೆಗೂ ನಡೆಯುವ ಆಂದೋಲನದಲ್ಲಿ ರೈತರು ಅರ್ಜಿ ಸಲ್ಲಿಸಿ ಕಾರ್ಯಕ್ರಮದ ಪ್ರಯೋಜನ ಪಡೆಯುವಂತೆ ಮನವಿ ಮಾಡಿದರು.ಹೋಬಳಿ ಕೇಂದ್ರದಲ್ಲಿ ಕುಂದೂರು ಮಠ ರಸ್ತೆಯ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದ ಹಿಂಭಾಗ ಸುಮಾರು 5 ಎಕರೆಗೂ ಹೆಚ್ಚು ಸರ್ಕಾರಿ ಜಾಗವಿದ್ದು, ಸುಮಾರು 4 ಎಕರೆಯನ್ನು ಮೊರಾರ್ಜಿ ವಸತಿ ಶಾಲೆಗೆ ಮೀಸಲಿಡಲು ತೀರ್ಮಾನಿಸಲಾಗಿದೆ ಹಾಗೂ ಉಳಿದ ಜಾಗವನ್ನು ವಸತಿ ರಹಿತ ಫಲಾನುಭವಿಗಳಿಗೆ ವಿತರಿಸಲು ಚಿಂತನೆ ನಡೆಸಲಾಗಿದೆ ಎಂದರು. ಹೋಬಳಿ ಕೇಂದ್ರ ಹೆಚ್ಚು ವಿಸ್ತೀರ್ಣ ಹೊಂದಿರುವುದರಿಂದ ಹಾಗೂ ಈ ಆಂದೋಲನದ ಬಗ್ಗೆ ಹೆಚ್ಚು ಪ್ರಚಾರ ಮಾಡಿಲ್ಲ ಎಂದು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜೂನ್ 20ರಂದು ಪುನಃ ಹೋಬಳಿ ಕೇಂದ್ರದಲ್ಲಿ ಪೌತಿ ಆಂದೋಲನ ನಡೆಸುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ.ಈ ಕಾರ್ಯಕ್ರಮದಿಂದ ರೈತರಿಗೆ ಹೆಚ್ಚು ಅನುಕೂಲವಾಗುತ್ತಿದೆ. ಈ ಕಾರ್ಯಕ್ರಮವನ್ನು ಜಾರಿಗೆ ತಂದಿರುವ ರಾಜ್ಯ ಸರ್ಕಾರ ಹಾಗೂ ಕಂದಾಯ ಇಲಾಖೆಗೆ ಅಭಿನಂದನೆ ಸಲ್ಲಿಸುತ್ತಿದ್ದೇನೆ. ರೈತರು ದಯಮಾಡಿ ಮಧ್ಯವರ್ತಿಗಳ ಮಾತನ್ನು ಕೇಳದೆ ಸಂಪೂರ್ಣ ಉಚಿತವಾಗಿ ಈ ಕಾರ್ಯಕ್ರಮದ ಮೂಲಕ ಉಚಿತವಾಗಿ ಖಾತೆಯನ್ನು ಮಾಡಿಕೊಳ್ಳಬಹುದಾಗಿದೆ. ಯಾರಾದರೂ ಖಾತೆ ಮಾಡಲು ಹಣ ಕೇಳಿದರೆ ತಾಲೂಕು ದಂಡಾಧಿಕಾರಿಗಳಿಗೆ ಹಾಗೂ ನನಗೆ ದೂರು ಸಲ್ಲಿಸುವಂತೆ ತಿಳಿಸಿದರು.ತಹಸೀಲ್ದಾರ್ ನವೀನ್ ಕುಮಾರ್ ಮಾತನಾಡಿ, ಕಳೆದ ವರ್ಷ ಸುಮಾರು 1341 ಅರ್ಜಿಗಳನ್ನು ಪೌತಿ ಖಾತೆ ಆಂದೋಲನದಲ್ಲಿ ಸಲ್ಲಿಸಿದರು. ಎಲ್ಲಾ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಈ ವರ್ಷ ಸಲ್ಲಿಸುವ ಅರ್ಜಿಗಳನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳಿಸಲಾಗುತ್ತದೆ ಎಂದರು. ಎಪಿಎಂಸಿ ಮಾಜಿ ಅಧ್ಯಕ್ಷ ಬಾಗೂರು ಶಿವಣ್ಣ ಮಾತನಾಡಿದರು. ಕಾರ್ಯಕ್ರಮದಲ್ಲಿ ವೃದ್ಧಾಪ್ಯ ವೇತನ, ವಿಧವಾ ವೇತನ ಸೇರಿದಂತೆ ವಿವಿಧ ಫಲಾನುಭವಿಗಳಿಗೆ ಸರ್ಕಾರದ ಮಂಜೂರಾತಿ ಪತ್ರವನ್ನು ಶಾಸಕರು ವಿತರಣೆ ಮಾಡಿದರು. ಕಾರ್ಯಕ್ರಮದಲ್ಲಿ ಬಾಗೂರು ಗ್ರಾಪಂ ಅಧ್ಯಕ್ಷ ಕೆಂಪೇಗೌಡ, ಹೋಬಳಿ ಉಪ ತಹಸೀಲ್ದಾರ್ ಮೋಹನ್, ಕಂದಾಯ ಅಧಿಕಾರಿ ರಾಜು, ಗ್ರಾಪಂ ಸದಸ್ಯರಾದ ರೂಪ ರಘು, ಶಂಕರ್, ವೆಂಕಟೇಶ್, ಅಣ್ಣೇಗೌಡ, ಕಾಳೇಶ್, ಕೃಷಿ ಪತ್ತಿನ ನಿರ್ದೇಶಕ ಹರೀಶ್, ಮುಖಂಡರಾದ ಮರಿ ದೇವೇಗೌಡ, ಗ್ರಾಮ ಲೆಕ್ಕಾಧಿಕಾರಿಗಳಾದ ಹರ್ಷ, ಪವಿತ್ರ, ಲಕ್ಷ್ಮಿಕಾಂತ್, ಓಮೇಶ್, ಸುಷ್ಮಾ, ಉಮೇಶ, ಶ್ರೀನಿವಾಸ್, ಪುಟ್ಟರಾಜು, ಯಾರಪ್ಪ, ಸಿಬ್ಬಂದಿಯಾದ ದ್ರಾಕ್ಷಾಯಿಣಿ ಮಹೇಶ್ ಸೇರಿದಂತೆ ಗ್ರಾಮ ಸಹಾಯಕರು ಹಾಗೂ ಇತರರು ಹಾಜರಿದ್ದರು.