ವಿಘ್ನೇಶ್ ಎಂ. ಭೂತನಕಾಡು
ರಾಜ್ಯ ಸರ್ಕಾರದ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಸುತ್ತಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಸಮಸ್ಯೆ ಇನ್ನೂ ಬಗೆ ಹರಿದಂತೆ ಕಾಣುತ್ತಿಲ್ಲ. ಕೊಡಗು ಜಿಲ್ಲೆಯಲ್ಲಿ ಸಮೀಕ್ಷಾ ಕಾರ್ಯದಲ್ಲಿ ಮತ್ತೆ ಸಾಕಷ್ಟು ತೊಡಕು ಉಂಟಾಗಿದೆ. ನೆಟ್ವರ್ಕ್, ತಾಂತ್ರಿಕ ದೋಷ, ಆ್ಯಪ್ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಯಿಂದಾಗಿ ಸಮೀಕ್ಷಾ ಕಾರ್ಯ ವಿಳಂಬವಾಗುವ ಸಾಧ್ಯತೆಯಿದೆ.
ಇಲ್ಲದಿರುವ ಮನೆಗೆ ಹೇಗೆ ಹೋಗಿ ಸರ್ವೆ ಮಾಡುವುದು ಎಂದು ಬಹುತೇಕ ಶಿಕ್ಷಕರು ಪ್ರಶ್ನೆ ಮಾಡುತ್ತಿದ್ದಾರೆ. ಸರ್ವರ್ ಸಮಸ್ಯೆಯಿಂದಾಗಿ ದಿನಕ್ಕೆ ಒಂದು ಮನೆಯನ್ನೂ ಪೂರ್ಣಗೊಳಿಸದಂತಹ ಪರಿಸ್ಥಿತಿ ಎದುರಾಗಿದೆ. ಎಲ್ಲ ಕಡೆ ಯುಎಚ್ಐಡಿ ನಂಬರ್ ಹುಡುಕಿಕೊಂಡು ಹೋದರೂ ಅಲ್ಲಿ ಮನೆ ಕೂಡ ಇಲ್ಲ ಎಂದು ಸಮೀಕ್ಷೆ ನಡೆಸುತ್ತಿರುವ ಸಿಬ್ಬಂದಿ ತಮ್ಮ ಅಳಲು ತೋಡಿಕೊಂಡಿದ್ದಾರೆ.ಓರ್ವ ಗಣತಿದಾರರಿಗೆ ಕೆಲವು ಕಡೆ (ಒಂದೇ ಕಡೆ ಮನೆ ಇರುವುದು) ಮನೆ ಒಂದು ಕಡೆ ಸಿಕ್ಕಿದರೆ, ಕೆಲವು ಗಣತಿದಾರರಿಗೆ 3-4 ಕಡೆ ಮತ್ತೆ ಕೆಲವರಿಗೆ ದೂರ ದೂರದ ಸ್ಥಳಗಳಲ್ಲಿ 5-6 ಕಡೆ ಮನೆ ಸಿಗುತ್ತವೆ.
ಇಲ್ಲಿ ಗಣತಿ ಮಾಡುವುದು ಸಮಸ್ಯೆಯಲ್ಲ. ಗಣತಿದಾರರಿಗೆ ನಿಗದಿಪಡಿಸಿರುವ ಮನೆಗಳು ತಮ್ಮ ಗ್ಯೂಗಲ್ ಮ್ಯಾಪ್‌ನಲ್ಲಿ ಸಿಗುತ್ತಿಲ್ಲ. ಕೆಲವು ಕಡೆ ಖಾಲಿ ಮನೆ ಇವೆ. ಬಿಸಿಎಂ, ಕಂದಾಯ ಮತ್ತು ಕೆಇಬಿ ಇಲಾಖೆಗಳ ನಡುವೆ ತಾಂತ್ರಿಕ ಸಮನ್ವಯದ ಕೊರತೆಯು ಮನೆಗಳ ಸಮೀಕ್ಷೆಯ ಕಾರ್ಯದಲ್ಲಿ ತೊಡಕು ಉಂಟಾಗಿದ್ದು, ಸಮೀಕ್ಷಾ ಕಾರ್ಯ ವಿಳಂಬವಾಗಿದೆ.
ರಜಾ ದಿನಗಳು, ಹಬ್ಬ ಹರಿದಿನಗಳನ್ನು ಬಿಟ್ಟು ಶಿಕ್ಷಕರು ಈ ಗಣತಿ ಕಾರ್ಯದಲ್ಲಿ ತಮ್ಮನ್ನು ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ.
ಗಣತಿ ಪ್ರದೇಶದಲ್ಲಿ ಹಲವು ಮನೆಗಳು ಖಾಲಿಯಾಗಿದ್ದು, ಅವುಗಳನ್ನು ತಕ್ಷಣ ಆ್ಯಪ್‌ನಿಂದ ತೆಗೆದು ಹಾಕಬೇಕು. ರೇಷನ್ ಕಾರ್ಡ್, ಆಧಾರ್ ಕಾರ್ಡ್‌ಗಳು ಇಲ್ಲದಿರುವ ಮನೆಗಳನ್ನು ಯುಎಚ್‌ಐಡಿ ಸಂಖ್ಯೆಯಿಂದ ತೆಗೆದು ಹಾಕಬೇಕು ಎಂಬ ಬೇಡಿಕೆ ಶಿಕ್ಷಕರದ್ದಾಗಿದೆ. ತಾಂತ್ರಿಕ ಸಿಬ್ಬಂದಿಯಿಂದ ಯಾವುದೇ ಸ್ಪಂದನೆಗಳು ದೊರಕುತ್ತಿಲ್ಲ. ಹಲವು ಮೇಲ್ವಿಚಾರಕರು ಸೂಕ್ತವಾದ ಮಾರ್ಗದರ್ಶನ ನೀಡುತ್ತಿಲ್ಲ ಎಂಬ ಆರೋಪವೂ ಕೇಳಿ ಬರುತ್ತಿದೆ.ಅಧಿಕಾರಿಗಳು ಫೀಲ್ಡ್ ಇಳಿದು ಕೆಲಸ ಮಾಡಲಿ!
*ಗಣತಿ ಕಾರ್ಯ ಮಾಡಿಲ್ಲ ಎಂಬ ನೆಪದಿಂದ ಸೋಮವಾರಪೇಟೆ ತಾಲೂಕಿನಲ್ಲಿ ಸುಮಾರು 70 ಮಂದಿ ಶಿಕ್ಷಕರಿಗೆ ನೋಟಿಸ್ ನೀಡಿದ್ದಾರೆ.
*ಸುಂಟಿಕೊಪ ವ್ಯಾಪ್ತಿಯಲ್ಲಿ ಸಮೀಕ್ಷೆ ತೆರಳಿದ ಸಂದರ್ಭ ಮನೆಯಲ್ಲಿ ಸೌಭಾಗ್ಯ ಎಂಬ ಶಿಕ್ಷಕರಿಗೆ ಮನೆಯವರು ಯಾಕೆ ಸಮೀಕ್ಷೆಗೆ ಬಂದಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.ಇಂದು ಶಿಕ್ಷಕರಿಂದ ಧರಣಿ
ಕೊಡಗು ಗುಡ್ಡಗಾಡು ಪ್ರದೇಶವಾದರೂ ಶಿಕ್ಷಕರು ಈ ಸಮೀಕ್ಷಾ ಕಾರ್ಯದಲ್ಲಿ ಗುರಿ ಸಾಧಿಸಿದ್ದಾರೆ. ಆದರೂ ಕೂಡ ಸಂಬಂಧಿಸಿದ ಇಲಾಖೆಯ ಮೇಲಾಧಿಕಾರಿಗಳು ಶಿಕ್ಷಕರಿಗೆ ನೋಟಿಸ್ ನೀಡುವುದಾಗಿ ಒತ್ತಡ ಹೇರುತ್ತಿದ್ದು, ಶಿಕ್ಷಕರು ಮಾನಸಿಕವಾಗಿ ತೀವ್ರ ನೋವು ಅನುಭವಿಸುವಂತಾಗಿದೆ. ಹೆಚ್ಚುವರಿ ಯು.ಎಚ್.ಐ.ಡಿ ಸಂಖ್ಯೆಯಿಂದ ಗಣತಿದಾರರಿಗೆ ಸಮಸ್ಯೆಯಾಗಿದೆ. ಸಾರ್ವಜನಿಕ ಸ್ಥಳಗಳಲ್ಲೂ ಕೂಡ ಯು.ಎಚ್.ಐ.ಡಿ ಸಂಖ್ಯೆಯನ್ನು ಹಾಕಿದ್ದಾರೆ. ಇದರಿಂದ ನಮಗೆ ಗುರಿ ಸಾಧಿಸಲು ಸಾಧ್ಯವಾಗುತ್ತಿಲ್ಲ. ಹಬ್ಬ ಹರಿದಿನ, ರಜೆ ದಿನವೂ ನಾವು ಕೆಲಸ ಮಾಡಿದ್ದೇವೆ. ಇಲ್ಲದಿರುವ ಮನೆ ಹೇಗೆ ಸರ್ವೆ ಮಾಡುವುದು? ಗಣತಿ ಕಾರ್ಯದಲ್ಲಿ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಅಧಿಕಾರಿಗಳು ಮನವರಿಕೆ ಮಾಡಿಕೊಂಡು ಶಿಕ್ಷಕರ ಸಮಸ್ಯೆಗೆ ಸ್ಪಂದಿಸಬೇಕು.
। ಕೆ.ಎಸ್. ಪ್ರಸನ್ನ, ಅಧ್ಯಕ್ಷರು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಕೊಡಗು ಜಿಲ್ಲಾ ಘಟಕ