ಸದ್ಯ ಪಕ್ಷದಲ್ಲಿ ಮೂಲ ಬಿಜೆಪಿಗರು ಉಳಿದಿಲ್ಲ

KannadaprabhaNewsNetwork |  
Published : Apr 23, 2024, 12:49 AM IST
ಪೋಟೊ 22 ಬಿಕೆಟಿ 6, ಮಲ್ಲಿಕಾರ್ಜುನ ಚರಂತಿಮಠ   ನಗರದ ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು) | Kannada Prabha

ಸಾರಾಂಶ

ಪಕ್ಷದಿಂದ ಉಚ್ಛಾಟನೆ ಬಳಿಕ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರನಾಗಿ ಸ್ಪರ್ಧಿಸಿದೆ. ಯಾರನ್ನು ಸೋಲಿಸಲು, ಗೆಲ್ಲಿಸಲು ಅಲ್ಲ. ನಾನು ಗೆಲ್ಲಬೇಕು ಎನ್ನುವ ಕಾರಣಕ್ಕೆ ಸ್ಪರ್ಧೆ ಮಾಡಿದ್ದೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಯಾವುದೆ ಆಸೆ, ಆಕಾಂಕ್ಷೆ, ಸ್ಥಾನ ಇಲ್ಲದೆ ಕಳೆದ 30 ವರ್ಷಗಳಿಂದ ಬಿಜೆಪಿಯಲ್ಲಿ ಶ್ರಮಿಸಿದ್ದೆ. ನಿಷ್ಠಾವಂತರಿಗೆ ಬಿಜೆಪಿಯಲ್ಲಿ ಕನಿಷ್ಠ ಗೌರವ ಸಿಗುತ್ತಿಲ್ಲ. ಸದ್ಯ ಪಕ್ಷದಲ್ಲಿ ಮೂಲ ಬಿಜೆಪಿಗರು ಉಳಿದಿಲ್ಲ. ತತ್ವ ಸಿದ್ಧಾಂತ ಇಲ್ಲವಾಗಿದೆ. ಹೀಗಾಗಿ ಕಾಂಗ್ರೆಸ್‌ ಸೇರಿದ್ದೇನೆ ಎಂದು ಚರಂತಿಮಠ ಮತ್ತು ವಸ್ತ್ರದ ಫೌಂಡೇಶನ್ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಚರಂತಿಮಠ ಹೇಳಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸಭೆ, ವಿಧಾನ ಪರಿಷತ್ ಹಾಗೂ ಲೋಕಸಭೆ, ಜಿಪಂ, ತಾಪಂ ಚುನಾವಣೆಯಲ್ಲಿ ಕೆಲಸ ಮಾಡಿದ್ದೇವೆ. 2014ರ ಲೋಕಸಭೆ ಚುನಾವಣೆಯಲ್ಲಿ ಇಡೀ ಕ್ಷೇತ್ರದಾದ್ಯಂತ ಗದ್ದಿಗೌಡರ ಪರ ಕೆಲಸ ಮಾಡಿದ್ದೆ. ಆದರೆ, ನಮ್ಮನ್ನು ಬಿಜೆಪಿಯಿಂದ ಯಾಕೆ ಉಚ್ಛಾಟಿಸಿದರು ಎಂಬುದೇ ಈವರೆಗೆ ಗೊತ್ತಾಗಿಲ್ಲ ಎಂದರು.

ರಾಜ್ಯದಲ್ಲಿ ಪಕ್ಷ ಕಟ್ಟಿದ ಈಶ್ವರಪ್ಪ ಯಾರು ಎಂದೇ ಗೊತ್ತಿಲ್ಲ ಅಂತ ಈಚೆಗೆ ಜಿಲ್ಲೆಗೆ ಬಂದಿದ್ದ ಹಿರಿಯರೊಬ್ಬರು ಹೇಳಿದರು. ಹಿರಿಯ ನಾಯಕರ ಪರಿಸ್ಥಿತಿ ಹೀಗಾದರೆ ಉಳಿದವರ ಪರಿಸ್ಥಿತಿ ಹೇಗೆ? ಪಕ್ಷದಿಂದ ಉಚ್ಛಾಟನೆ ಬಳಿಕ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರನಾಗಿ ಸ್ಪರ್ಧಿಸಿದೆ. ಯಾರನ್ನು ಸೋಲಿಸಲು, ಗೆಲ್ಲಿಸಲು ಅಲ್ಲ. ನಾನು ಗೆಲ್ಲಬೇಕು ಎನ್ನುವ ಕಾರಣಕ್ಕೆ ಸ್ಪರ್ಧೆ ಮಾಡಿದ್ದೆ. ಕ್ಷೇತ್ರದ ಹಲವು ಜನರು, ಪ್ರಜಾಪ್ರಭುಗಳು ನನಗೆ ಬೆಂಬಲಿಸಿದ್ದರು. ಹಿಂದೂ ಪರಿವಾರ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರೂ ನಮ್ಮೊಂದಿಗೆ ಇದ್ದರು. ಸದ್ಯ ಅವರೆಲ್ಲರನ್ನೂ ವಿಶ್ವಾಸಕ್ಕೆ ತಗೆದುಕೊಂಡು ಮುಂದುವರೆಯುವ ಭರವಸೆ ಇದೆ ಎಂದರು.

ಪ್ರಸ್ತುತ ಲೋಕಸಭೆ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಸಂಯುಕ್ತಾ ಪಾಟೀಲ, ಹೊಸ ಕನಸುಗಳೊಂದಿಗೆ ಸ್ಪರ್ಧೆ ಮಾಡಿದ್ದಾರೆ. ಕಳೆದ ವಿಧಾನಸಭೆ ಚುನಾವಣೆ ವೇಳೆ ನನಗೆ ಬೆಂಬಲಿಸಿದ ಪ್ರತಿಯೊಬ್ಬರೂ, ಕಾಂಗ್ರೆಸ್ ಗೆಲ್ಲಿಸಿ ಎಂದು ಕೈ ಮುಗಿದು ಕೇಳಿಕೊಳ್ಳುವೆ ಎಂದು ತಿಳಿಸಿದರು.

ಮುಖಂಡ ಬಸವರಾಜ ಪಾತ್ರೋಟಿ, ಗುರು ಅನಗವಾಡಿ, ಶರಣು ಕೋರಿ, ಪ್ರಶಾಂತ ಸನಕನಾಳ, ಯಮನಪ್ಪ ಕಂದಗಲ್ ಮುಂತಾದವರು ಇದ್ದರು.

PREV

Recommended Stories

ದೇಶದ ನಾಯಕರಾಗಲು ಶಾಲೆಯಲ್ಲಿ ನಾಯಕತ್ವ ವಹಿಸಿಕೊಳ್ಳಿ
ಪರಿಷ್ಕೃತ ಜಿಎಸ್‌ಟಿ ಬಡ ಜನತೆಗೆ ಅನುಕೂಲ