ತುಮಕೂರು: ವಿಶ್ವ ಪ್ರಸಿದ್ಧ ಮೈಸೂರು ದಸರಾ ಮಾದರಿಯಲ್ಲಿ ಬರುವ ಅಕ್ಟೋಬರ್ ಮಾಹೆಯ 11 ಹಾಗೂ 12 ರಂದು 2 ದಿನಗಳ ಕಾಲ ತುಮಕೂರು ದಸರಾ ಕಾರ್ಯಕ್ರಮವನ್ನು ಆಯೋಜಿಸಲು ಸಕಲ ಸಿದ್ಧತೆಗಳನ್ನು ಕೈಗೊಳ್ಳಬೇಕೆಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ತುಮಕೂರು ದಸರಾ ಉತ್ಸವದಲ್ಲಿ ಜಿಲ್ಲೆಯ ಸಾಹಿತ್ಯ, ಸಂಸ್ಕೃತಿ, ಕ್ರೀಡೆಯ ಹಿರಿಮೆಯನ್ನು ಹೆಚ್ಚಿಸುವಂತಹ ಕಾರ್ಯಕ್ರಮಗಳನ್ನು ರೂಪಿಸಬೇಕು. ದಸರಾ ಸಾಂಸ್ಕೃತಿಕ ಹಬ್ಬವನ್ನು ಪಕ್ಷಬೇಧವಿಲ್ಲದೆ ಜಿಲ್ಲೆಯ ಶಾಸಕರು, ಸಂಸದರು, ಸಚಿವರು ಸೇರಿ ಎಲ್ಲಾ ಚುನಾಯಿತ ಪ್ರತಿನಿಧಿಗಳು, ಸಾರ್ವಜನಿಕರು ಒಗ್ಗೂಡಿ ಆಚರಿಸಬೇಕೆಂದರಲ್ಲಧೆ, ದಸರಾ ಕಾರ್ಯಕ್ರಮದಲ್ಲಿ ಹಮ್ಮಿಕೊಳ್ಳಬಹುದಾದ ಧಾರ್ಮಿಕ ಆಚರಣೆ, ಜಂಬೂಸವಾರಿ, ಸಾಹಿತ್ಯ-ಕಲೆ-ಸಾಂಸ್ಕೃತಿಕ ಕಾರ್ಯಕ್ರಮ, ಆಹಾರ ಮೇಳಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.
ದಸರಾ ಪ್ರಯುಕ್ತ ನಗರದ ಪ್ರಮುಖ ಬೀದಿಗಳಲ್ಲಿ ಜನಾಕರ್ಷಿಸುವಂತಹ ಮೆರವಣಿಗೆಯನ್ನು ಏರ್ಪಡಿಸಬೇಕು. ಮೆರವಣಿಗೆಯಲ್ಲಿ ಜಿಲ್ಲೆಯ ಸಂಸ್ಕೃತಿಯನ್ನು ಬಿಂಬಿಸುವಂತಹ ಕಲಾತಂಡಗಳು ಕಲಾ ಪ್ರದರ್ಶನ ನೀಡಬೇಕು. ವಿವಿಧ ದೇವರುಗಳ ಉತ್ಸವ ಮೂರ್ತಿಗಳು ಪಾಲ್ಗೊಂಡು ಅರ್ಥಪೂರ್ಣ ಆಚರಣೆಯಾಗಬೇಕು ಎಂದು ತಿಳಿಸಿದರು.ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮಾತನಾಡಿ, ದಸರಾ ಉತ್ಸವದ ಮುಖ್ಯ ವೇದಿಕೆಯನ್ನು ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಿರ್ಮಿಸಲು ಅಗತ್ಯ ಸಿದ್ಧತೆಗಳನ್ನು ಯೋಜಿಸಲಾಗಿದ್ದು, ಸಿದ್ಧಪಡಿಸಿರುವ ದಸರಾ ಉತ್ಸವದ ರೂಪು-ರೇಷೆಗಳ ಬಗ್ಗೆ ಸಚಿವರಿಗೆ ಮಾಹಿತಿ ನೀಡಿದರು.
ತುಮಕೂರು ದಸರಾ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನೃತ್ಯರೂಪಕ, ಚಿತ್ರನಟ- ನಟಿ, ಪ್ರಸಿದ್ಧ ಗಾಯಕ, ಜಿಲ್ಲೆಯ ಹಿನ್ನೆಲೆಯುಳ್ಳ ಕಲಾವಿದರನ್ನು ಕರೆಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಸಭೆಯಲ್ಲಿ ಶಾಸಕರಾದ ಜಿ.ಬಿ. ಜ್ಯೋತಿ ಗಣೇಶ್ ಹಾಗೂ ಸುರೇಶ್ ಗೌಡ, ಜಿಪಂ ಸಿಇಒ ಜಿ.ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಪಾಲಿಕೆ ಆಯುಕ್ತ ಬಿ.ವಿ. ಅಶ್ವಿಜ, ಉಪ ಅರಣ್ಯ ಸಂರಕ್ಷಣಾಧಿಕಾರಿ ಅನುಪಮ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಜಿ. ಹಿಮಂತರಾಜು ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.ಆಸ್ತಿದಾರರು ತಮ್ಮ ಸ್ಥಿರಾಸ್ತಿಗಳನ್ನು ಜಿಲ್ಲಾ ವ್ಯಾಪ್ತಿಯ ಯಾವುದೇ ಉಪನೋಂದಣಾ ಕಚೇರಿಗಳಲ್ಲಿ ನೋಂದಾಯಿಸಿಕೊಳ್ಳುವ ಬಗ್ಗೆ ಸ್ಥಾಪಿಸಿರುವ ಎನಿವೇರ್ ನೋಂದಣಿ ಸಹಾಯವಾಣಿ ಸಂಖ್ಯೆಯ 080-682655316ನ್ನೊಳಗೊಂಡ ಪೋಸ್ಟರ್ ಹಾಗೂ ರೇಷ್ಮೆ ಬೆಳೆಯನ್ನು ಬಾಧಿಸುವ ಕೀಟ ನಿರ್ವಹಣಾ ವಿಧಾನದ ಬಗ್ಗೆ ರೇಷ್ಮೆ ಇಲಾಖೆಯಿಂದ ಹೊರತಂದಿರುವ ಕರಪತ್ರವನ್ನು ಬಿಡುಗಡೆ ಮಾಡಲಾಯಿತು.