ಅಂತಾರಾಜ್ಯ ಇಬ್ಬರು ಕಳ್ಳರ ಬಂಧನ

KannadaprabhaNewsNetwork | Published : Jan 7, 2024 1:30 AM

ಸಾರಾಂಶ

ಕಳ್ಳತನ ಪ್ರಕರಣಗಳನ್ನು ಭೇದಿಸಲು ಬೈಲಹೊಂಗಲ ಡಿಎಸ್ಪಿ ರವಿ ನಾಯಕ್ ಹಾಗೂ ಸಿಪಿಐ ಪಂಚಾಕ್ಷರಿ ಸಾಲಿಮಠ ನೇತೃತ್ವದ ಎರಡು ತಂಡ ರಚಿಸಲಾಗಿತ್ತು. ಈ ತಂಡ ವಿವಿಧ ರಾಜ್ಯಗಳಲ್ಲಿ ಕಳ್ಳತನ ಮಾಡಿ ತಲೆಮರೆಸಿಕೊಂಡಿದ್ದ ಮಹಾರಾಷ್ಟ್ರದ ದೀಪಕ ಪವಾರ್ (22) ಮತ್ತು ರಾಹುಲ ಜಾಧವ್ (21) ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಬೈಲಹೊಂಗಲ ಮತ್ತು ನೇಸರಗಿಯಲ್ಲಿ ನಡೆದ ಸರಣಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬೈಲಹೊಂಗಲ ಪೊಲೀಸರು ಇಬ್ಬರನ್ನು ಬಂಧಿಸಿದ್ದು, ಅವರಿಂದ ₹15 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳ್ಳತನ ಪ್ರಕರಣಗಳನ್ನು ಭೇದಿಸಲು ಬೈಲಹೊಂಗಲ ಡಿಎಸ್ಪಿ ರವಿ ನಾಯಕ್ ಹಾಗೂ ಸಿಪಿಐ ಪಂಚಾಕ್ಷರಿ ಸಾಲಿಮಠ ನೇತೃತ್ವದ ಎರಡು ತಂಡ ರಚಿಸಲಾಗಿತ್ತು. ಈ ತಂಡ ವಿವಿಧ ರಾಜ್ಯಗಳಲ್ಲಿ ಕಳ್ಳತನ ಮಾಡಿ ತಲೆಮರೆಸಿಕೊಂಡಿದ್ದ ಮಹಾರಾಷ್ಟ್ರದ ದೀಪಕ ಪವಾರ್ (22) ಮತ್ತು ರಾಹುಲ ಜಾಧವ್ (21) ಬಂಧಿಸುವಲ್ಲಿ ಯಶಸ್ವಿಯಾಗಿದೆ. ಬಂಧಿತರು ಬೈಲಹೊಂಗಲ, ನೆಸರಗಿ, ಹುಕ್ಕೇರಿ ಹಾಗೂ ಸಂಕೇಶ್ವರ ವ್ಯಾಪ್ತಿಯಲ್ಲಿ 10 ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಮತ್ತೊಬ್ಬ ಆರೋಪಿ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದರು.

ಚಿಕ್ಕೋಡಿ ಭಾಗದಲ್ಲಿ ನಡೆದ ಕಳ್ಳತನ ಪ್ರಕರಣಗಳ ಕುರಿತು ಕೆಲವು ಸುಳಿವು ಪತ್ತೆಯಾಗಿದ್ದು, ಒಂದು ತಂಡ ಹೊರ ರಾಜ್ಯದಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. ಜಿಲ್ಲೆಯಲ್ಲಿ ಸಿಸಿಟಿವಿಗಳ ಕೊರತೆಯಿದ್ದು, ಬಹಳಷ್ಟು ಸಿಸಿಟಿವಿಗಳು ಹಾಳಾಗಿವೆ. ಹೊಸದಾಗಿ ಸಿಸಿಟಿವಿ ಅಳವಡಿಸುವ ಬಗ್ಗೆ ಜಿಲ್ಲಾಧಿಕಾರಿಗಳ ಜೊತೆಗೆ ಚರ್ಚಿಸಿದ್ದೇವೆ ಎಂದು ಹೇಳಿದರು.

ಪ್ರಕರಣ ಭೇದಿಸಿದ ಬೈಲಹೊಂಗಲ ಸಿಪಿಐ ಪಂಚಾಕ್ಷರಿ ಸಾಲಿಮಠ ನೇತೃತ್ವದ ತಂಡದಲ್ಲಿ ಬೈಲಹೊಂಗಲ ಪಿಎಸ್ಐ ಗುರುರಾಜ ಕಲಬುರ್ಗಿ, ನೇಸರಗಿ ಪಿಎಸ್ಐ ಮಲ್ಲಿಕಾರ್ಜುನ ‌ಬಿರಾದಾರ ಸೇರಿದಂತೆ ವಿಠ್ಠಲ ದೊಡ್ಡಹೊನ್ನಪ್ಪನವರ್, ಶಂಕರ ಮೆಣಸಿನಕಾಯಿ, ವಿ,ಎಸ್ ಯರಗಟ್ಟಿಮಠ, ಯು,ಹೆಚ್ ಪೂಜೇರಿ, ಚೇತನ್ ಬುದ್ನಿ, ಮಳಗಲಿ, ಡೊಂಬರ, ಅಂಗಡಿ, ಟಕ್ಕಣ್ಣವರ್ ಹಾಗೂ ಪಾಟೀಲ್ ಕಾರ್ಯಕ್ಕೆ ಎಸ್ಪಿ ಗುಳೇದ ಮೆಚ್ಚುಗೆ ವ್ಯಕ್ತಪಡಿಸಿದರು.

Share this article