ಹೆದ್ದಾರಿ ಮೇಲೆ ಹರಿಯುತ್ತಿರುವ ಯುಜಿಡಿ ನೀರು

KannadaprabhaNewsNetwork | Published : May 11, 2025 1:18 AM
Follow Us

ಸಾರಾಂಶ

ಯುಜಿಡಿ ಪೈಪ್ ಒಡೆದು ಮಲಮೂತ್ರ ತ್ಯಾಜ್ಯ ನೀರು ಹೆದ್ದಾರಿ ರಸ್ತೆಯಲ್ಲಿ ಹರಿಯುತ್ತಿದ್ದು, ಅದರ ಮೇಲೆ ವಾಹನಗಳು ಓಡಾಡುವಾಗ ಸಾರ್ವಜನಿಕರ ಮೈಮೇಲೆ ಸಿಂಪಡಣೆ ಆಗುತ್ತಿದ್ದು, ಈ ಬಗ್ಗೆ ಪುರಸಭೆಯ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ ಎಂದು ಸುತ್ತಮುತ್ತಲಿನ ನಿವಾಸಿಗಳು ಪುರಸಭೆಗೆ ಹಿಡಿಶಾಪ ಹಾಕುತ್ತಿದ್ದಾರೆ. ಮಳೆ ಬಂದರಂತೂ ಮುಖ್ಯ ರಸ್ತೆಯಲ್ಲಿರುವ ಅಂಗಡಿ ಮುಂಗಟ್ಟುಗಳ ಮಾಲೀಕರ ಹಾಗೂ ಜನರ ಕಷ್ಟ ಹೇಳ ತೀರವಾಗಿದೆ. ಯುಜಿಡಿ ಕೊಳಚೆ ನೈರ್ಮಲ್ಯ ಇತರೆ ವಸ್ತುಗಳು ಒಟ್ಟಾಗಿ ಸೇರಿ ಅಂಗಡಿ ಮನೆಯೊಳಗೆ ನುಗ್ಗಿದರೆ ಅಲ್ಲಿ ಒಂದು ನಿಮಿಷ ಕೂಡ ಇರಲು ಅಸಾಧ್ಯವಾಗಿದ್ದು, ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ಇದ್ದು, ಜನರು ಪುರಸಭೆ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಕನ್ನಡಪ್ರಭ ವಾರ್ತೆ ಬೇಲೂರು

ಕಳೆದ ವಾರದ ಹಿಂದೆ ಯುಜಿಡಿ ಪೈಪ್ ಒಡೆದು ಮಲಮೂತ್ರ ತ್ಯಾಜ್ಯ ನೀರು ಹೆದ್ದಾರಿ ರಸ್ತೆಯಲ್ಲಿ ಹರಿಯುತ್ತಿದ್ದು, ಅದರ ಮೇಲೆ ವಾಹನಗಳು ಓಡಾಡುವಾಗ ಸಾರ್ವಜನಿಕರ ಮೈಮೇಲೆ ಸಿಂಪಡಣೆ ಆಗುತ್ತಿದ್ದು, ಈ ಬಗ್ಗೆ ಪುರಸಭೆಯ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ ಎಂದು ಸುತ್ತಮುತ್ತಲಿನ ನಿವಾಸಿಗಳು ಪುರಸಭೆಗೆ ಹಿಡಿಶಾಪ ಹಾಕುತ್ತಿದ್ದಾರೆ.

ಪಟ್ಟಣದ ಜೆಪಿ ನಗರ ಮೂಡಿಗೆರೆ ಹೆದ್ದಾರಿ ರಸ್ತೆಯಲ್ಲಿರುವ ಮಾಜಿ ಪುರಸಭೆ ಸದಸ್ಯೆ ಸಂಗೀತ ಅವರ ಮನೆಯ ಕಾಂಪೌಡ್ ಪಕ್ಕದಲ್ಲಿ ಯುಜಿಡಿ ಕಳೆದ ವಾರ ಒಡೆದಿದ್ದು ಜೆಪಿ ನಗರದ ಸುತ್ತಮುತ್ತಲಿನ ಮಲಮೂತ್ರ, ತ್ಯಾಜ್ಯ ವಸ್ತುಗಳು ಹೆದ್ದಾರಿ ರಸ್ತೆಯಲ್ಲಿ ಹರಿದಾಡುತ್ತಿವೆ. ಜೆಪಿ ನಗರವೇ ಗಬ್ಬೆದ್ದು ನಾರುತಿದ್ದರೂ ಸಂಬಂಧಪಟ್ಟ ಅಧಿಕಾರಿಗಳಾಗಲಿ ಅಥವಾ ಇಲ್ಲಿಯ ಪುರಸಭೆ ಸದಸ್ಯರಾಗಲಿ ನಿರ್ಲಕ್ಷ್ಯ ವಹಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಪ್ರವಾಸಿ ಕೇಂದ್ರ ಬೇಲೂರಿಗೆ ದಿನನಿತ್ಯ ಮೂಡಿಗೆರೆ ರಸ್ತೆಯಲ್ಲಿ ಧರ್ಮಸ್ಥಳ ಶೃಂಗೇರಿಗೆ ತೆರಳಲು ಸಾವಿರಾರು ವಾಹನಗಳು ಇದೇ ಹೆದ್ದಾರಿಯಲ್ಲಿ ಓಡಾಡುತ್ತವೆ. ಜೆಪಿ ನಗರದ ಸುತ್ತಮುತ್ತಲಿನ ನಿವಾಸಿಗಳಿಗೂ ಓಡಾಡಲು ಈ ರಸ್ತೆ ಪ್ರಮುಖವಾಗಿದೆ. ಆದರೆ ಕಳೆದ ವಾರ ಯುಜಿಡಿ ಬಾಕ್ಸ್ ಚರಂಡಿ ಬಿರುಕು ಬಿಟ್ಟು ಒಡೆದ ಕಾರಣ ಮಲಮೂತ್ರ ಜೊತೆಗೆ ತ್ಯಾಜ್ಯ ವಸ್ತುಗಳು ರಸ್ತೆ ಮೇಲೆ ಹರಿದಾಡಿ ದ್ವಿಚಕ್ರ ವಾಹನ ಸವಾರರ ಮೇಲೆ ಹಾಗೂ ರಸ್ತೆ ಬದಿ ನಡೆದಾಡುವ ಜನರ ಮೇಲೆ ಮಲೀನ ನೀರು ಪ್ರೋಕ್ಷಣೆಯಾಗುತ್ತಿದೆ. ಜೆಪಿ ನಗರದ ಮುಖ್ಯರಸ್ತೆಯ ಎಲ್ಲಾ ಮನೆಗಳಿಗೆ ನೀರು ಸರಬರಾಜು ಆಗುವಂತ ಕುಡಿಯುವ ನೀರಿಗೂ ಯುಜಿಡಿ ನೀರು ಸೇರುತ್ತಿದೆ. ಇನ್ನು ಮಳೆ ಬಂದರಂತೂ ಮುಖ್ಯ ರಸ್ತೆಯಲ್ಲಿರುವ ಅಂಗಡಿ ಮುಂಗಟ್ಟುಗಳ ಮಾಲೀಕರ ಹಾಗೂ ಜನರ ಕಷ್ಟ ಹೇಳ ತೀರವಾಗಿದೆ. ಯುಜಿಡಿ ಕೊಳಚೆ ನೈರ್ಮಲ್ಯ ಇತರೆ ವಸ್ತುಗಳು ಒಟ್ಟಾಗಿ ಸೇರಿ ಅಂಗಡಿ ಮನೆಯೊಳಗೆ ನುಗ್ಗಿದರೆ ಅಲ್ಲಿ ಒಂದು ನಿಮಿಷ ಕೂಡ ಇರಲು ಅಸಾಧ್ಯವಾಗಿದ್ದು, ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ಇದ್ದು, ಜನರು ಪುರಸಭೆ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಕೂಡಲೇ ಸಂಬಂಧಪಟ್ಟವರು ಇದನ್ನು ಸರಿಪಡಿಸದಿದ್ದರೆ ಪುರಸಭೆ ಮುಂಭಾಗ ಪ್ರತಿಭಟಿಸಬೇಕಾಗುತ್ತದೆ ಎಂದು ನಿವಾಸಿಗಳು ಎಚ್ಚರಿಕೆ ನೀಡಿದ್ದಾರೆ.