ಬ್ಯಾರೇಜ್‌ ನೀರು ಸೋರುವಿಕೆ ತಡೆಯುವರಾರು?

KannadaprabhaNewsNetwork | Updated : Apr 19 2024, 01:01 AM IST

ಸಾರಾಂಶ

ಏ.5ರಂದು ಮಲಪ್ರಭೆಗೆ ನವಿಲುತೀರ್ಥ ಜಲಾಶಯದಿಂದ 1.0368 ಟಿಎಂಸಿ ನೀರನ್ನು ಬಾದಾಮಿ ಶಾಸಕರು ಬಿಡಿಸಿದ್ದಾರೆ.

ಸಿ.ಎಂ.ಜೋಶಿ

ಕನ್ನಡಪ್ರಭವಾರ್ತೆ ಗುಳೇದಗುಡ್ಡ

ಕಳೆದ ವರ್ಷದ ಮಳೆ ಕೊರತೆ ಹಾಗೂ ಬೀರು ಬೇಸಿಗೆಯಿಂದ ಜಲಮೂಲಗಳು ಬರಿದಾಗಿವೆ. ಇದರಿಂದ ಜನ-ಜಾನುವಾರುಗಳಿಗೆ ಕುಡಿಯಲು ನೀರಿಲ್ಲದಂತಾಗಿದೆ. ಪ್ರತಿ ಬೇಸಿಗೆಯಲ್ಲೂ ಈ ಸ್ಥಿತಿ ನಿರ್ಮಾಣ ಸಾಮಾನ್ಯವಾಗಿದೆ. ಹೀಗಾಗಿ ಬೇರೆಡೆಯಿಂದ ಕಾಲುವೆಗಳ ಮೂಲಕ ನೀರು ಹರಿಸಲಾಗುತ್ತದೆ. ಆದರೆ, ಹೀಗೆ ಹರಿದು ಬರುವ ನೀರನ್ನು ಸೂಕ್ತವಾಗಿ ಸಂಗ್ರಹಿಸಿಡಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಕಾರಣ ಬ್ಯಾರೇಜ್‌ನಿಂದ ನೀರು ಸೋರುತ್ತಿರುವುದು.

ಬಾಗಲಕೋಟೆ ಜಿಲ್ಲೆಯ ಬಾದಾಮಿ, ಗುಳೇದಗುಡ್ಡ ಹಾಗೂ ಹುನಗುಂದ ತಾಲೂಕಿನ ಬಹುಸಂಖ್ಯಾತ ಹಳ್ಳಿಗಳಿಗೆ ಮಲಪ್ರಭಾ ಜೀವನದಿ. ಜಾನುವಾರುಗಳಿಗೆ ಮತ್ತು ಕೃಷಿಗೆ ಈ ನದಿ ನೀರನ್ನೇ ರೈತರು ಅವಲಂಬಿಸಿದ್ದಾರೆ. ಬೇಸಿಗೆ ಬಂದರೆ ಬರಗಾಲದ ವಾತಾವರಣ ಇಲ್ಲಿರುತ್ತದೆ. ಹೀಗಾಗಿ ಆಗಾಗ ಈ ಭಾಗದ ಶಾಸಕರು ನವಿಲುತೀರ್ಥ ಜಲಾಶಯದಿಂದ ಮಲಪ್ರಭೆಗೆ ಬೇಸಿಗೆಯಲ್ಲಿ ನೀರು ಬಿಡಿಸಿ ಕನಿಷ್ಠ ಜನ, ಜಾನುವಾರುಗಳಿಗೂ ಕುಡಿಯಲು ಅನುಕೂಲ ಮಾಡುತ್ತ ಬಂದಿದ್ದಾರೆ.

ಏ.5ರಂದು ಮಲಪ್ರಭೆಗೆ ನವಿಲುತೀರ್ಥ ಜಲಾಶಯದಿಂದ 1.0368 ಟಿಎಂಸಿ ನೀರನ್ನು ಬಾದಾಮಿ ಶಾಸಕರು ಬಿಡಿಸಿದ್ದಾರೆ. ಆ ನೀರು ಬುಧವಾರ ತಾಲೂಕಿನ ಆಸಂಗಿ ಬ್ಯಾರೇಜಿಗೆ ನೀರು ಬಂದು ತಲುಪಿದೆ. ಬಾದಾಮಿ ತಾಲೂಕಿನ ಹಾಗೂ ಗುಳೇದಗುಡ್ಡ ತಾಲೂಕಿನ ಚಿಮ್ಮಲಗಿ, ಲಾಯದಗುಂದಿ ಹಾಗೂ ಆಸಂಗಿ ಬ್ಯಾರೇಜುಗಳು ತುಂಬಿ ಹರಿಯುತ್ತಿವೆ. ಇದರಿಂದ ರೈತರಿಗೆ ಸಂತಸ ತಂದಿದೆಯಾದರೂ ಆಸಂಗಿ ಬ್ಯಾರೇಜಿನ ನೀರು ಮಾತ್ರ ನಿಲ್ಲದೇ ಅದು ಹರಿದು ಹೋಗುತ್ತಿದೆ. ಇದರಿಂದ ಆಸಂಗಿ ಭಾಗದ ರೈತರಿಗೆ ಆತಂಕ ಸೃಷ್ಟಿಸಿದೆ. ಏಕೆಂದರೆ ಈ ಸಂಗ್ರಹವಾದ ನೀರು ಆಸಂಗಿ, ಕೊಟ್ನಳ್ಳಿ, ಕಟಗಿನಹಳ್ಳಿ ಮೊದಲಾದ ಗ್ರಾಮಗಳಿಗೆ ಅನುಕೂಲವಾಗಲಿದೆ.

ಸಣ್ಣ ನೀರಾವರಿ ಇಲಾಖೆಯವರು ಅಳವಡಿಸಿದ ಎಲ್ಲ ಗೇಟುಗಳು ಸೋರುತ್ತಿರುವುದರಿಂದ ನಿತ್ಯ ಗರಿಷ್ಠ ಪ್ರಮಾಣದ ನೀರು ಹರಿದು ಹೋಗುತ್ತಿದೆ. ಹೀಗಾದರೆ ನಮ್ಮ ಜಾನುವಾರುಗಳಿಗೆ ಕುಡಿಯಲು ಹಾಗೂ ಜನರಿಗೆ ಕುಡಿಯಲು ನೀರಿನ ಹಾಹಾಕಾರ ಉಂಟಾಗುವುದೆಂಬ ಆತಂಕ ಗ್ರಾಮಸ್ಥರಲ್ಲಿ ಮೂಡಿದೆ. ತಾಲೂಕು ದಂಡಾಧಿಕಾರಿಗಳು ನವಿಲುತೀರ್ಥ ಜಲಶಯದಿಂದ ಬಿಟ್ಟಿರುವ ನೀರನ್ನು ಕೃಷಿ ಕಾರ್ಯಕ್ಕೆ ಬಳಸದೇ ಕೇವಲ ಜನ ಹಾಗೂ ಜಾನುವಾರುಗಳಿಗೆ ಕುಡಿಯಲು ಮಾತ್ರ ಬಳಸುವಂತೆ ಆದೇಶ ಮಾಡಿದ್ದಾರೆ. ಆದರೆ, ಗೇಟ್ ಸರಿಯಾಗಿ ಅಳವಡಿಸದ ಕಾರಣ ನೀರು ಬ್ಯಾರೇಜಿನಲ್ಲಿ ನಿಲ್ಲದೇ ಅದು ಹರಿದು ಹೋಗುತ್ತಿದೆ. ಪ್ರತಿಸಲ ಬ್ಯಾರೇಜಿನ ಗೇಟಗಳನ್ನು ಸರಿಯಾಗಿ ಅಳವಡಿಸದ ಕಾರಣ ನೀರು ಬ್ಯಾರೇಜಿನಿಂದ ಹರಿದು ಹೋಗುತ್ತಿದೆ. ನಂತರ ಬಂದು ಸರಿಪಡಿಸುವಷ್ಟರಲ್ಲಿ ಬ್ಯಾರೇಜಿನಲ್ಲಿ ನೀರೇ ಖಾಲಿಯಾಗಿರುತ್ತದೆ ಎಂಬ ಆತಂಕ ಈ ಭಾಗದ ರೈತರದ್ದು.

ಕಾರಣ ಆದಷ್ಟು ಬೇಗ ಸಂಬಂಧಪಟ್ಟ ಇಲಾಖೆಯವರು ನೀರು ಬ್ಯಾರೇಜಿನ ಗೇಟಗಳ ಸೋರುವಿಕೆಯಿಂದ ಹರಿದು ಹೋಗದಂತೆ ಕ್ರಮವಹಿಸಬೇಕೆಂದು ಗ್ರಾಮದ ಪಿಕೆಪಿಎಸ್ ಅಧ್ಯಕ್ಷ ಪ್ರಕಾಶ ಗೌಡರ ಹಾಗೂ ಇನ್ನಿತರ ರೈತರು ಆಗ್ರಹಿಸಿದ್ದಾರೆ.

--

ಕೋಟ್

ನೀರಿನ ಹರಿವು ಹೆಚ್ಚಾಗಿರುವುದರಿಂದ ಗೇಟುಗಳು ಸರಿಯಾಗಿ ಅಳವಡಿಸಲು ಸಾಧ್ಯವಾಗಿರಲ್ಲ. ನೀರಿನ ಹರಿವು ನಿಂತ ತಕ್ಷನ ಪುನ: ಸರಿಯಾಗಿ ಗೇಟ್ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು.

- ಪ್ರಕಾಶ ನಾಯಕ, ಮುಖ್ಯ ಕಾರ್ಯನಿವಾಹಕ ಅಭಿಯಂತರರು, ಸಣ್ಣ ನೀರಾವರಿ ಇಲಾಖೆ ಬಾಗಲಕೋಟೆ.

Share this article