ಉಡುಪಿ: ಉಡುಪಿಯ ಬೇಳಂಜೆ ಸಂಜೀವ ಹೆಗ್ಡೆ ಟ್ರಸ್ಟ್ ಪ್ರಾಯೋಜಿತ 2026ನೇ ಸಾಲಿನ ಯಕ್ಷ ಪೋಷಕ ಗೌರವ ಪ್ರಶಸ್ತಿಗೆ ಕಲಾ ಸಂಘಟಕ ವೈ. ಕರುಣಾಕರ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ. ಇಂದ್ರಾಳಿಯ ಯಕ್ಷಗಾನ ಕೇಂದ್ರದ ಸಹಯೋಗದಲ್ಲಿ ನೀಡಲಾಗುವ ಈ ಪ್ರಶಸ್ತಿ ಪ್ರದಾನ ಸಮಾರಂಭವು ಆ. 23ರಂದು ಉಡುಪಿ ಪುರಭವನದಲ್ಲಿ ನಡೆಯಲಿದೆ.
ಕೊರೊನಾ ಸಂಕಷ್ಟದ ಸಂದರ್ಭದಲ್ಲೂ ಕಲಾವಿದರ ಬದುಕಿಗೆ ಆಸರೆಯಾಗಿದ್ದ ಅವರ ಸುದೀರ್ಘ ಕಲಾ ಸೇವೆ ಮತ್ತು ಸಂಘಟನಾ ಸಾಮರ್ಥ್ಯವನ್ನು ಗಮನಿಸಿ ನೂರಕ್ಕೂ ಹೆಚ್ಚು ಸನ್ಮಾನಗಳು ಹಾಗೂ ಅನೇಕ ಪ್ರಶಸ್ತಿಗಳು ಅವರಿಗೆ ಸಂದಿವೆ. ಯಕ್ಷಗಾನ ಕ್ಷೇತ್ರದ ಅಭಿವೃದ್ಧಿಗೆ ಅವರು ಸಲ್ಲಿಸಿರುವ ಸೇವೆ ಕರಾವಳಿಯ ಸಾಂಸ್ಕೃತಿಕ ಇತಿಹಾಸದಲ್ಲಿ ವಿಶೇಷವಾಗಿ ಗುರುತಿಸಲ್ಪಟ್ಟಿದೆ. ಯಕ್ಷ ಪೋಷಕ ಗೌರವ ಪ್ರಶಸ್ತಿ ಪ್ರಧಾನ ಸಮಾರಂಭದಂದು ಪ್ರಸಿದ್ಧ ಯಕ್ಷ ಕಲಾವಿದರ ಕೂಡುವಿಕೆಯಲ್ಲಿ ಕೃಷ್ಣಾರ್ಜುನ ಕಾಳಗ ಎಂಬ ಪ್ರಸಂಗದ ಪ್ರದರ್ಶನ ನಡೆಯಲಿದೆ ಎಂದು ಯಕ್ಷಗಾನ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.