ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಕಳೆದ ಕೆಲ ವರ್ಷದಿಂದ ಶಿವಮೊಗ್ಗ ದಸರಾವನ್ನು ಅದ್ಧೂರಿಯಾಗಿ ಆಚರಿಸಿಕೊಂಡು ಬರುತ್ತಿದ್ದು, ಈ ಬಾರಿ ದಸರಾ ಉತ್ಸವ ವನ್ನು ವಿಜೃಂಭಣೆಯಿಂದ ಆಚರಿಸುವಂತೆ ಮಹಾನಗರ ಪಾಲಿಕೆಗೆ ಮನವಿ ಮಾಡಲಾಗಿದ್ದು, ಈಗಾಗಲೇ ಇದಕ್ಕಾಗಿ ಪಾಲಿಕೆ ಬಜೆಟ್‌ನಲ್ಲಿ 1.50 ಕೋಟಿ ರು.ಗಳನ್ನು ಮೀಸಲಿಡಲಾಗಿದೆ ಎಂದು ಪಾಲಿಕೆ ಮಾಜಿ ಸದಸ್ಯ ಎಚ್.ಸಿ.ಯೋಗೀಶ್ ಹೇಳಿದರು.ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಹಾನಗರ ಪಾಲಿಕೆಯಲ್ಲಿ ಈ ಬಾರಿ ಜನಪ್ರತಿನಿಧಿಗಳು ಇಲ್ಲ. ಆದರೂ ಕೂಡ ಎಂದಿನಂತೆ ದಸರಾವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಬೇಕು ಎಂದು ಪಾಲಿಕೆಯ ಆಯುಕ್ತರಿಗೆ ಮತ್ತು ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಈಗಾಗಲೇ ಈ ಬಗ್ಗೆ ಜಿಲ್ಲಾ ಮಂತ್ರಿಗಳು ಮತ್ತು ನಗರಾಭಿವೃದ್ಧಿ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿಕೊಂಡಿದ್ದೇವೆ. ನಮ್ಮ ಮನವಿಗೆ ಅವರು ಸ್ಪಂದಿಸಿದ್ದಾರೆ. ಪಾಲಿಕೆ ಆಯವ್ಯಯದಲ್ಲಿ ನಿಗದಿಪಡಿಸಿದಂತೆ ೧.೫೦ ಕೋಟಿ ಸೀಮಿತ ಅನುದಾನದಲ್ಲಿ ದಸರಾ ಕಾರ್ಯಕ್ರಮವನ್ನು ರೂಪಿಸಿ ಆಚರಿಸಲು ನಿರ್ಧರಿಸಲಾಗಿದೆ ಎಂದರು.
ಕಳೆದ ಸಲದಂತೆಯೇ ಈ ಬಾರಿಯೂ ಕೂಡ ಸುಮಾರು ೧೪ ಸಮಿತಿಗಳನ್ನು ವಿವಿಧ ಇಲಾಖೆಗಳ ಅಧಿಕಾರಿಗಳನ್ನೊಳ ಗೊಂಡಂತೆ ರಚಿಸಲು ಸಲಹೆ ನೀಡಿದ್ದೇವೆ ಮತ್ತು ಕಳೆದ ಬಾರಿಯ ಸಮಿತಿಗಳ ಸದಸ್ಯರ ಮಾರ್ಗದರ್ಶನದಲ್ಲಿ ಎಂದಿನಂತೆ ಹಬ್ಬವನ್ನು ಆಚರಿಸಲು ಅಗತ್ಯ ಕ್ರಮವನ್ನು ಆಯುಕ್ತರು ಮತ್ತು ಜಿಲ್ಲಾಡಳಿತ ತೆಗೆದುಕೊಳ್ಳಬೇಕು. ಇದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ಸಭೆಯನ್ನು ಕರೆದು ಕಾರ್ಯಕ್ರಮ ರೂಪಿಸಲು ಒಬ್ಬ ವಿಶೇಷ ಕರ್ತವ್ಯ ಅಧಿಕಾರಿಯನ್ನು ನೇಮಿಸಬೇಕು ಎಂದು ಹೇಳಿದರು.ಈ ಬಾರಿಯೂ ಕೂಡ ಅಂಬಾರಿ ಮೆರವಣಿಗೆ ನಡೆಯುತ್ತದೆ, ಇದಕ್ಕೆ ಈಗಾಗಲೇ ಆನೆಗಳನ್ನು ಕರೆತರಲು ಅವಕಾಶ ನೀಡು ವಂತೆ ಅರಣ್ಯ ಸಚಿವರಲ್ಲಿ ಮನವಿ ಮಾಡಿದ್ದೇವೆ. ಇಲಾಖೆಯ ಅಧಿಕಾರಿಗಳಿಗೂ ಕೂಡ ಕೇಳಿಕೊಂಡಿದ್ದೇವೆ. ಇದರ ಜೊತೆಗೆ ಎಂದಿನಂತೆ ನಗರದ ವಿವಿಧ ಬಡಾವಣೆಗಳಿಂದ ಸುಮಾರು 150ಕ್ಕೂ ಹೆಚ್ಚು ದೇವಾನುದೇವತೆಗಳ ಮೆರವಣಿಗೆ ಹಬ್ಬದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಇದರ ಜೊತೆಗೆ ಬಹುಮುಖ್ಯವಾಗಿ ಸ್ಥಳೀಯ ಹಾಗೂ ರಾಜ್ಯ ಮಟ್ಟದ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ನಡೆಯಲಿವೆ. ಈ ಎಲ್ಲಾ ಕಾರ್ಯಕ್ರಮಗಳು ಪಕ್ಷ ಬೇಧವಿಲ್ಲದೆ ಮತ್ತು ಎಲ್ಲಾ ಮಾಜಿ ಸದಸ್ಯರ ಸಹಕಾರದಲ್ಲಿ ನಡೆಯಲಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪಾಲಿಕೆ ಮಾಜಿ ಸದಸ್ಯರಾದ ಬಿ.ಎ.ರಮೇಶ್ ಹೆಗಡೆ, ಯಮುನಾ ರಂಗೇಗೌಡ, ಧೀರರಾಜ್ ಹೊನ್ನಾವಿಲೆ, ಮೆಹಕ್ ಷರೀಪ್, ಷಮೀರ್ ಖಾನ್, ಪ್ರಮುಖರಾದ ಕಲೀಂ ಪಾಷ, ಕೆ.ರಂಗನಾಥ್, ರಂಗೇಗೌಡ, ಮಧು ಕುಮಾರ್, ಕೆ.ದೇವೇಂದ್ರಪ್ಪ, ಕುಮಾರ್, ನವೀನ್ ಉಪಸ್ಥಿತರಿದ್ದರು.