ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದ ಏಪ್ರಿಲ್ ಹಾಗೂ ಮೇ ತಿಂಗಳ ಅವಧಿಯಲ್ಲಿ ಒಟ್ಟು 1,870 ವಿದ್ಯುತ್ ಕಂಬ ಧರೆಗುರುಳಿ, 37.40 ಕಿ.ಮೀ ಉದ್ದದ ವಿದ್ಯುತ್ ಮಾರ್ಗ ಹಾನಿಯಾಗಿದೆ. 2 ಶಾಲಾ ಕಟ್ಟಡ, 51 ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, ಒಂದು ಸಂಪೂರ್ಣವಾಗಿ ನೆಲ ಸಮವಾಗಿದೆ ಎಂದು ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ಮಾಹಿತಿ।
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಜಿಲ್ಲೆಯಲ್ಲಿ ಕಳೆದ ಏಪ್ರಿಲ್ ಹಾಗೂ ಮೇ ತಿಂಗಳ ಅವಧಿಯಲ್ಲಿ ಒಟ್ಟು 1,870 ವಿದ್ಯುತ್ ಕಂಬ ಧರೆಗುರುಳಿ, 37.40 ಕಿ.ಮೀ ಉದ್ದದ ವಿದ್ಯುತ್ ಮಾರ್ಗ ಹಾನಿಯಾಗಿದೆ. 2 ಶಾಲಾ ಕಟ್ಟಡ, 51 ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, ಒಂದು ಸಂಪೂರ್ಣವಾಗಿ ನೆಲ ಸಮವಾಗಿದೆ ಎಂದು ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ತಿಳಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪೂರ್ವ ಮುಂಗಾರು ಅವಧಿ ಯಲ್ಲಿ 159.5 ಮಿ.ಮೀ ವಾಡಿಕೆ ಮಳೆಯಲ್ಲಿ ಪ್ರಸಕ್ತ ವರ್ಷ 153.2 ಮಿ.ಮೀ ನಷ್ಟು ಮಳೆಯಾಗಿದೆ. ಶೇ.4 ರಷ್ಟು ಕೊರತೆ ಆಗಿದೆ. ಕೊಪ್ಪ, ಕಳಸ, ಶೃಂಗೇರಿ ಹಾಗೂ ಎನ್‌ಆರ್‌ಪುರದಲ್ಲಿ ಮಾತ್ರ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದೆ. ಬಯಲು ಸೀಮೆಯ ಜಿಲ್ಲೆಗಳಲ್ಲಿ ಭಾರೀ ಪ್ರಮಾಣದ ಮಳೆ ಕೊರತೆ ಆಗಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ಜೂನ್ 4ರ ವರೆಗೆ ಜಿಲ್ಲೆಗೆ ಯೆಲ್ಲೋ ಅಲರ್ಟ್ ಮುನ್ಸೂಚನೆ ನೀಡಲಾಗಿದೆ ಎಂದು ವಿವರಿಸಿದರು.
₹3.23 ಕೋಟಿ ಆಸ್ತಿಗೆ ಹಾನಿ
ಕಳೆದ ಏಪ್ರಿಲ್ ಮತ್ತು ಮೇ ಅವಧಿಯಲ್ಲಿ ಸುರಿದ ಮಳೆಯಿಂದ 1870 ವಿದ್ಯುತ್ ಕಂಬ ಧರೆಗುರುಳಿ ₹2.91 ಕೋಟಿ ನಷ್ಟವಾಗಿದೆ. 37.40 ಕಿ.ಮೀ ಉದ್ದದ ವಿದ್ಯುತ್ ತಂತಿ ಮಾರ್ಗ ಹಾಳಾಗಿದೆ. ಸುಮಾರು ₹27.95 ಲಕ್ಷ ನಷ್ಟು ನಷ್ಟವಾಗಿದೆ. 2 ಶಾಲಾ/ ಅಂಗನವಾಡಿ ಕಟ್ಟಡಗಳು ಹಾನಿಗೆ ಒಳಾಗಿ ₹4 ಲಕ್ಷ ನಷ್ಟವಾಗಿದೆ. ಒಟ್ಟು ₹3.23 ಕೋಟಿ ನಷ್ಟು ಹಾನಿಯಾಗಿದೆ ಎಂದು ಮಾಹಿತಿ ನೀಡಿದರು.
51 ಮನೆಗಳಿಗೆ ಬಾಗಶಃ ಹಾನಿ
ಮಳೆ ಅನಾಹುತದಿಂದ ಜಿಲ್ಲೆಯ ಒಟ್ಟು 51 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಎನ್.ಆರ್.ಪುರ ತಾಲೂಕಿನ ಒಂದು ಮನೆ ಸಂಪೂರ್ಣವಾಗಿ ಹಾನಿಗೆ ಒಳಗಾಗಿದೆ. ಸಂಪೂರ್ಣ ಹಾನಿಯಾದ ಮನೆಗಳಿಗೆ ₹1.20 ಲಕ್ಷ ಹಾಗೂ ಭಾಗಶಃ ಹಾನಿಯಾದ ಮನೆಗೆ ₹6500 ಪರಿಹಾರ ನೀಡಲು ಅವಕಾಶವಿದೆ. ಇನ್ನು 26.58 ಹೆಕ್ಟೇರ್ ನಷ್ಟು ತೋಟಗಾರಿಕೆ ಬೆಳೆಗೆ ಹಾನಿಯಾಗಿದ್ದು, ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
₹26.82 ಕೋಟಿ ವಿಪತ್ತು ನಿಧಿಜಿಲ್ಲೆಯ ವಿಪತ್ತು ನಿರ್ವಹಣೆ ಕಾರ್ಯಕ್ಕೆ ಸದ್ಯ ₹26.82 ಕೋಟಿ ಅನುದಾನ ಲಭ್ಯವಿದ್ದು, ವಿಪತ್ತು ಪರಿಹಾರಕ್ಕೆ ಯಾವುದೇ ಅನುದಾನದ ಕೊರತೆ ಇಲ್ಲ. ಹಾನಿಗೆ ಒಳಗಾದ ಸಂತ್ರಸ್ತರಿಗೆ ತ್ವರಿತ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್.ಎಸ್.ಕೀರ್ತನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಯಾಮ, ಅಪರ ಜಿಲ್ಲಾಧಿಕಾರಿ ನಂಜುಂಡೇಗೌಡ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಎಂ.ತಿರುಮಲೇಶ್, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕಿ ಮಂಗಳ ಉಪಸ್ಥಿತರಿದ್ದರು.---ಬಾಕ್ಸ್---
164 ಪ್ರವಾಹ ಪೀಡಿತ ಸ್ಥಳ ಗುರುತು
ಜಿಲ್ಲೆಯಲ್ಲಿ ಒಟ್ಟು 164 ಜಲಾಗೃತ ಹಾಗೂ ಇತರೆ ರೀತಿಯಲ್ಲಿ ವಿಪತ್ತಿನ ದುರ್ಬಲ ಪ್ರದೇಶಗಳಿವೆ ಎಂದು ಗುರುತಿಸಲಾಗಿದೆ. ಇನ್ನೂ ಮೂಡಿಗೆರೆ ತಾಲೂಕಿನಲ್ಲಿ 17, ಎನ್,ಆರ್,ಪುರದಲ್ಲಿ 12, ಚಿಕ್ಕಮಗಳೂರು 11, ಕೊಪ್ಪ 7, ಶೃಂಗೇರಿ 9, ಕಳಸ 17 ಸ್ಥಳದಲ್ಲಿ ಕಾಳಜಿ ಕೇಂದ್ರಗಳಿಗೆ ಗುರುತಿಸಲಾಗಿದೆ. ---ಬಾಕ್ಸ್--
ಮಳೆ ಪ್ರವಾಹ, ಅನಾಹುತ ಮುನ್ನೆಚ್ಚರಿಕೆ ಸಿದ್ಧತೆ
ಜಿಲ್ಲೆಯಲ್ಲಿ ಮಳೆಗಾಲದಲ್ಲಿ ಉಂಟಾಗುವ ಅನಾಹುತ ಎದುರಿಸುವುದಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಭೂ ಕುಸಿತ, ಧರೆಗುರುಳಿದ ಮರ ತೆರವು ಕಾರ್ಯಕ್ಕೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಒಟ್ಟು 48 ಜೆಸಿಬಿ, 61 ಹಿಟಾಚಿ, 74 ಟ್ರ್ಯಾಕ್ಟರ್ ಹಾಗೂ 243 ಟಿಪ್ಪರ್ ಲಾರಿಯ ಮಾಲೀಕರ ಮಾಹಿತಿ ಸಂಗ್ರಹಿಸಲಾಗಿದೆ. ಜತೆಗೆ, 11 ಇಂಧನ ಚಾಲಿತ ಬೋಟ್, ಹಗ್ಗ, ಜೀವ ರಕ್ಷಕ ಜಾಕೆಟ್ ಉಪಕರಣಗಳನ್ನು ಇರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಭವ್ವರ್ ಸಿಂಗ್ ಮೀನಾ ತಿಳಿಸಿದರು.
ಉಳಿದಂತೆ ರಕ್ಷಣಾ ಕಾರ್ಯಾಚರಣೆಗೆ 561 ಗೃಹರಕ್ಷಕ ದಳ ಸಿಬ್ಬಂದಿ, 64 ನುರಿತ ಈಜುಗಾರರು, 566 ಸ್ವಯಂ ಸೇವಕರ ಪಟ್ಟಿ ಸಿದ್ಧವಿದ್ದು, 34 ರಕ್ಷಣಾ ಕಾರ್ಯಾಚರಣೆ ತಂಡ ಇರಿಸಲಾಗಿದೆ ಎಂದು ವಿವರಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.