ಬೆಂಗಳೂರು ಅಭಿವೃದ್ಧಿಗೆ 1 ಲಕ್ಷ ಕೋಟಿ ಬೇಕು : ಡಿಕೆಶಿ

KannadaprabhaNewsNetwork |  
Published : Oct 28, 2026, 03:45 AM ISTUpdated : Oct 28, 2026, 05:21 AM IST
CM Meeting

ಸಾರಾಂಶ

ಬೆಂಗಳೂರು ನಗರದ ಭವಿಷ್ಯದ ಬೆಳವಣಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮುಂದಿನ 10 ವರ್ಷಗಳಿಗೆ ಯೋಜನೆಗಳನ್ನು ರೂಪಿಸಲಾಗಿದ್ದು, ಅವುಗಳ ಅನುಷ್ಠಾನಕ್ಕೆ 1 ಲಕ್ಷ ಕೋಟಿ ರು. ಅನುದಾನದ ಅವಶ್ಯಕತೆಯಿದೆ. ನಗರದ ಅಭಿವೃದ್ಧಿಗೆ ಆದ್ಯತೆ ಮೇರೆಗೆ ಅನುದಾನ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಬೆಂಗಳೂರು : ಬೆಂಗಳೂರು ನಗರದ ಭವಿಷ್ಯದ ಬೆಳವಣಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮುಂದಿನ 10 ವರ್ಷಗಳಿಗೆ ಯೋಜನೆಗಳನ್ನು ರೂಪಿಸಲಾಗಿದ್ದು, ಅವುಗಳ ಅನುಷ್ಠಾನಕ್ಕೆ 1 ಲಕ್ಷ ಕೋಟಿ ರು. ಅನುದಾನದ ಅವಶ್ಯಕತೆಯಿದೆ. ನಗರದ ಅಭಿವೃದ್ಧಿಗೆ ಆದ್ಯತೆ ಮೇರೆಗೆ ಅನುದಾನ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಮುಖ್ಯಮಂತ್ರಿ ಅವರ ಗೃಹ ಕಚೇರಿ ಕೃಷ್ಣಾದಲ್ಲಿ ಮಂಗಳವಾರ ಬೆಂಗಳೂರು ನಗರ ವ್ಯಾಪ್ತಿಯ ಶಾಸಕರು ಮತ್ತು ವಿಧಾನಪರಿಷತ್‌ ಸದಸ್ಯರೊಂದಿಗೆ ಸಭೆ ನಡೆಸಿದ ಡಿ.ಕೆ. ಶಿವಕುಮಾರ್‌, ನಗರದ ಅಭಿವೃದ್ಧಿ ಕುರಿತಂತೆ ಸರ್ಕಾರ ರೂಪಿಸಿರುವ ಯೋಜನೆಗಳು ಹಾಗೂ ಸಮಸ್ಯೆಗಳ ನಿವಾರಣೆಗೆ ಕೈಗೊಂಡಿರುವ ಕ್ರಮಗಳ ಕುರಿತಂತೆ ಚರ್ಚೆ ನಡೆಸಿದರು.

ಬೆಂಗಳೂರು ನಗರದ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಲು 40 ಕಿಮೀ ಉದ್ದದ ದ್ವಿಪಥ ಸುರಂಗ ಮಾರ್ಗ, 120 ಕಿಮೀ ಉದ್ದದ ಎಲಿವೇಟೆಡ್‌ ಕಾರಿಡಾರ್‌, 1500 ಕಿಮೀ ಮುಖ್ಯ ಮತ್ತು ಉಪಮುಖ್ಯ ರಸ್ತೆಗಳ ಉನ್ನತೀಕರಣ ಕಾರ್ಯ ಕೈಗೊಳ್ಳಲು ಯೋಜನೆ ರೂಪಿಸಲಾಗಿದೆ. ನಗರದ ಮೂಲಸೌಕರ್ಯ ಮೇಲ್ದರ್ಜೆಗೇರಿಸಲು ಸರ್ಕಾರ ಬದ್ಧವಾಗಿದೆ. ಅದಕ್ಕೆ ಪೂರಕವಾಗಿ ಕೆಲಸ ಮಾಡುತ್ತಿದೆ ಎಂದರು.

ಸಂಚಾರ ವ್ಯವಸ್ಥೆ ಸುಗಮಗೊಳಿಸಲು 40 ಕಿಮೀ ದ್ವಿಪಥ ಸುರಂಗ

ಸಂಚಾರ ವ್ಯವಸ್ಥೆ ಸುಗಮಗೊಳಿಸಲು 40 ಕಿಮೀ ದ್ವಿಪಥ ಸುರಂಗ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಹೆಬ್ಬಾಳದಲ್ಲಿ 2 ಕಿಮೀ ಸುರಂಗ ಕಾಮಗಾರಿ ಆರಂಭಿಸಲಾಗಿದೆ. ಉಳಿದಂತೆ 16.5 ಕಿಮೀ ಉತ್ತರ-ದಕ್ಷಿಣ ಕಾರಿಡಾರ್‌ ನಿರ್ಮಾಣದ ಯೋಜನೆ ರೂಪಿಸಲಾಗಿದ್ದು, 17780 ಕೋಟಿ ರು. ವೆಚ್ಚ ಮಾಡಲಾಗುತ್ತದೆ. ಅದಕ್ಕೆ ಸರ್ಕಾರ 7 ಸಾವಿರ ಕೋಟಿ ರು. ಬಂಡವಾಳ ಹೂಡಲಿದೆ. ಹಾಗೆಯೇ, 21 ಕಿಮೀ ಉದ್ದದ ಪೂರ್ವ-ಪಶ್ಚಿಮ ಕಾರಿಡಾರ್‌ ನಿರ್ಮಿಸಲು ಯೋಜನೆ ರೂಪಿಸಲಾಗಿದೆ ಎಂದು ವಿವರಿಸಿದರು.ರಾಷ್ಟ್ರೀಯ ಹೆದ್ದಾರಿ ಮಾನದಂಡದಂತೆ 23165 ಕೋಟಿ ರು. ವೆಚ್ಚದಲ್ಲಿ 120 ಕಿಮೀ ಎಲಿವೆಟೆಡ್‌ ಕಾರಿಡಾರ್‌ ನಿರ್ಮಿಸಲಾಗುತ್ತದೆ.

ಅದರಲ್ಲಿ 10 ಕಿಮೀಗಿಂದ ಕಡಿಮೆ ಉದ್ದದ ಕಾರಿಡಾರ್‌ಗಳು ಟೋಲ್‌ ಮುಕ್ತವಾಗಿರಲಿವೆ. ಒಟ್ಟು 4 ಕೆಟಗರಿಯಲ್ಲಿ ಎಲಿವೇಟೆಡ್‌ ಕಾಮಗಾರಿ ನಿರ್ಮಿಸಲಾಗುವುದು. ಹಾಗೆಯೇ, ನಗರದಲ್ಲಿ ಸುಮಾರು 500 ಕಿಮೀ ಹೊಸ ರಸ್ತೆ ಸಂಪರ್ಕ ಕೈಗೊಳ್ಳಲು ನಿರ್ಧರಿಸಲಾಗಿದ್ದು, ಅದರಲ್ಲಿ ರಾಜಕಾಲುವೆ ಪಕ್ಕದಲ್ಲಿ 300 ಕಿಮೀ ಉದ್ದದ ಬಫರ್‌ ರಸ್ತೆ ನಿರ್ಮಿಸಲಾಗುವುದು ಹಾಗೂ 68 ಕಿಮೀ ಬ್ಯುಸಿನೆಸ್‌ ಕಾರಿಡಾರ್‌ (ಪೆರಿಫೆರಲ್‌ ರಿಂಗ್‌ ರಸ್ತೆ) ನಿರ್ಮಾಣವೂ ಸೇರಿದೆ ಎಂದು ಹೇಳಿದರು.

17 ಕಿಮೀ ಉದ್ದದ ಹೊರವರ್ತುಲ ರಸ್ತೆಯ ಮರು ಅಭಿವೃದ್ಧಿ ಕಾಮಗಾರಿ ಅನುಷ್ಠಾನಗೊಳಿಸಲಾಗುವುದು. ಅದರ ಜತೆಗೆ ಹೊರವರ್ತುಲ ರಸ್ತೆ ವ್ಯಾಪ್ತಿಯಲ್ಲಿ 37 ಕಿಮೀ ಡಬ್ಬಲ್‌ ಡೆಕ್ಕರ್‌ ರಸ್ತೆ ನಿರ್ಮಾಣ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಕೇಂದ್ರ ಸರ್ಕಾರ ಕೇವಲ 11 ಕಿಮೀ ರಸ್ತೆ ನಿರ್ಮಾಣಕ್ಕೆ ಅನುಮತಿ ದೊರೆತಿದೆ. ಬೆಂಗಳೂರು ನಗರ ನಿರ್ಮಾಣವಾಗಿ 2027ಕ್ಕೆ 500 ವರ್ಷಗಳಾಗಲಿದೆ. ಆ ಹಿನ್ನೆಲೆಯಲ್ಲಿ ಮುಂದಿನ 10 ವರ್ಷಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಯೋಜನೆಗಳನ್ನು ರೂಪಿಸಲಾಗಿದೆ. ಹೊಸ ಯೋಜನೆಗಳಿಗೆ ಅಂದಾಜು 1 ಲಕ್ಷ ಕೋಟಿ ರು. ಅವಶ್ಯಕತೆಯಿದ್ದು, ಆದ್ಯತೆ ಮೇರೆಗೆ ಯೋಜನೆಗಳಿಗೆ ಅನುದಾನ ಒದಗಿಸಲಾಗುವುದು.

ಬೆಂಗಳೂರು ಸಂಚಾರ ವ್ಯವಸ್ಥೆ ಸುಧಾರಿಸಲು ಸಾರ್ವನಿಕ ರಸ್ತೆ ಸಂಪರ್ಕ ವ್ಯವಸ್ಥೆ ಸುಧಾರಿಸುವುದರ ಜತೆಗೆ ಬಿಎಂಟಿಸಿ, ಮೆಟ್ರೋ, ಉಪನಗರ ರೈಲ್ವೆ ಸಂಪರ್ಕ ಉತ್ತಮಗೊಳಿಸಲು ಆದ್ಯತೆ ನೀಡಲಾಗುತ್ತಿದೆ ಎಂದು ವಿವರಿಸಿದರು.ಪ್ರಸ್ತುತ 96 ಕಿಮೀ ಮೆಟ್ರೋ ರೈಲು ಸಂಪರ್ಕವಿದ್ದು, 2027ರ ಅವಧಿಗೆ ಅದನ್ನು 170 ಕಿಮೀಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಹಾಗೆಯೇ, ಬಿಎಂಟಿಸಿಯಲ್ಲಿ 7 ಸಾವಿರ ಬಸ್‌ಗಳಿದ್ದು ಅದಕ್ಕೆ ಇನ್ನೂ 4500 ಹೊಸ ಬಸ್‌ ಸೇರ್ಪಡೆ ಮಾಡಲಾಗುತ್ತಿದೆ. ಉಪನಗರ ರೈಲು ಸಂಪರ್ಕ ಕಾಮಗಾರಿ ಪ್ರಗತಿಯಲ್ಲಿದ್ದು 2030ರ ವೇಳೆಗೆ 150 ಕಿಮೀ ಸಂಪರ್ಕ ಸಾಧಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.

ತ್ಯಾಜ್ಯ ನಿರ್ವಹಣೆ ಗುತ್ತಿಗೆದಾರರ ವಿರುದ್ಧ ಕ್ರಮ:

ಬೆಂಗಳೂರಿನಲ್ಲಿ ಕಸ ನಿರ್ವಹಣೆ ವ್ಯವಸ್ಥೆಯನ್ನು ಸಮರ್ಪಕವಾಗಿಸಲು ಕ್ರಮ ಕೈಗೊಳ್ಳಲಾಗಿದೆ. 27 ವಿಧಾನಸಭಾ ಕ್ಷೇತ್ರಗಳಲ್ಲಿ ಕಸ ನಿರ್ವಹಣೇಗೆ 33 ಪ್ಯಾಕೇಜ್‌ ಮಾಡಲಾಗಿತ್ತು. ಈಗ 21 ಪ್ಯಾಕೇಜ್‌ಗಳಿಗೆ ಟೆಂಡರ್‌ ಪ್ರಕ್ರಿಯೆ ನಡೆಸಲಾಗಿದೆ. ಎಲ್ಲ ಅರ್ಹ ಗುತ್ತಿಗೆದಾರರಿಗೆ ಶೀಘ್ರದಲ್ಲಿ ಕಾರ್ಯಾದೇಶ ನೀಡಲಾಗುವುದು. ಹೊಸ ಟೆಂಡರ್‌ನಲ್ಲಿ ವಾಹನ ಸಾಮರ್ಥ್ಯದ ಆಧಾರದಲ್ಲಿ 9 ಸಾವಿರ ಟನ್‌ವರೆಗೆ ಕಸ ಸಂಗ್ರಹಿಸಲು ಸಾಧ್ಯವಿದೆ. ಎಲ್ಲ ಕಸ ಸಂಗ್ರಹ ವಾಹನಗಳಿಗೆ ಕಡ್ಡಾಯವಾಗಿ ಜಿಪಿಎಸ್ ಅಳವಡಿಸಲಾಗುತ್ತದೆ. ಗುತ್ತಿಗೆ ನಿಯಮ ಉಲ್ಲಂಘಿಸುವ ಮತ್ತು ಕಸ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರುವ ಗುತ್ತಿಗೆದಾರರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಅನುದಾನ ಹಂಚಿಕೆಯಲ್ಲಿ ತಾರತಮ್ಯವಿಲ್ಲ:

ಬೆಂಗಳೂರು ನಗರ ಮೂಲಸೌಕರ್ಯವನ್ನು ಮೇಲ್ದರ್ಜೆಗೇರಿಸಲು ಸರ್ಕಾರ ಬದ್ಧವಾಗಿದೆ. ಅದಕ್ಕಾಗಿ ತಾರತಮ್ಯವಿಲ್ಲದೆ ಎಲ್ಲ ಶಾಸಕರ ಕ್ಷೇತ್ರಗಳಿಗೂ ಅಗತ್ಯ ಅನುದಾನ ಒದಗಿಸಲಾಗುತ್ತಿದೆ. ಬೆಂಗಳೂರಿನ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಕೆಲಸ ಮಾಡಲಾಗುತ್ತಿದೆ. ಶಾಸಕರು ತಮ್ಮ ಕ್ಷೇತ್ರಗಳಲ್ಲಿ ತುರ್ತಾಗಿ ಕೈಗೊಳ್ಳಬೇಕಿರುವ ಕಾಮಗಾರಿಗಳ ಪ್ರಸ್ತಾವನೆ ಸಲ್ಲಿಸಿದರೆ ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಸಚಿವರಾದ ಕೃಷ್ಣಬೈರೇಗೌಡ, ರಿಜ್ವಾನ್‌ ಅರ್ಷದ್‌, ಮಾಜಿ ಡಿಸಿಎಂ ಡಾ. ಅಶ್ವತ್ಥನಾರಾಯಣ, ಮಾಜಿ ಸಚಿವ ದಿನೇಶ್‌ ಗುಂಡೂರಾವ್, ಎಸ್‌.ಟಿ. ಸೋಮಶೇಖರ್‌, ಬೈರತಿ ಬಸವರಾಜು ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಕನ್ನಡಿಗರ ನೌಕರಿಗಾಗಿ ಮಹಿಷಿ ವರದಿ ಮಂಡಿಸುವಂತೆ ಒತ್ತಾಯ
ಮಹಿಳೆ, ಮಕ್ಕಳ ಸುರಕ್ಷತೇಲಿ ಬೆಂಗ್ಳೂರು 1ನೇ ಸ್ಥಾನ : ಸೀಮಂತ್‌