ಕನ್ನಡಪ್ರಭ ವಾರ್ತೆ ಬೆಂಗಳೂರು
ಕರ್ನಾಟಕದಾದ್ಯಂತ ಇನ್ನರ್ ಎಂಜಿನಿಯರಿಂಗ್ ಸಾಧನವನ್ನು ಪರಿಚಯಿಸುವ ಗುರಿಯೊಂದಿಗೆ ನಡೆಸಲಾದ ಆನಂದ ಅಲೆ ಕಾರ್ಯಕ್ರಮದ ಭಾಗವಾಗಿ ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಆಯೋಜಿಸಿದ್ದ ಸತ್ಸಂಗ ಕಾರ್ಯಕ್ರಮದಲ್ಲಿ ರಕ್ಷಣಾ ಸಿಬ್ಬಂದಿ, ಸರ್ಕಾರಿ ಅಧಿಕಾರಿಗಳು, ವಿದ್ಯಾರ್ಥಿಗಳು ಮತ್ತು ಕಾರ್ಪೊರೇಟ್ ಉದ್ಯೋಗಿಗಳು ಸೇರಿದಂತೆ ಸಮಾಜದ ವಿವಿಧ ವರ್ಗಗಳಿಂದ 8,000ಕ್ಕೂ ಹೆಚ್ಚು ಶಿಬಿರಾರ್ಥಿಗಳು ಯೋಗಾಭ್ಯಾಸದ ದೀಕ್ಷೆ ಪಡೆದರು.
ಸತ್ಸಂಗವನ್ನು ಉದ್ದೇಶಿಸಿ ಮಾತನಾಡಿದ ಸದ್ಗುರುಗಳು, ನಮ್ಮೊಗಳಗೆ ನಾವು ಸ್ಥಿರತೆ ಕಾಪಾಡುವಿಕೆ ಹೆಚ್ಚಿನ ಜನರಿಗೆ ಅರ್ಥವಾಗದ ವಿಷಯವಾಗಿದೆ. ಶಾಂಭವಿ ಮಹಾಮುದ್ರ ಸ್ಥಿರತೆ ಕಾಪಾಡಿಕೊಳ್ಳಲು ಒಂದು ಅದ್ಭುತ ಯೋಗಾಭ್ಯಾಸ. ಸಂತೋಷ ಅಥವಾ ದುಃಖ ಅದು ನಿಮ್ಮೊಳಗಿನಿಂದಲೇ ಬರುತ್ತದೆ. ಇದನ್ನು ಯೋಗಾಭ್ಯಾಸದಿಂದ ನಾವು ನಿಯಂತ್ರಿಸಬಹುದಾಗಿದೆ. ಇದನ್ನು ಅರಿತುಕೊಂಡರೆ ಮಹತ್ವದ ಜ್ಞಾನೋದಯವೂ ಆಗುತ್ತದೆ ಎಂದರು.ಆತ್ಮಹತ್ಯೆಯ ದುರಂತ ಸಾವಲ್ಲ, ಆದರೆ ನಮ್ಮನ್ನು ನಾವು ಸಂರಕ್ಷಿಸಿಕೊಳ್ಳಲಾಗದ ದುರಂತ. ಇನ್ನರ್ ಎಂಜಿನಿಯರಿಂಗ್‌ನ ಪ್ರಮುಖ ಅಂಶವಾದ 21 ನಿಮಿಷಗಳ ಶಾಂಭವಿ ಮಹಾಮುದ್ರಾ ಕ್ರಿಯೆಯು ದೇಹ, ಮನಸ್ಸು ಮತ್ತು ಶಕ್ತಿ ವ್ಯವಸ್ಥೆಯನ್ನು ಸರಿಹೊಂದಿಸುವ ನಿಟ್ಟಿನಲ್ಲಿ ಒಂದು ಶಕ್ತಿಯುತ ಧ್ಯಾನಾಭ್ಯಾಸವಾಗಿದೆ. ಇದು ಜನರು ಹೆಚ್ಚಿನ ನಿರಾಳತೆ, ಆನಂದ ಮತ್ತು ಸ್ಥಿರತೆಯೊಂದಿಗೆ ಜೀವನವನ್ನು ನಿಭಾಯಿಸಲು ಅನುವು ಮಾಡಿಕೊಡುತ್ತದೆ ಎಂದು ಹೇಳಿದರು.