ಕನ್ನಡಪ್ರಭ ವಾರ್ತೆ ಕಾಪು
ಸಂಪೂರ್ಣ ಶಿಲಾಮಯವಾಗಿ ನವೀಕರಿಸಲಾದ ಉಡುಪಿ ಜಿಲ್ಲೆ ಕಾಪು ತಾಲೂಕಿನ ಕಾಪು ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭಾನುವಾರ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭೇಟಿ ನೀಡಿದರು. ಈ ಸಂದರ್ಭ ಅವರು ಮಾರಿಯಮ್ಮ ಬ್ರಹ್ಮಕಲಶೋತ್ಸವಕ್ಕೆ ತಮ್ಮ ಪತ್ನಿಯ ಹೆಸರಿನಲ್ಲಿ 9,99,999 ರು.ಗಳ ಸ್ವರ್ಣ ಕಲಶ ಅರ್ಪಿಸಿದರು.ಶನಿವಾರ ಬೆಳಗ್ಗೆ 11.05ಕ್ಕೆ ನೂತನ ಗುಡಿಯಲ್ಲಿ ಮಾರಿಯಮ್ಮ ಮತ್ತು ಉಚ್ಚಂಗಿದೇವಿಯರನ್ನು ಸ್ವರ್ಣ ಗದ್ದುಗೆಯ ಮೇಲೆ ಪ್ರತಿಷ್ಠಾಪನೆ ನಡೆಯಿತು. ಈ ವೇಳೆಗೆ ಸರಿಯಾಗಿ ಆಗಮಿಸಿದ ಡಿ.ಕೆ.ಶಿವಕುಮಾರ್ ಅವರಿಗೆ ಅರ್ಚಕರು ತಾಯಿಯ ಪ್ರಥಮ ಪ್ರಸಾದ ನೀಡಿ ಹರಸಿದರು.ಸುಮಾರು 35 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾದ ನೂತನ ಮಾರಿಗುಡಿ ದೇವಸ್ಥಾನದ ವಾಸ್ತು ವಿನ್ಯಾಸಗಳನ್ನು ಉಪಮುಖ್ಯಮಂತ್ರಿ ವೀಕ್ಷಿಸಿದರು, ಅದಕ್ಕೆ ಬಳಸಲಾದ ಇಳಕಲ್‌ನಿಂದ ತರಿಸಲಾದ ಕೆಂಪು ಕಲ್ಲಿನ ರಚನೆಗಳನ್ನು ನೋಡಿ ಅಚ್ಚರಿ ವ್ಯಕ್ತಪಡಿಸಿದರು.ಇದೇ ಸಂದರ್ಭದಲ್ಲಿ ನಡೆದ ಸಮಾರಂಭದಲ್ಲಿ ಮಾರಿಗುಡಿ ಅಭಿವೃದ್ಧಿ ಸಮಿತಿ ವತಿಯಿಂದ ಉಪಮುಖ್ಯಮಂತ್ರಿಗೆ ಗೌರವ ಸಲ್ಲಿಸಲಾಯಿತು. ಕ್ಷೇತ್ರದ ಪರವಾಗಿ ಕಾಪು ಶಾಸಕ, ಮಾರಿಗುಡಿ ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಸುರೇಶ್ ಶೆಟ್ಟಿ ಶಾಲು ಹೊದೆಸಿ, ಮಾರಿಯಮ್ಮನ ಪ್ರತಿಮೆ ನೀಡಿ ಸನ್ಮಾನಿಸಿದರು.ನಂತರ ಮಾತನಾಡಿದ ಡಿ.ಕೆ.ಶಿವಕುಮಾರ್, ಇಲ್ಲಿ ಸುಮಾರು 99 ಕೋಟಿ ರು.ಗಳ ಜೀರ್ಣೋದ್ಧಾರ ಯೋಜನೆ ನಡೆಯುತ್ತಿದೆ. ಇದಕ್ಕೆ ಸರ್ಕಾರದ ಅನುದಾನ ಇಲ್ಲ, ಕೇವಲ ಭಕ್ತರ ಸಹಾಯದಿಂದಲೇ ಜೀರ್ಣೋದ್ಧಾರಗೊಳ್ಳುತ್ತಿರುವ ಇಂತಹ ದೇವಸ್ಥಾನ ನಾನು ಬೇರೆಲ್ಲೂ ನೋಡಿಲ್ಲ ಎಂದರು.ದೇವರು ವರವನ್ನೂ ನೀಡುವುದಿಲ್ಲ, ಶಾಪವನ್ನೂ ನೀಡುವುದಿಲ್ಲ, ಕೇವಲ ಅವಕಾಶವನ್ನು ನೀಡುತ್ತಾನೆ. ನನಗೂ ಇಲ್ಲಿ ಗುಳಗುಂಜಿಯಷ್ಟು ಸೇವೆ ಮಾಡುವ ಅವಕಾಶ ಸಿಕ್ಕಿದೆ. ಇದು ನನ್ನ ಭಾಗ್ಯ, ನಾನು ಪ್ರಸನ್ನನಾಗಿದ್ದೇನೆ, ಮುಂದೆ ನನ್ನ ಪತ್ನಿಯನ್ನೂ ಇಲ್ಲಿಗೆ ಕಳುಹಿಸುತ್ತೇನೆ ಎಂದು ಹೇಳಿದರು.ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ಬ್ರಹ್ಮಲಶೋತ್ಸವ ಸಮಿತಿ ಅಧ್ಯಕ್ಷ ಕೆ. ಪ್ರಕಾಶ್ ಶೆಟ್ಟಿ ಉಪಮುಖ್ಯಮಂತ್ರಿ ಅವರನ್ನು ಮಾರಿಯಮ್ಮನ ದರ್ಶನಕ್ಕೆ ಬರ ಮಾಡಿಕೊಂಡರು. ಪ್ರಧಾನ ಅರ್ಚಕ ಶ್ರೀನಿವಾಸ ತಂತ್ರಿ ಕಲ್ಯ ಪ್ರಥಮ ಪ್ರಸಾದ ನೀಡಿದರು.
ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಎಸ್‌ಸಿಡಿಸಿಸಿ ಅಧ್ಯಕ್ಷ ಡಾ. ಎಂ.ಎನ್.ರಾಜೇಂದ್ರ ಕುಮಾರ್, ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ರೈ, ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ ಮುಂತಾದವರಿದ್ದರು.