ಉಡುಪಿ ಜಿಲ್ಲೆಯಲ್ಲಿ 1ಲಕ್ಷ ಜನರಿಂದ 100 ಕಿ.ಮೀ. ಮಾನವ ಸರಪಳಿ : ಡಾ. ಕೆ. ವಿದ್ಯಾಕುಮಾರಿ

KannadaprabhaNewsNetwork |  
Published : Sep 13, 2024, 01:43 AM IST
ಸರಪಳಿ12 | Kannada Prabha

ಸಾರಾಂಶ

ಶಿರೂರು ಗಡಿಯಿಂದ ಹೆಜಮಾಡಿ ಗಡಿವರೆಗೆ 100 ಕಿ.ಮೀ. ಮಾನವ ಸರಪಳಿ ನಿರ್ಮಾಣ ಕಾರ್ಯ ಯಶಸ್ವಿಗೊಳಿಸೋಣ ಎಂದು ಜಿಲ್ಲಾಧಿಕಾರಿ ಕರೆ ನೀಡಿದ್ದಾರೆ. ಜಿಲ್ಲೆಯಲ್ಲಿ 1 ಲಕ್ಷ ಜನರು ಭಾಗವಹಿಸಬೇಕು ಎಂದು ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿ

ಜಿಲ್ಲೆಯಲ್ಲಿ ಸೆ. 15 ರಂದು ಪ್ರಜಾಪ್ರಭುತ್ವದ ದಿನದ ಅಂಗವಾಗಿ ಶಿರೂರು ಗಡಿಯಿಂದ ಹೆಜಮಾಡಿ ಗಡಿವರೆಗೆ 100 ಕಿ.ಮೀ. ಮಾನವ ಸರಪಳಿ ನಿರ್ಮಾಣ ಕಾರ್ಯವನ್ನು ಯಶಸ್ವಿಗೊಳಿಸೋಣ ಎಂದು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಜಿಲ್ಲೆಯ ಜನತೆಗೆ ಕರೆ ನೀಡಿದ್ದಾರೆ.

ಅವರು ಗುರುವಾರ ಕಾಪು ತಾಲೂಕಿನ ಕುಂಜಾರುಗಿರಿಯಲ್ಲಿ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಾರ್ವಜನಿಕರನ್ನು ಉತ್ತೇಜಿಸಲು ಆಯೋಜಿಸಲಾದ ಟ್ರೆಕ್ಕಿಂಗ್‌ನಲ್ಲಿ ಭಾಗವಹಿಸಿ ಮಾತನಾಡಿದರು.

ರಾಜ್ಯ ಸರ್ಕಾರವು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಅರ್ಥಗರ್ಭಿತವಾಗಿ ಆಚರಿಸಲು ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯಲು ಬೀದರ್‌ನಿಂದ ಚಾಮರಾಜ ನಗರದ ವರೆಗೆ 250 ಕಿ.ಮೀ ವರೆಗೆ 25 ಲಕ್ಷ ಜನರು ಮಾನವ ಸರಪಳಿ ನಿರ್ಮಿಸಲು ತೀರ್ಮಾನಿಸಲಾಗಿದೆ. ಉಡುಪಿ ಜಿಲ್ಲೆಯಲ್ಲಿ 100 ಕಿ.ಮೀ. ಮಾನವ ಸರಪಳಿ ನಿರ್ಮಿಸಲು ಸುಮಾರು 1 ಲಕ್ಷ ಜನರು ಭಾಗವಹಿಸಬೇಕು. ಸಾರ್ವಜನಿಕರು, ಶಾಲಾ ಕಾಲೇಜುಗಳು ಸಂಘ - ಸಂಸ್ಥೆ, ವಿವಿಧ ಸಮುದಾಯ, ಎನ್.ಜಿ.ಓ.ಗಳು, ಸ್ವಸಹಾಯ ಸಂಘಗಳು, ರೋಟರಿ - ಲಯನ್ಸ್ ಮುಂತಾದ ಸಂಸ್ಥೆಗಳು ಸ್ವಯಂಪ್ರೇರಿತವಾಗಿ ಕೈಜೋಡಿಸಬೇಕು ಎಂದರು.

ಈ ಮಾನವ ಸರಪಳಿ ಕಾರ್ಯಕ್ರಮವನ್ನು ಪ್ರತಿಯೊಬ್ಬ ನಾಗರಿಕರು, ಕುಟುಂಬ ಸಮೇತ ಪಾಲ್ಗೊಂಡು ಹಬ್ಬದ ರೀತಿಯಲ್ಲಿ ಸಂಭ್ರಮದಿಂದ ಆಚರಿಸೋಣ, ಅದಕ್ಕಾಗಿ ಸ್ತಬ್ದಚಿತ್ರಗಳು, ಜಿಲ್ಲೆಯ ಸಂಸ್ಕೃತಿಯ ಜನಪದ ವೇಷಗಳು, ಚೆಂಡೆ - ಡೊಳ್ಳು ತಂಡಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿವೆ ಎಂದರು.

ಇದೇ ಸಂದರ್ಭದಲ್ಲಿ ಕುಂಜಾರುಗಿರಿಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗದಲ್ಲಿ ಡಿಸಿ ಮತ್ತು ಇತರ ಅಧಿಕಾರಿಗಳು ಸಾಂಕೇತಿಕವಾಗಿ ಮಾನವ ಸರಪಳಿಯನ್ನು ರಚಿಸಿ, ಪ್ರಜಾಪ್ರಭುತ್ವವನ್ನು ಸಂಭ್ರಮಿಸೋಣ, ಮಾನವ ಸರಪಳಿಯನ್ನು ನಿರ್ಮಿಸೋಣ ಎಂಬ ಘೋಷಣೆಗಳನ್ನು ಕೂಗಿದರು.

ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಟಿ. ಸಿದ್ದಲಿಂಗಪ್ಪ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಅನಿತಾ ಮಡ್ಲೂರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ರವೀಂದ್ರ, ಕಾಪು ತಹಸೀಲ್ದಾರ್ ಪ್ರತಿಭಾ, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಜಿಲ್ಲೆಯ ಮಾನವ ಸರಪಳಿಯು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮೂಲಕ ಬೈಂದೂರು ತಾಲೂಕಿನ ಶಿರೂರು ಗ್ರಾಮದಿಂದ ಆರಂಭಗೊಂಡು ಬಿಜೂರು, ಉಪ್ಪುಂದ, ಕಾರ್ಗಲ್, ಕಂಬದಕೋಣೆ, ಕಿರಿಮಂಜೇಶ್ವರ, ನಾವುಂದ, ಮರವಂತೆ, ಹೊಸಾಡು, ಹೆಮ್ಮಾಡಿ, ಕಟ್‌ಬೆಲ್ತೂರು, ತಲ್ಲೂರು, ಕೋಟೇಶ್ವರ, ಗೋಪಾಡಿ, ಕುಂಭಾಶಿ, ತೆಕ್ಕಟ್ಟೆ, ಕೋಟ, ಕೋಟತಟ್ಟು, ಸಾಲಿಗ್ರಾಮ, ಪಾಂಡೇಶ್ವರ, ಐರೋಡಿ, ಹಂದಾಡಿ, ವಾರಂಬಳ್ಳಿ, ಚಾಂತಾರು, ಹಾರಾಡಿ, ಉಪ್ಪೂರು, ಅಂಬಲಪಾಡಿ, ಕಡೆಕಾರ್, ಉದ್ಯಾವರ, ಕಟಪಾಡಿ, ಕೋಟೆ, ಇನ್ನಂಜೆ, ಬಡಾ, ತೆಂಕ, ಪಡುಬಿದ್ರೆ ಗ್ರಾಮ ಪಂಚಾಯಿತಿ ಮೂಲಕ ಹಾದು ದಕ್ಷಿಣ ಕನ್ನಡ ಜಿಲ್ಲೆಯನ್ನು ಕಾಪು ತಾಲೂಕಿನ ಹೆಜಮಾಡಿಯಲ್ಲಿ ಸೇರಿ, ಮುಂದೆ ದ.ಕ. ಜಿಲ್ಲೆಗೆ ಮುಂದುವರಿಯುತ್ತದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವೈಯಕ್ತಿಕ ಕಾರಣದಿಂದ ಬೇಸತ್ತು ಕಿರುತೆರೆ ಯುವ ನಟಿ ಆತ್ಮ*ತ್ಯೆ
ಜ.6 ಇಲ್ಲವೇ 9ಕ್ಕೆ ಡಿಕೆಶಿ ಸಿಎಂ 200% ಕನ್ಫರ್ಮ್: ಇಕ್ಬಾಲ್