ಕನ್ನಡಪ್ರಭ ವಾರ್ತೆ ಶಿರಾ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ತುಮಕೂರು-ಚಿತ್ರದುರ್ಗ-ದಾವಣಗೆರೆ ರೈಲ್ವೆ ಯೋಜನೆಗೆ ಚಾಲನೆ ನೀಡಿದ್ದು, ರೈಲ್ವೆ ಯೋಜನೆಗೆ 1000 ಕೋಟಿ ರು.ಗಳನ್ನು ಬಿಡುಗಡೆ ಮಾಡಿಸಿದ್ದೇನೆ ಎಂದು ಕೇಂದ್ರ ಜಲ ಶಕ್ತಿ ಹಾಗೂ ರೈಲ್ವೆ ಖಾತೆಗಳ ರಾಜ್ಯ ಸಚಿವರಾದ ವಿ. ಸೋಮಣ್ಣ ಹೇಳಿದರು.ಅವರು ಶುಕ್ರವಾರ ಶಿರಾ ನಗರಕ್ಕೆ ಭೇಟಿ ನೀಡಿ ನೆನೆಗುದ್ದಿವೆ ಬಿದ್ದಿರುವ ಹಾಗೂ ಅಪೂರ್ಣಗೊಂಡಿರುವ ರಸ್ತೆ ಕಾಮಗಾರಿಗಳ ವೀಕ್ಷಣೆ ಮಾಡಿ ಮಾತನಾಡಿದರು. ಶಿರಾ-ಹುಳಿಯಾರು ರಸ್ತೆಯು ಸುಮಾರು 15 ವರ್ಷಗಳಿಂದ ಕಾಮಗಾರಿ ನಡೆಯುತ್ತಿದ್ದು, ಇದುವರೆಗೂ ಪೂರ್ಣಗೊಂಡಿಲ್ಲ. ಈ ಬಗ್ಗೆ ಕೇಂದ್ರ ಸಾರಿಗೆ ಸಚಿವರಾದ ಗಡ್ಕರಿ ಅವರು ಈ ರಸ್ತೆ ಕಾಮಗಾರಿಗಳನ್ನು ಪರಿಶೀಲಿಸುವಂತೆ ತಿಳಿಸಿದ್ದರ ಹಿನ್ನೆಲೆಯಲ್ಲಿ ಇಂದು ಬಂದಿದ್ದೇನೆ. ಶಿರಾ-ಬುಕ್ಕಾಪಟ್ಟಣ ರಸ್ತೆಯಲ್ಲಿ ಹೊನ್ನೆನಹಳ್ಳಿ ಬಳಿ ಕಾಮಗಾರಿ ಪೂರ್ಣಗೊಳ್ಳಬೇಕಿದೆ. ಹದಿನೈದು ದಿನಗಳಲ್ಲಿ ಇದರ ಬಗ್ಗೆಯೂ ಕ್ರಮ ಕೈಗೊಳ್ಳಲಾಗುವುದು ಎಂದರು. ಮನವಿ: ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಚಿದಾನಂದ್ ಎಂ ಗೌಡ ಅವರು ಶಿರಾ ನಗರದ ಮಿನಿ ವಿಧಾನಸೌಧದ ಬಳಿ ಕೇಂದ್ರ ಸಚಿವರನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಚಿದಾನಂದ ಎಂ. ಗೌಡ ಅವರು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಶಿರಾ ನಗರದ ಹೈವೇ ರಸ್ತೆಯಲ್ಲಿ ಸರ್ವಿಸ್ ರಸ್ತೆ ಇಲ್ಲದಿರುವುದರಿಂದ ಅನೇಕ ಅಪಘಾತಗಳು ಸಂಭವಿಸುತ್ತಿರುತ್ತವೆ. ಆದ್ದರಿಂದ ಕೂಡಲೇ ರಾ.ಹೆ.48 (ಚೆನ್ನೈ - ದೆಹಲಿ ವಿಭಾಗ) ಶಿರಾ ಬೈಪಾಸ್ ಗೆ ಎರಡೂ ಬದಿಯಲ್ಲಿ ಸಮತೋಲನದ ಉದ್ದದಲ್ಲಿ 2-ಲೇನ್ ಸರ್ವಿಸ್ ರಸ್ತೆಯ ನಿರ್ಮಾಣ ಮಾಡುವಂತೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಚಿಕ್ಕನಾಯಕನಹಳ್ಳಿ ಶಾಸಕರಾದ ಸುರೇಶ್ ಬಾಬು, ತಹಶೀಲ್ದಾರ್ ಸಚ್ಚಿದಾನಂದ ಕುಚನೂರು, ಜೆಡಿಎಸ್ ಮುಖಂಡರಾದ ಆರ್.ಉಗ್ರೇಶ್, ತಾಲೂಕು ಮಂಡಲ ಅಧ್ಯಕ್ಷರಾದ ಚಿಕ್ಕಣ್ಣ, ನಗರಮಂಡಲ ಅಧ್ಯಕ್ಷರಾದ ಗಿರಿಧರ್, ಪ್ರಧಾನ ಕಾರ್ಯದರ್ಶಿಗಳಾದ ನಟರಾಜಪೇಟೆ, ಮಾಜಿನಗರಸಭೆ ಅಧ್ಯಕ್ಷರಾದ ಅಂಜಿನಪ್ಪ, ಹಿರಿಯ ಮುಖಂಡರಾದ ಮದ್ದೇವಹಳ್ಳಿ ರಾಮಕೃಷ್ಣಪ್ಪ, ರಾಜಣ್ಣ ಗೌಡ, ಮುದ್ದು ಗಣೇಶ್, ಬಿ.ಆರ್.ನಾಗಭೂಷಣ್, ನ್ಯಾಷನಲ್ ಹೈವೇ ಅಕಾರಿಗಳು ಸೇರಿದಂತೆ ಅನೇಕರು ಹಾಜರಿದ್ದರು.