ವಿಜೃಂಭಣೆಯ ವಾರಾಹಿ, ಮಾರಮ್ಮ ಜಾತ್ರಾ ಮಹೋತ್ಸವ - ಒಂಬತ್ತು ವರ್ಷಗಳ ನಂತರ ನಡೆದ ಜಾತ್ರಾ ಮಹೋತ್ಸವ

KannadaprabhaNewsNetwork |  
Published : Jul 2, 2025 11:52 PM IST
52 | Kannada Prabha

ಸಾರಾಂಶ

ದೇವರಿಗೆ ಹೋಮ ಹವನ, ಮಂಗಳಾರತಿ ನಡೆಸಿ ಭಕ್ತಾದಿಗಳಿಗೆ ಪ್ರಸಾದ

ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆಕಳೆದ ಒಂಬತ್ತು ವರ್ಷಗಳ ನಂತರ ನಡೆದ ಪಟ್ಟಣದ ಶಕ್ತಿ ದೇವತೆ ವಾರಾಹಿ ಮತ್ತು ಮಾರಮ್ಮನವರ ಜಾತ್ರಾ ಮಹೋತ್ಸವ ಮತ್ತು ಕೊಂಡೋತ್ಸವ ವಿಜೃಂಭಣೆಯಿಂದ ನೆರವೇರಿದ್ದು, ಗ್ರಾಮಸ್ಥರಲ್ಲಿ ಹರ್ಷವನ್ನುಂಟು ಮಾಡಿದೆ.ಪಟ್ಟಣದ ಶ್ರೀ ವಾರಾಹಿ ಮತ್ತು ಮಾರಮ್ಮನವರ ಕೊಂಡೋತ್ಸವ ಮತ್ತು ಜಾತ್ರಾ ಮಹೋತ್ಸವವು ಮೂರನೇ ದಿನವಾದ ಬುಧವಾರ ಗುಡಿಯ ಮುಂಭಾಗ 101 ಗಾಡಿ ಸೌದೆಯಿಂದ ರಾತ್ರಿಯಿಡಿ ಬೆಂದು ನಿರ್ಮಾಣವಾಗಿದ್ದ ಕೊಂಡದ ಮೇಲೆ 5 ಜನ ದೇವರ ಗುಡ್ಡಪ್ಪನವರು ಭಕ್ತಿಪರವಶರಾಗಿ ನಡೆದು ಸಾಗಿದ ನಂತರ ಕೊಂಡೋತ್ಸವ ಸಂಪನ್ನಗೊಂಡಿತು.ಕೊಂಡೋತ್ಸವವು ಅತ್ಯಂತ ವಿಜೃಂಭಣೆಯಿಂದ ಸಾಂಪ್ರದಾಯಿಕವಾಗಿ ದೇವಸ್ಥಾನದ ಮಾರಮ್ಮನ ಗುಡ್ಡಪ್ಪ, ವಾರಾಹಿ ಗುಡ್ಡಪ್ಪ, ಬೀರಪ್ಪನ ಗುಡ್ಡಪ್ಪ, ಶನಿದೇವರ ಗುಡ್ಡಪ್ಪ ವೀರಮಕ್ಕಳು, ಕೊಂಡವನ್ನು ದಾಟುವ ದೃಶ್ಯವನ್ನು ಕಣ್ತುಂಬಿಕೊಳ್ಳಲು ನಿಂತಿದ್ದ ಭಕ್ತರು ಹರ್ಷೋದ್ಘಾರದಿಂದ ಮಾರಮ್ಮನಿಗೆ ಜಯಘೋಷ ಕೂಗುವ ಮೂಲಕ ಪುನೀತರಾದರು.ಸೋಮವಾರ ಸಂಜೆ ಮಂಗಳವಾದ್ಯದೊಂದಿಗೆ ಕಪಿಲಾ ನದಿಯಲ್ಲಿ ಪೂಜೆ ಸಲ್ಲಿಸಿ ಗಂಗೆಯನ್ನು ತರಲಾಯಿತು. ನಂತರ ತಹಸೀಲ್ದಾರ್ ಶ್ರೀನಿವಾಸ ಅವರು ಕುಟುಂಬಸ್ಥರು ಮನೆಯಿಂದ ಮೆರವಣಿಗೆಯಲ್ಲಿ ಬಂದು ದೇವರಿಗೆ ಅರಮನೆಯ ತಂಪಿನ ಪೂಜೆ ಸಲ್ಲಿಸಲಾಯಿತು. ದೇವಸ್ಥಾನ ಸಮಿತಿಯವರು ತಹಸೀಲ್ದಾರ್ ಶ್ರೀನಿವಾಸ್, ಇನ್‌ಸ್ಪೆಕ್ಟರ್‌ ಗಂಗಾಧರ್ ಅವರನ್ನು ಅಭಿನಂದಿಸಲಾಯಿತು.ಪಟೇಲ್ ನಾಗರಾಜಶೆಟ್ಟಿ ಕುಟುಂಬ ಮತ್ತು ಶಾಸಕ ಅನಿಲ್ ಚಿಕ್ಕಮಾದು ಕುಟುಂಬದವರು ತಂಪಿನ ಪೂಜೆ ಸಲ್ಲಿಸಿದರು.ಮಂಗಳವಾರ ಬೆಳಗ್ಗೆ ದೇವರಿಗೆ ಹೋಮ ಹವನ, ಮಂಗಳಾರತಿ ನಡೆಸಿ ಭಕ್ತಾದಿಗಳಿಗೆ ಪ್ರಸಾದ ವಿತರಿಸಲಾಯಿತು. ಕೊಂಡೋತ್ಸವಕ್ಕೆ ತರಲಾಗಿದ್ದ ಒಂದೇ ಜಾತಿಯ ಕಗ್ಗಲಿ ಮರಗಳನ್ನು ಜೋಡಿಸಿ ರಾತ್ರಿ ಹನುಮಂತನಗರದ ಪೂಜಾರಿ ಕೃಷ್ಣ ಅವರ ಮನೆಯಿಂದ ಬೆಂಕಿ ತಂದು ಮರಗಳ ರಾಶಿಗೆ ಬೆಂಕಿ ಸ್ಪರ್ಶ ನೀಡಲಾಯಿತು.ಬುಧವಾರ ಬೆಳಗ್ಗೆ ಗುಳಿಗೆ ಕೆಂಡವನ್ನು ನೂಕಲಾಗಿ ಕೊಂಡದ ಸುತ್ತ ನೂರೊಂದು ಎಡೆಯನ್ನು ಇಟ್ಟು ಪೂಜೆ ಸಲ್ಲಿಸಲಾಯಿತು.ದೇವಸ್ಥಾನದ ಪಟೇಲರಾದ ಎಚ್.ಎನ್. ನಾಗರಾಜಶೆಟ್ಟರು, ಶಾನುಭೋಗರಾದ ಫಣೀಂದ್ರ, ಪುರಸಭೆ ಅಧ್ಯಕ್ಷೆ ಶಿವಮ್ಮ ಕೃಷ್ಣನಾಯಕ, ಮಾಜಿ ಪುರಸಭಾ ಅಧ್ಯಕ್ಷ ಬಿ.ಎಸ್. ರಂಗಯ್ಯಂಗಾರ್, ಮಾಜಿ ಪ್ರಧಾನ ಎಂ.ಸಿ. ದೊಡ್ಡನಾಯಕ, ಯಜಮಾನರಾದ ಜವರನಾಯಕ, ಗೋಪಾಲ್, ಬೀರಪ್ಪ, ವೆಂಕಟೇಶ್, ಶಿವರಾಜು, ಮೂರ್ತಾಚಾರ್, ಬಸವರಾಜು, ಮುಖಂಡರಾದ ಪ್ರಸಾದ್, ಕೃಷ್ಣನಾಯಕ, ಭುಜಂಗರಾವ್, ವೈ.ಟಿ. ಮಹೇಶ್, ಜವರೇಗೌಡ, ವಿನಯ್, ಶ್ರೀನಿವಾಸರಾಜು, ಕೃಷ್ಣ, ದೇವನಾಯಕ, ಮಂಜುನಾಥ್, ಕನ್ನಡ ಪ್ರಮೋದ, ಶ್ರೀಕಾಂತ್, ಮನೋಜ್, ಗೋಪಿ, ಶ್ರೀಕಂಠ, ಮಧು, ನಾಗರಾಜು, ಪ್ರಕಾಶ್ ಇದ್ದರು.

PREV