ಭಾರಿ ಮಳೆಗೆ ಕುಸಿತ ಕಂಡಿರುವ ಟರ್ಫ್ ಮೈದಾನದ ತಡೆಗೋಡೆ: ಆತಂಕದಲ್ಲಿ ನಿವಾಸಿಗಳು

KannadaprabhaNewsNetwork | Published : Jul 2, 2025 11:52 PM
ಭಾರೀ ಮಳೆಗೆ ಕುಸಿತ ಕಂಡಿರುವ ಟರ್ಫ್ ಮೈದಾನದ ತಡೆಗೋಡೆ: ಆತಂಕದಲ್ಲಿ ನಿವಾಸಿಗಳು | Kannada Prabha

ಸಾರಾಂಶ

ಮಳೆಯ ತೀವ್ರತೆ ಜಾಸ್ತಿಯಾದಲ್ಲಿ ಬೀಳುವುದು ಖಚಿತವಾಗಿದ್ದು, ಸ್ಟೇಡಿಯಂ ಸುತ್ತಮುತ್ತಲಿನ ಜನರನ್ನು ಆತಂಕಕ್ಕೀಡು ಮಾಡಿದೆ.

ಮುರಳೀಧರ್ ಶಾಂತಳ್ಳಿಕನ್ನಡಪ್ರಭವಾರ್ತೆ ಸೋಮವಾರಪೇಟೆ

ತಾಲೂಕು ಕೇಂದ್ರದಲ್ಲಿ 2 ವರ್ಷಗಳ ಹಿಂದೆ 5 ಕೋಟಿ ರು. ವೆಚ್ಚದಲ್ಲಿ ಆರಂಭಗೊಂಡ ಟರ್ಫ್ ಹಾಕಿ ಮೈದಾನಕ್ಕೆ ಕಟ್ಟಲಾಗಿದ್ದ 45ಲಕ್ಷ ರು. ವೆಚ್ಚದ ತಡೆಗೋಡೆ ಕೇವಲ ಎರಡು ತಿಂಗಳಿನಲ್ಲಿಯೇ ಕುಸಿತ ಕಂಡಿದ್ದು, ಮಳೆಯ ತೀವ್ರತೆ ಜಾಸ್ತಿಯಾದಲ್ಲಿ ಬೀಳುವುದು ಖಚಿತವಾಗಿದ್ದು, ಸ್ಟೇಡಿಯಂ ಸುತ್ತಮುತ್ತಲಿನ ಜನರನ್ನು ಆತಂಕಕ್ಕೀಡುಮಾಡಿದೆ.ಸ್ಟೇಡಿಯಂ ಕೆಳಭಾಗದಲ್ಲಿ ಹಲವು ನಿವಾಸಿಗಳಿದ್ದು, ತಡೆಗೋಡೆ ಕುಸಿದು ಬಿದ್ದಲ್ಲಿ ತಡೆಗೋಡೆ ಪಕ್ಕದಲ್ಲಿರುವ ಮನೆಗಳಿಗೆ ತೊಂದರೆ ಯಾಗುವುದರ ಜೊತೆಗೆ ಸ್ಟೇಡಿಯಂಗೂ ಭಾರೀ ನಷ್ಟವಾಗಲಿದೆ. ತಡೆಗೋಡೆ ಕಾಮಗಾರಿಯನ್ನು ಸಣ್ಣ ನೀರಾವರಿ ಇಲಾಖೆಯ ಮುಖಾಂತರ ಕುಶಾಲನಗರದ ಗುತ್ತಿಗೆದಾರ ಶ್ರೀನಿವಾಸ್ ಎಂಬುವರಿಗೆ ನೀಡಲಾಗಿದ್ದು, ಬಿಲ್ ಕೂಡ ಮಾಡದೇ ಇರುವುದರಿಂದ ಅವರಿಂದಲೇ ಮತ್ತೆ ಮಳೆ ಮುಗಿದ ನಂತರ ಕಾಮಗಾರಿ ನಡೆಸಲಾಗುವುದು ಎಂದು ನೀರಾವರಿ ಇಲಾಖೆ ಎಇಇ ಹೇಳಿದ್ದಾರೆ. ತಾತ್ಕಲಿಕವಾಗಿ ಪ್ಲಾಸ್ಟಿಕ್ ಮತ್ತು ಟಾರ್ಪಲ್ ಹೊದಿಸಲಾಗಿದ್ದು, ಈಗಾಗಲೇ ಕುಸಿತ ಕಂಡಿರುವ ತಡೆಗೋಡೆ ಮಳೆಯ ತೀವ್ರತೆ ಜಾಸ್ತಿಯಾಗಿದ್ದು, ಯಾವುದೇ ಕ್ಷಣದಲ್ಲಿಯಾದರೂ ಬೀಳುವ ಸ್ಥಿತಿಯಲ್ಲಿದೆ.2012 ರಲ್ಲಿ ಅಂದು ಶಾಸಕ ಹಾಗೂ ಕ್ರೀಡಾ ಸಚಿವರಾಗಿದ್ದ ಅಪ್ಪಚ್ಚುರಂಜನ್ ಅವರ ಅವಧಿಯಲ್ಲಿ ಟರ್ಫ್ ಕಾಮಗಾರಿಗೆ 3.5 ಕೋಟಿ ರು. ಅಂದಾಜುಪಟ್ಟಿ ತಯಾರಿಸಿ ಕಳುಹಿಸಲಾಗಿತ್ತು. ನಂತರ 2016 ರಲ್ಲಿ 4.15 ಕೋಟಿ ರು. ವೆಚ್ಚದಲ್ಲಿ ಕ್ರೀಡಾಂಗಣದ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಕ್ರೀಡಾಂಗಣ, ಟರ್ಫ್ ಕಾಮಗಾರಿ ಹಾಗೂ ತಡೆಗೋಡೆ ಸೇರಿದಂತೆ ಅಂದಾಜು 5 ಕೋಟಿ ರು. ವೆಚ್ಚವಾಗಿದೆ. ಹೈದರಾಬಾದ್ ಮೂಲದ ಗ್ರೇಟ್ ಸ್ಪೋರ್ಟ್ಸ್ ಇನ್‌ಫ್ರಾ ಪ್ರೈ.ಲಿ. ಸಂಸ್ಥೆ ಕಾಮಗಾರಿಯನ್ನು ಗುತ್ತಿಗೆ ಪಡೆದಿತ್ತು. ಕಳಪೆ ಕಾಮಗಾರಿ ಕುರಿತು ಲೋಕಾಯುಕ್ತಕ್ಕೆ ದೂರು:ಕಳಪೆ ಕಾಮಗಾರಿ ಕುರಿತು ಕ್ರೀಡಾಪ್ರೇಮಿಗಳು ಹಾಗೂ ಸ್ಥಳೀಯರು ಹಲವಾರು ಆಕ್ಷೇಪ ವ್ಯಕ್ತಪಡಿಸಿದ್ದು, ಅದೂ ಅಲ್ಲದೇ ಲೋಕಾಯುಕ್ತಕ್ಕೆ ದೂರನ್ನೂ ಕೂಡ ನೀಡಲಾಗಿತ್ತು. ನಂತರ ಹಲವಾರು ಬಾರಿ ಕಾಮಗಾರಿಗೆ ವಿಘ್ನ ಎದುರಾಗಿತ್ತು. ಅಂತಿಮವಾಗಿ 2023 ರಲ್ಲಿ ಸೋಮವಾರಪೇಟೆಯಲ್ಲಿ ಜರುಗಿದ ರಾಷ್ಟ್ರೀಯ ಮಟ್ಟದ ಹಾಕಿ ಪಂದ್ಯಾಟಕ್ಕೆ ಮೈದಾನವನ್ನು ಸಜ್ಜುಗೊಳಿಸಬೇಕಾದ ಸಂದರ್ಭದಲ್ಲಿ ಟರ್ಫ್ ಕ್ರೀಡಾಂಗಣಕ್ಕೆ ಚಾಲನೆ ನೀಡಲಾಗಿತ್ತು.

ಒಂದು ಕ್ರೀಡೆಗಾಗಿ ಮೂರು ಕ್ರೀಡೆಗಳಿಗೆ ಕೊಕ್!ಬಳಗುಂದ ಸರ್ಕಾರಿ ಶಾಲಾ ಮೈದಾನದಲ್ಲಿ ಟರ್ಫ್ ಕ್ರೀಡಾಂಗಣವನ್ನು ನಿರ್ಮಿಸಲು ಹಾಕಿ ಪ್ರೇಮಿಗಳು ಹಾಗೂ ನಾಗರಿಕರು ಚಿಂತನೆ ನಡೆಸಿ ಸಲಹೆಯನ್ನೂ ಕೂಡ ನೀಡಿದ್ದರು. ಹೀಗಿದ್ದರೂ ಜಿಲ್ಲಾ ಮಟ್ಟದ ಕ್ರೀಡಾಕೂಟಗಳು, ರಾಜ್ಯ ಮಟ್ಟದ ಫುಟ್ಬಾಲ್ ಪಂದ್ಯಗಳು ನಡೆಸಿದ್ದ ಕ್ರೀಡಾಂಗಣದಲ್ಲಿ ಹಾಕಿ ಕ್ರೀಡೆಯೊಂದನ್ನೂ ಮಾತ್ರ ಆಡಿಸಲು ಉಳಿದ ಕ್ರೀಡೆಗಳಾದ ಫುಟ್ಬಾಲ್, ಅಥ್ಲೆಟಿಕ್ಸ್, ಬಾಸ್ಕೆಟ್ಬಾಲ್ ಸೇರಿದಂತೆ ಹಲವು ಕ್ರೀಡೆಗಳಿಗೆ ತೊಂದರೆಯಾಗುತ್ತದೆ ಎಂಬುದು ಕ್ರೀಡಾ ಪ್ರೇಮಿಗಳ ವಾದವಾಗಿತ್ತು. ಅತ್ಯಂತ ಇಕ್ಕಟ್ಟಿನ ಸ್ಥಳದಲ್ಲಿ ಅಳತೆ ಕಡಿಮೆಯಿರುವ ಕುರಿತು ಕ್ರೀಡಾ ಪ್ರೇಮಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೂ ಕೂಡ ಅದೇ ಸ್ಥಳದಲ್ಲಿ ಕ್ರೀಡಾಂಗಣವನ್ನು ನಿರ್ಮಿಸಲಾಗಿತ್ತು. ಹೀಗಾಗಿ ಒಂದು ಕ್ರೀಡೆಗಾಗಿ ಮೂರು ಕ್ರೀಡೆಗಳನ್ನು ಸ್ಥಳವಿಲ್ಲದೇ, 80 ಕ್ಕೂ ಅಧಿಕ ವರ್ಷಗಳಿಂದ ಜಿಲ್ಲಾ ಮಟ್ಟ ಹಾಗೂ ರಾಜ್ಯ ಮಟ್ಟದ ಕ್ರೀಡೆಗಳನ್ನು ಆಯೋಜಿಸಿದ್ದ ಕ್ರೀಡಾಂಗಣದಲ್ಲಿ ಪ್ರಸ್ತುತ ಯಾವುದೇ ಕ್ರೀಡಾಕೂಟಗಳೂ ಕೂಡ ನಡೆಸದಂತಾಗಿರುವುದು ವಿಷಾದನೀಯ ಎಂದು ಕ್ರೀಡಾ ಪ್ರೇಮಿಗಳು ಬೇಸರವ್ಯಕ್ತಪಡಿಸುತ್ತಾರೆ. ಕೂಡಲೇ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ಕಾರ್ಯಪ್ರವೃತ್ತರಾಗದಿದ್ದಲ್ಲಿ ಹೆಚ್ಚಿನ ಅನಾಹುತಕ್ಕೆ ಕಾರಣವಾಗಲಿದ್ದು, 5 ಕೋಟಿ ರು. ವೆಚ್ಚದ ಟರ್ಫ್ ಮಣ್ಣು ಪಾಲಾಗಲಿದೆ ಎಂದು ಸ್ಥಳೀಯರು ಹಾಗೂ ಕ್ರೀಡಾಪ್ರೇಮಿಗಳು ಆತಂಕ ವ್ಯಕ್ತಪಡಿಸುತ್ತಾರೆ. ಮಾಜಿ ಸಚಿವ ಅಪ್ಪಚ್ಚುರಂಜನ್ ಸ್ಥಳಕ್ಕೆ ಭೇಟಿ:ತಮ್ಮ ಅವಧಿಯಲ್ಲಿ ಆಗಿದ್ದ ಟರ್ಫ್ ಕ್ರೀಡಾಂಗಣ, ಇದೀಗ ಈ ಸರ್ಕಾರದ ಅವಧಿಯಲ್ಲಿ ಎರಡು ತಿಂಗಳ ಹಿಂದೆ ನಡೆಸಿರುವ ಕಾಮಗಾರಿಯ ತಡೆಗೋಡೆ ಕುಸಿದಿರುವ ಕುರಿತು ತಿಳಿದ ಮಾಜಿ ಸಚಿವ ಅಪ್ಪಚ್ಚುರಂಜನ್ ರವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೂಡಲೇ ತಡೆಗೋಡೆಯನ್ನು ನಿರ್ಮಿಸಿಕೊಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸುವುದಾಗಿ ಹೇಳಿಕೆ ನೀಡಿದ್ದಾರೆ. ತಡೆಗೋಡೆ ಕುಸಿತವಾದಾಗಲೇ ಮೇ ತಿಂಗಳ ಕೊನೆಯಲ್ಲಿ ಸ್ಟೇಡಿಯಂಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಅಲ್ಲದೇ ತಡೆಗೋಡೆ ಹೆಚ್ಚಿನ ಕುಸಿತವಾಗಬಾರದೆಂದು ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಜರುಗಿಸಲಾಗಿದ್ದು, ಪ್ಲಾಸ್ಟಿಕ್ ಹೊದಿಕೆಯಿಂದ ಮುಚ್ಚಲಾಗಿದೆ. ಮಳೆಯ ತೀವ್ರತೆ ಕಡಿಮೆಯಾದ ನಂತರ ಅದೇ ಗುತ್ತಿಗೆದಾರನಿಂದ ಕಾಮಗಾರಿಯನ್ನು ಅವರದೇ ಸ್ವಂತ ವೆಚ್ಚದಲ್ಲಿ ಪುನರ್ ನಿರ್ಮಿಸಿಕೊಡುವಂತೆ ಸೂಚನೆ ನೀಡಲಾಗಿದೆ. ಡಾ.ಮಂತರ್ ಗೌಡ, ಶಾಸಕರು, ಮಡಿಕೇರಿ ವಿಧಾನಸಭಾ ಕ್ಷೇತ್ರತಡೆಗೋಡೆ ನಿರ್ಮಾಣವಾಗಿ ಕೇವಲ ಎರಡು ತಿಂಗಳು ಮಾತ್ರ ಕಳೆದಿದೆ. ತಡೆಗೋಡೆ ವಾಲುತ್ತಿದ್ದ ಸಂದರ್ಭ ಮಾಹಿತಿ ದೊರೆತ ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ್ದೇನೆ. ಅಲ್ಲದೇ ಸಣ್ಣ ನೀರಾವರಿ ಇಲಾಖೆ ವತಿಯಿಂದ ತಡೆಗೋಡೆಯನ್ನು ನಿರ್ಮಿಸಲಾಗಿದ್ದು, ಈ ಕುರಿತು ಇಲಾಖೆ ಎಇಇ ಕುಮಾರಸ್ವಾಮಿಯವರೊಂದಿಗೆ ಚರ್ಚೆ ನಡೆಸಿದ್ದೇನೆ. ಅವರು ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಶಾಸಕರು ಹಾಗೂ ಇಲಾಖೆಯ ಆಯುಕ್ತರ ಗಮನಕ್ಕೆ ತಂದಿರುತ್ತೇನೆ. ಮಳೆಯ ತೀವ್ರತೆ ಹೆಚ್ಚಿರುವುದರಿಂದ ಮಳೆ ಕಡಿಮೆಯಾದ ನಂತರ ಕಾಮಗಾರಿ ಪ್ರಾರಂಭಿಸಲು ಸೂಚನೆ ನೀಡಲಾಗಿದೆ. ವಿಸ್ಮಯಿ ವಿ.ಟಿ-ಸಹಾಯಕ ನಿರ್ದೇಶಕರು, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಡಿಕೇರಿತಡೆಗೋಡೆ ವಾಲುತ್ತಿರುವ ವಿಷಯ ತಿಳಿದು ಈಗಾಗಲೇ ಕ್ರೀಡಾಂಗಣಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಲಾಗಿದೆ. ನಮ್ಮ ಇಲಾಖೆಯ ವತಿಯಿಂದ ಕಾಮಗಾರಿ ನಿರ್ಮಿಸಲಾಗಿದೆ. ಗುತ್ತಿಗೆದಾರರೊಂದಿಗೂ ಕೂಡ ಚರ್ಚೆ ನಡೆಸಿದ್ದು, ಯಾವುದೇ ಬಿಲ್ ಮಾಡಿರುವುದಿಲ್ಲ. ಹೀಗಾಗಿ ಗುತ್ತಿಗೆದಾರ ಶ್ರೀನಿವಾಸ್ ಅವರಿಂದಲೇ ತಡೆಗೋಡೆ ಕಾಮಗಾರಿಯನ್ನು ಹೊಸದಾಗಿ ನಿರ್ಮಿಸಿಲಾಗುವುದು. ಈಗಾಗಲೇ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಜರುಗಿಸಲಾಗಿದ್ದು, ಸೆಪ್ಟೆಂಬರ್ ನಲ್ಲಿ ಅದರ ಹಿಂದೆಯೇ ಹೊಸದಾಗಿ ತಡೆಗೋಡೆ ಕಾಮಗಾರಿ ಆರಂಭಿಸಲಾಗುವುದು. ಯಾವುದೇ ಬಿರುಕು ಕಂಡುಬಂದಿಲ್ಲದಿರುವುದು ಮತ್ತು ನಿತ್ಯ ಇಲಾಖೆಯ ಸಿಬ್ಬಂದಿಗಳು ಈ ಕುರಿತು ಗಮನಿಸುತ್ತಿದ್ದಾರೆ. ಕುಮಾರಸ್ವಾಮಿ, ಎಇಇ, ಸಣ್ಣನೀರಾವರಿ ಇಲಾಖೆ, ಮಡಿಕೇರಿ

PREV