ಹಳಕಟ್ಟಿ ಇರದಿದ್ದರೆ ವಚನ ಸಾಹಿತ್ಯ ಸಿಗುತ್ತಿರಲಿಲ್ಲ

KannadaprabhaNewsNetwork | Published : Jul 2, 2025 11:52 PM
2ಕೆಪಿಎಲ್22 ಕೊಪ್ಪಳ ನಗರದ ಸಾಹಿತ್ಯ ಭವನದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೊಪ್ಪಳ ನಗರಸಭೆ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಡಾ. ಫ.ಗು.ಹಳಕಟ್ಟಿ ಜಯಂತಿ ಕಾರ್ಯಕ್ರಮ | Kannada Prabha

ಸಾರಾಂಶ

12ನೇ ಶತಮಾನದಲ್ಲಿ ಬಸವಾದಿ ಶರಣರು ಬಹಳಷ್ಟು ಹೋರಾಟಗಳ ಮೂಲಕ ಅಂದಿನ ಕಾಲಕಟ್ಟದಲ್ಲಿದ್ದ ವರ್ಗ ಮತ್ತು ಜಾತಿ ವ್ಯವಸ್ಥೆ ನಿರ್ಮೂಲನೆ ಮೂಲಕ ಸಮ ಸಮಾಜದ ಕನಸು ಕಂಡಿದ್ದರು. ಅವರು ಸಾಮಾಜದಲ್ಲಿನ ಮೌಢ್ಯ ಹೋಗಲಾಡಿಸಲು ಶ್ರಮಿಸಿದ್ದರು.

ಕೊಪ್ಪಳ:

ಕನ್ನಡ ಸಾಹಿತ್ಯದಲ್ಲಿ ವಚನ ಹಾಗೂ ದಾಸ ಸಾಹಿತ್ಯಕ್ಕೆ ಬಹಳ ವಿಶೇಷ ಸ್ಥಾನವಿದ್ದು, ಡಾ. ಫ.ಗು. ಹಳಕಟ್ಟಿ ಅವರು ವಚನಗಳ ರಕ್ಷಣೆಗೆ ಶ್ರಮಿಸಿದ್ದರು ಎಂದು ಜಿಲ್ಲಾಧಿಕಾರಿ ಸುರೇಶ ಬಿ. ಇಟ್ನಾಳ ಹೇಳಿದರು.

ನಗರದ ಸಾಹಿತ್ಯ ಭವನದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಆಶ್ರಯದಲ್ಲಿ ಬುಧವಾರ ಆಯೋಜಿಸಿದ್ದ ಡಾ. ಫ.ಗು. ಹಳಕಟ್ಟಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

12ನೇ ಶತಮಾನದಲ್ಲಿ ಬಸವಾದಿ ಶರಣರು ಬಹಳಷ್ಟು ಹೋರಾಟಗಳ ಮೂಲಕ ಅಂದಿನ ಕಾಲಕಟ್ಟದಲ್ಲಿದ್ದ ವರ್ಗ ಮತ್ತು ಜಾತಿ ವ್ಯವಸ್ಥೆ ನಿರ್ಮೂಲನೆ ಮೂಲಕ ಸಮ ಸಮಾಜದ ಕನಸು ಕಂಡಿದ್ದರು. ಅವರು ಸಾಮಾಜದಲ್ಲಿನ ಮೌಢ್ಯ ಹೋಗಲಾಡಿಸಲು ಶ್ರಮಿಸಿದ್ದರು. ಕರ್ನಾಟಕವಲ್ಲದೆ ದೇಶದ ವಿವಿಧ ಭಾಗಗಳಿಂದ ಬಂದ ಶರಣ, ಶರಣೆಯರು ಅನುಭವ ಮಂಟಪದಲ್ಲಿ ಸೇರಿ ವಿಶ್ವದ ಮೊದಲ ಸಂಸತ್ತು ನಿರ್ಮಿಸಿ ಚರ್ಚಿಸಿ ವಚನ ರಚಿಸಿದರು. ಆ ಎಲ್ಲ ವಚನಗಳು ಹಂಚಿಹೋಗಿದ್ದವು. ಅವುಗಳ ಸಂಗ್ರಹಣೆಗಾಗಿ ಡಾ. ಫ.ಗು. ಹಳಕಟ್ಟಿ ಊರುರು ಸುತ್ತಿ, ಪ್ರಕಟಣೆ ಹಾಗೂ ಸಂಶೋಧನೆಗೊಳಿಸುವ ಮೂಲಕ ನಮಗೆ ತಿಳಿಸಿಕೊಟ್ಟಿದ್ದಾರೆ ಎಂದರು.

ಡಾ. ಫ.ಗು. ಹಳಕಟ್ಟಿ ಅವರು ವಚನಗಳ ಸಂಗ್ರಹಿಸದೆ ಇದ್ದರೇ ನಮಗೆ ವಚನ ಸಾಹಿತ್ಯ ಸಿಗುತ್ತಿರಲಿಲ್ಲ ಎಂದ ಅವರು, ಸಂವಿಧಾನದಲ್ಲಿರುವ ಎಲ್ಲ ಆಶಯಗಳನ್ನು ಬಸವಾದಿ ಶರಣರು 12ನೇ ಶತಮಾನದಲ್ಲಿಯೇ ಹೇಳಿದ್ದರು. ಅವರ ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕಿದೆ ಎಂದು ಹೇಳಿದರು.

ಡಾ. ಫ.ಗು. ಹಳಕಟ್ಟಿ ಕುರಿತು ವಿಶೇಷ ಉಪನ್ಯಾಸ ನೀಡಿದ ನಿವೃತ್ತ ಕಾರ್ಯನಿರ್ವಾಹಕ ಎಂಜಿನಿಯರ್ ಅಶೋಕ ಬರಗುಂಡಿ, ಬಸವಾದಿ ಶರಣರ ಆಶಯ ಉಳಿಸಲು ಶ್ರಮಿಸಿದ ಹಳಕಟ್ಟಿ ಅವರನ್ನು ವಚನ ಸಾಹಿತ್ಯದ ಪಿತಾಮಹ ಎಂದು ಕರೆಯುತ್ತಾರೆ. ವಚನಗಳ ಮೂಲಕ ಸುಂದರ ಸಮಾಜ ನಿರ್ಮಾಣ ಸಾಧ್ಯವಾಗಿದ್ದು, ಇಂತಹ ವಚನಗಳ ರಕ್ಷಣೆಗೆ ಶ್ರಮಿಸಿದ ಹಳಕಟ್ಟಿ ಅವರು ನಮ್ಮ ಸಂಸ್ಕೃತಿಗೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ ಎಂದರು.

ಬಸವ ಸಮಿತಿ ಅಧ್ಯಕ್ಷ ಬಸವರಾಜ ಬಳ್ಳೊಳ್ಳಿ ಪ್ರಾಸ್ತಾವಿಕ ಮಾತನಾಡಿದರು. ನಗರಸಭೆ ಸದಸ್ಯ ಗುರುರಾಜ ಹಲಗೇರಿ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎ. ಬಸವರಾಜ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ್ ಮರಬನಳ್ಳಿ, ಬಿ.ಎನ್. ಹೊರಪೇಟಿ ಇದ್ದರು.ಧ್ವಜಾರೋಹಣ:

ಕೊಪ್ಪಳದ ಕುಷ್ಟಗಿ ರಸ್ತೆಯಲ್ಲಿರುವ ಫ.ಗು. ಹಳಕಟ್ಟಿ ವೃತ್ತದಲ್ಲಿ ನಡೆದ ಧ್ವಜಾರೋಹಣ ಹಾಗೂ ಪುಷ್ಪಾರ್ಚನೆ ಕಾರ್ಯಕ್ರಮದಲ್ಲಿ ಸಂಸದ ರಾಜಶೇಖರ ಹಿಟ್ನಾಳ, ಜಿಲ್ಲಾಧಿಕಾರಿ ಸುರೇಶ ಬಿ. ಇಟ್ನಾಳ, ಮಾಜಿ ಶಾಸಕ ಕೆ. ಶರಣಪ್ಪ, ನಗರಸಭೆ ಸದಸ್ಯರಾದ ರಾಜಶೇಖರ ಆಡೂರ, ಗುರುರಾಜ ಹಲಿಗೇರಿ, ಬಸವ ಸಮಿತಿ ಅಧ್ಯಕ್ಷ ಬಸವರಾಜ ಬಳ್ಳೊಳ್ಳಿ, ವಿಶ್ವಗುರು ಬಸವೇಶ್ವರ ಟ್ರಸ್ಟ್‌ ಮತ್ತು ಬಸವ ಸಮಿತಿಯ ರಾಜೇಶ ಸಸಿಮಠ, ಬಸವರಾಜ, ವೀರಣ್ಣ ಸಂಕ್ಲಾಪುರ, ವೀರಣ್ಣ ಕೊರ್ಲಳ್ಳಿ, ಗವಿಸಿದ್ದಪ್ಪ ಕೊಪ್ಪಳ, ಪ್ರಕಾಶ ಚಿನಿವಾಲರ, ವೀರೇಶ ಕೊತಬಾಳ, ಡಾ. ಬಸವರಾಜ ಕ್ಯಾವಟರ್, ಶರಣಪ್ಪ ಹ್ಯಾಟಿ, ಸುಧಾ ಶೆಟ್ಟರ್, ಗಿರಿಜಾ ಮೆಳ್ಳಿಕೇರಿ, ಸವಿತಾ ಬೋರಟ್ಟಿ, ಅರ್ಚನಾ ಸಸಿಮಠ, ಸೌಮ್ಯ ನಾಲ್ವಾಡ, ಎಬಿ ಕಣಿವೆ ವಕೀಲರು ಸೇರಿದಂತೆ ಮತ್ತಿತರರಿದ್ದರು.

PREV