- ಸಿದ್ದೇಶ್ವರ ಕುಟುಂಬಕ್ಕಷ್ಟೇ ಸೋಲು, ಬಿಜೆಪಿ ಸೋತಿಲ್ಲ: ಮಟ್ಟಿಕಲ್ಲು ವೀರಭದ್ರಸ್ವಾಮಿ
ಲೋಕಸಭೆ ಚುನಾವಣೆಯಲ್ಲಿ 25 ವರ್ಷದ ನಂತರ ಕಾಂಗ್ರೆಸ್ ಪಕ್ಷ ಜಯ ಸಾಧಿಸಿದೆ. ಕ್ಷೇತ್ರದ ಪ್ರಥಮ ಮಹಿಳಾ ಸಂಸದೆಯಾಗಿ ಡಾ.ಪ್ರಭಾ ಮಲ್ಲಿಕಾರ್ಜುನ ಆಯ್ಕೆಯಾಗಿದ್ದಾರೆ. ಈ ಹಿನ್ನೆಲೆ ಪಕ್ಷದ ಹಿರಿಯ ಮುಖಂಡರಾದ ಮಟ್ಟಿಕಲ್ಲು ವೀರಭದ್ರಸ್ವಾಮಿ, ಕಕ್ಕರಗೊಳ್ಳ ಕೆ.ಪಿ.ಕಲ್ಲಿಂಗಪ್ಪ, ಆರೈಕೆ ಆಸ್ಪತ್ರೆ ಮುಖ್ಯಸ್ಥ ಡಾ.ಟಿ.ಜಿ.ರವಿಕುಮಾರ ನೇತೃತ್ವದಲ್ಲಿ ನಗರದ ಹಳೇ ಪೇಟೆ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ 108 ಈಡುಗಾಯಿ ಒಡೆಯುವ ಮೂಲಕ ಹರಕೆ ತೀರಿಸಲಾಯಿತು.
ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಸಮಾಳದ ಸದ್ದು, ಪುರವಂತರ ವಡಪಿನ ಸಮೇತ ದೇವಸ್ಥಾನ ಅಂಗಳದಲ್ಲಿ ಪ್ರಾರ್ಥಿಸಿ, ತೆಂಗಿನ ಕಾಯಿಗಳ ಒಡೆದು ಭಕ್ತಿ ಸಮರ್ಪಿಸಿದ್ದು ವಿಶೇಷ.ಇದೇ ವೇಳೆ ಮಾತನಾಡಿದ ಮಟ್ಟಿಕಲ್ಲು ವೀರಭದ್ರಸ್ವಾಮಿ ಅವರು, ಬಿಜೆಪಿ ಸಂಸದರಾಗಿದ್ದವರ ಅಹಂಕಾರ, ಮಾತುಗಳು, ಸರ್ವಾಧಿಕಾರಿ ಧೋರಣೆಯಿಂದಾಗಿ ಪಕ್ಷದ ಮುಖಂಡರು, ಕಾರ್ಯಕರ್ತರು ರೋಸಿ ಹೋಗಿದ್ದರು. ತಾವು ಸೇರಿದಂತೆ ಅನೇಕರು ಇಂತಹ ವರ್ತನೆಯಿಂದ ಮಾತೃಪಕ್ಷ ಬಿಜೆಪಿ ತೊರೆದು, ಕಾಂಗ್ರೆಸ್ಸಿಗೆ ಸೇರಿದ್ದೇ ಸಾಕ್ಷಿ. ಈ ಚುನಾವಣೆಯಲ್ಲಿ ವಿದ್ಯಾವಂತೆ ಡಾ.ಪ್ರಭಾ ಕಾಂಗ್ರೆಸ್ಸಿನಿಂದ ಸ್ಪರ್ಧಿಸಿದ್ದರು. ನಾವು ಅವರ ಗೆಲುವಿಗೆ ಪಣತೊಟ್ಟಿದ್ದು, ಅದರಂತೆ ಕಾಂಗ್ರೆಸ್ ಗೆದ್ದ ಹಿನ್ನೆಲೆ ಹರಕೆ ತೀರಿಸುತ್ತಿದ್ದೇನೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಹಿಂದುತ್ವದ ಪರವಾಗಿ ಹಲವಾರು ಹೋರಾಟಗಳನ್ನು ಮಾಡಿ ಜೈಲಿಗೆ ಹೋಗಿ ಬಂದಿದ್ದೇನೆ. ನನ್ನಂತೆಯೇ ಸಾವಿರಾರು ಜನರು ಹಿಂದುತ್ವಕ್ಕಾಗಿ, ಬಿಜೆಪಿಗಾಗಿ ಹಗಲಿರುಳು ದುಡಿದಿದ್ದರು. ಅಂತಹ ಎಲ್ಲರನ್ನೂ ತಿರಸ್ಕಾರ ಮನೋಭಾವದಿಂದ ನೋಡಿದ ಕಾರಣ, ಸಿದ್ದೇಶ್ವರರ ಪತ್ನಿ ಗಾಯತ್ರಿ ಸಿದ್ದೇಶ್ವರ ಸೋಲು ಕಾಣಬೇಕಾಯಿತು. ಇದು ಸಿದ್ದೇಶ್ವರರ ಕುಟುಂಬದ ಸೋಲಷ್ಟೇ. ಬಿಜೆಪಿಯ ಸೋಲಲ್ಲ ಎಂದು ಅವರು ತಿಳಿಸಿದರು.
- - - -11ಕೆಡಿವಿಜಿ9: