₹75 ಕೋಟಿಯ 12 ಬಿಡಿಎ ಸೈಟ್‌ ಕಬಳಿಕೆ: ಪಾಲಿಕೆ ಮಾಜಿ ಸದಸ್ಯರ ವಿರುದ್ಧ ದೂರು

KannadaprabhaNewsNetwork |  
Published : Jun 26, 2026, 03:45 AM IST
Somashekar

ಸಾರಾಂಶ

ಜಯನಗರ ವಿಧಾನಸಭಾ ಕ್ಷೇತ್ರದ ಶಾಕಾಂಬರಿ ನಗರ ವಾರ್ಡ್‌ನ ಪಾಲಿಕೆ ಮಾಜಿ ಸದಸ್ಯ ಬಿ.ಸೋಮಶೇಖರ್‌ ಅವರು ಬಿಡಿಎ ಅಧಿಕಾರಿಗಳೊಂದಿಗೆ ಶಾಮೀಲಾಗಿ ನಕಲಿ ದಾಖಲೆ ಸೃಷ್ಟಿಸಿ ಸುಮಾರು 75 ಕೋಟಿ ರು. ಮೌಲ್ಯದ ಬಿಡಿಎ ಸ್ವತ್ತು ಕಬಳಿಸಿರುವ ಗಂಭೀರ ಆರೋಪ ಕೇಳಿ ಬಂದಿದೆ.

 ಬೆಂಗಳೂರು :  ಜಯನಗರ ವಿಧಾನಸಭಾ ಕ್ಷೇತ್ರದ ಶಾಕಾಂಬರಿ ನಗರ ವಾರ್ಡ್‌ನ ಪಾಲಿಕೆ ಮಾಜಿ ಸದಸ್ಯ ಬಿ.ಸೋಮಶೇಖರ್‌ ಅವರು ಬಿಡಿಎ ಅಧಿಕಾರಿಗಳೊಂದಿಗೆ ಶಾಮೀಲಾಗಿ ನಕಲಿ ದಾಖಲೆ ಸೃಷ್ಟಿಸಿ ಸುಮಾರು 75 ಕೋಟಿ ರು. ಮೌಲ್ಯದ ಬಿಡಿಎ ಸ್ವತ್ತು ಕಬಳಿಸಿರುವ ಗಂಭೀರ ಆರೋಪ ಕೇಳಿ ಬಂದಿದೆ.

ಬಿಎಂಟಿಎಫ್‌ ಮತ್ತು ಲೋಕಾಯುಕ್ತಕ್ಕೆ ದೂರು

ಈ ಸಂಬಂಧ ಜಾಗೃತ ಮತದಾರರ ವೇದಿಕೆ ಕಾರ್ಯದರ್ಶಿ ಬಿ.ಗಣೇಶ್‌ ಸಿಂಗ್‌ ಅವರು, ಬಿಬಿಎಂಪಿ ಮಾಜಿ ಸದಸ್ಯ ಬಿ.ಸೋಮಶೇಖರ್‌, ಬಿಡಿಎ ಕಾರ್ಯಪಾಲಕ ಅಭಿಯಂತರ ಕೃಷ್ಣ, ಸಹಾಯಕ ಕಾರ್ಯಪಾಲಕ ಅಭಿಯಂತರ ಮಹೇಶ್‌ ಸೇರಿದಂತೆ ಇತರೆ ಅಧಿಕಾರಿಗಳ ವಿರುದ್ಧ ಬಿಎಂಟಿಎಫ್‌ ಮತ್ತು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.

ಬೆಂಗಳೂರು ದಕ್ಷಿಣ ತಾಲೂಕು, ಉತ್ತರಹಳ್ಳಿ ಹೋಬಳಿ, ಮಾರೇನಹಳ್ಳಿ ಗ್ರಾಮದ ಸರ್ವೆ ನಂಬರ್‌ 35 ಅಥವಾ ಈಗಿನ ಜೆ.ಪಿ.ನಗರ 1ನೇ ಹಂತದ ಎಲ್‌ಐಸಿ ಕಾಲೋನಿ ಮತ್ತು ಐಟಿಐ ಬಡಾವಣೆಯ 26ನೇ ಮುಖ್ಯರಸ್ತೆಗೆ ಹೊಂದಿಕೊಂಡಂತಿರುವ 40 X 60 ಅಳತೆಯ 12 ನಿವೇಶನಗಳನ್ನು ಬಿಡಿಎ ಹತ್ತಾರು ವರ್ಷಗಳ ಹಿಂದೆಯೇ ಭೂಸ್ವಾಧೀನಪಡಿಸಿಕೊಂಡಿದೆ. ಸುಮಾರು 28 ಸಾವಿರ ಚದರ ಅಡಿಗಳಿಗೂ ಹೆಚ್ಚು ವಿಸ್ತೀರ್ಣವಿರುವ ಈ ಬಿಡಿಎ ಸ್ವತ್ತಿನ ಬೆಲೆ ಸುಮಾರು 75 ಕೋಟಿ ರು.ಗೂ ಹೆಚ್ಚಿದೆ. ಈ 12 ನಿವೇಶನಗಳ ಸುತ್ತಮುತ್ತಲ ಬಹುತೇಕ ನಿವೇಶನಗಳಲ್ಲಿ ಈಗಾಗಲೇ ನೈಜ ಮಾಲೀಕರು ನಿಯಮಾನುಸಾರ ಕಟ್ಟಡಗಳನ್ನು ನಿರ್ಮಿಸಿದ್ದಾರೆ ಎಂದು ತಿಳಿಸಿದ್ದಾರೆ.

ನಕಲಿ ದಾಖಲೆ ಸೃಷ್ಟಿಸಿ 12 ಬಿಡಿಎ ನಿವೇಶನ ಕಬಳಿಕೆ:

ಬಿಡಿಎಯಿಂದ ಹಂಚಿಕೆಯಾಗಿ ಖಾಲಿ ಇದ್ದ ಈ 12 ನಿವೇಶನಗಳನ್ನು ಕಬಳಿಸುವ ಉದ್ದೇಶದಿಂದ ನಕಲಿ ದಾಖಲೆ ಸೃಷ್ಟಿಸಿರುವ ಶಾಂಕಾಂಬರಿ ನಗರ ವಾರ್ಡ್‌ನ ಮಾಜಿ ಪಾಲಿಕೆ ಸದಸ್ಯ ಬಿ.ಸೋಮಶೇಖರ್‌, ಈ ಖಾಲಿ ನಿವೇಶನಗಳಲ್ಲಿ ಅನಧಿಕೃತವಾಗಿ ಶೆಡ್‌ಗಳನ್ನು ನಿರ್ಮಿಸಿದ್ದಾರೆ. ಸರ್ಕಾರಿ ನೆಲಗಳ್ಳರು ರಾಜಾರೋಷವಾಗಿ ಬಿಡಿಎ ಸ್ವತ್ತಿನಲ್ಲಿ ಅನಧಿಕೃತ ಶೆಡ್‌ ನಿರ್ಮಿಸುತ್ತಿದ್ದರೂ ಬಿಡಿಎ ಅಧಿಕಾರಿಗಳು ಯಾವುದೇ ಕೈಗೊಂಡಿಲ್ಲ. ಬದಲಾಗಿ ಬಿ.ಸೋಮಶೇಖರ್‌ ಅವರಿಂದ ಲಕ್ಷಾಂತರ ರು. ಲಂಚ ಪಡೆದು ಕೋಟ್ಯಂತರ ರು. ಮೌಲ್ಯದ ಬಿಡಿಎ ಸ್ವತ್ತು ನೆಲಗಳ್ಳರ ಪಾಲಾಗಲು ಸಹಕರಿಸಿದ್ದಾರೆ. ಈ ಮೂಲಕ ಬಿಡಿಎಗೆ ನಷ್ಟ ಉಂಟು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಹೀಗಾಗಿ ಸರ್ಕಾರಿ ಸ್ವತ್ತು ಕಬಳಿಸಿರುವ ಬಿ.ಸೋಮಶೇಖರ್‌ ಹಾಗೂ ಬಿಡಿಎ ಈ ಭ್ರಷ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಕಬಳಿಕೆಯಾಗಿರುವ ಸರ್ಕಾರಿ ಸ್ವತ್ತನ್ನು ವಶಕ್ಕೆ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ. 

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಕ್ರಿಪ್ಟೋ ಕರೆನ್ಸಿ ಬದಲಾವಣೆ ನೆಪದಲ್ಲಿ ಟೆಕ್ಕಿ ಬಳಿ ದರೋಡೆ ಮಾಡಿದ್ದ 12 ಮಂದಿ ಬಂಧನ
ನಟಿ ಕೃಷಿ ತಾಪಂಡ ಮನೆಯಲ್ಲಿ ಸ್ನೇಹಿತ ಆತ್ಮ*ತ್ಯೆ