ಸಿಡಿಲು ಬಡಿದು 12 ಕುರಿಗಳ ಸಾವು, ಗುಡಿಸಲಿಗೆ ಬೆಂಕಿ

KannadaprabhaNewsNetwork | Published : May 16, 2025 2:24 AM
Follow Us

ಸಾರಾಂಶ

ರಟ್ಟೀಹಳ್ಳಿ ತಾಲೂಕಿನ ಕಮಲಾಪುರದಲ್ಲಿ ಸಿಡಿಲು ಬಡಿದು 12 ಕುರಿಗಳು ಸಾವಿಗೀಡಾಗಿವೆ.

ಹಾವೇರಿ: ಜಿಲ್ಲೆಯಲ್ಲಿ ಮಳೆಗಿಂತ ಗುಡುಗು ಸಿಡಿಲಿನ ಆರ್ಭಟ ಜೋರಾಗಿದ್ದು, ಬುಧವಾರ ರಾತ್ರಿ ಸಿಡಲು ಬಡಿದು 12 ಕುರಿಗಳು ಮೃತಪಟ್ಟಿದ್ದರೆ, ಮತ್ತೊದು ಘಟನೆಯಲ್ಲಿ ಗುಡಿಸಲಿಗೆ ಸಿಡಿಲು ಬಡಿದು ಸಿಲಿಂಟರ್ ಸ್ಫೋಟಗೊಂಡು ಹೊತ್ತಿ ಉರಿದ ಘಟನೆ ನಡೆದಿದೆ. ರಟ್ಟೀಹಳ್ಳಿ ತಾಲೂಕಿನ ಕಮಲಾಪುರದಲ್ಲಿ ಸಿಡಿಲು ಬಡಿದು 12 ಕುರಿಗಳು ಸಾವಿಗೀಡಾಗಿವೆ. ಹಾವೇರಿ ತಾಲೂಕಿನ ಕರ್ಜಗಿಯಲ್ಲಿ ಬುಧವಾರ ರಾತ್ರಿ ವೃದ್ಧೆ ಚಿನ್ನವ್ವ ಅಣ್ಣಿ ಎಂಬವರ ಗುಡಿಸಲಿಗೆ ಸಿಡಿಲು ಬಡಿದು ಮನೆಯಲ್ಲಿದ್ದ ಸಿಲಿಂಡರ್ ಸ್ಫೋಟಗೊಂಡಿದೆ. ಪರಿಣಾಮ ಅಕ್ಕಪಕ್ಕದಲ್ಲಿದ್ದ ಎರಡು ಗುಡಿಸಲುಗಳಿಗೂ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ಕೆನ್ನಾಲಿಗೆ ಮೂರು ಗುಡಿಸಲುಗಳು ಸುಟ್ಟು ಭಸ್ಮವಾಗಿದೆ. ಅದೃಷವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ವಿವಿಧೆಡೆ ಮಳೆ: ಜಿಲ್ಲೆಯ ವಿವಿಧೆಡೆ ಗುರುವಾರ ಗುಡುಗು ಸಹಿತವಾಗಿ ಮಳೆ ಸುರಿದಿದೆ.

ಹಾವೇರಿ, ರಾಣಿಬೆನ್ನೂರು ನಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಧ್ಯಾಹ್ನ 3 ಗಂಟೆಯಿಂದ ಭರ್ಜರಿ ಮಳೆ ಸುರಿದಿದೆ. ಬಳಿಕ ಸಂಜೆಯವರೆಗೂ ತುಂತುರು ಹನಿ ಬೀಳುತ್ತಿದ್ದು, ವಾತಾವರಣ ತಂಪಾಗಿದೆ. ರಾಣಿಬೆನ್ನೂರಿನಲ್ಲಿ ಗಂಟೆಗೂ ಅಧಿಕ ಕಾಲ ಮಳೆ ಸುರಿದಿದ್ದು, ರಸ್ತೆ ಮೇಲೆ ನೀರು ಹರಿದಿದೆ. ಶಿಗ್ಗಾಂವಿ, ಬ್ಯಾಡಗಿ, ಹಿರೇಕೆರೂರು ಸೇರಿದಂತೆ ವಿವಿಧೆಡೆ ಅಲ್ಪ ಮಳೆಯಾಗಿದೆ.ವಿದ್ಯುತ್‌ ಕಂಬದಿಂದ ಬಿದ್ದು ಕಾರ್ಮಿಕ ಸಾವು

ಹಾನಗಲ್ಲ: ವಿದ್ಯುತ್‌ ಕಂಬ ಏರಿ ದುರಸ್ತಿ ನಡೆಸುತ್ತಿದ್ದ ವೇಳೆ ಶಾಕ್‌ ಹೊಡೆದು, ಮೇಲಿನಿಂದ ಬಿದ್ದು ಕಾರ್ಮಿಕನೊಬ್ಬ ಮೃತಪಟ್ಟಿರುವ ಘಟನೆ ತಾಲೂಕಿನ ಗುರುವಾರ ತಾಲೂಕಿನ ಕಾಡಶೆಟ್ಟಿಹಳ್ಳಿಯಲ್ಲಿ ನಡೆದಿದೆ.ತಾಲೂಕಿನ ರಾಮತೀರ್ಥ ಹೊಸಕೊಪ್ಪ ಗ್ರಾಮದ ಸಹದೇವ ಹುಡೇದ (32) ಮೃತಪಟ್ಟ ಕಾರ್ಮಿಕ.

ತಾಲೂಕಿನ ಕಾಡಶೆಟ್ಟಿಹಳ್ಳಿಯಲ್ಲಿ ವಿದ್ಯುತ್ ಕೆಲಸಕ್ಕೆಂದು ಹೋಗಿದ್ದರು. ಈ ವೇಳೆ ಕರೆಂಟ್ ಶಾಕ್ ಹೊಡೆದು ವಿದ್ಯುತ್ ಕಂಬದಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ. ಘಟನೆ ಮಾಹಿತಿ ತಿಳಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.ಹಾನಗಲ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.