ಗದಗ-ಬೆಟಗೇರಿ ನಗರಸಭೆಯಲ್ಲಿ 138 ಪೌರ ಕಾರ್ಮಿಕ ಹುದ್ದೆ ಖಾಲಿ!

KannadaprabhaNewsNetwork |  
Published : Jun 21, 2025, 12:49 AM ISTUpdated : Jun 21, 2025, 01:26 PM IST
ಗದಗ ಬೆಟಗೇರಿ ನಗರಸಭೆ.  | Kannada Prabha

ಸಾರಾಂಶ

ಗದಗ-ಬೆಟಗೇರಿ ನಗರಸಭೆಯು ತೀವ್ರ ಸಿಬ್ಬಂದಿ ಕೊರತೆಯಿಂದ ಬಳಲುತ್ತಿದೆ. ಪ್ರಮುಖ ಹುದ್ದೆಗಳು ಖಾಲಿ ಇರುವುದರಿಂದ ಸ್ವಚ್ಛತೆ, ನೀರು ಸರಬರಾಜು ಮತ್ತು ಇತರೆ ಸಾರ್ವಜನಿಕ ಸೇವೆಗಳ ನಿರ್ವಹಣೆ ವ್ಯವಸ್ಥೆ ಹದಗೆಟ್ಟಿದೆ. ಇದು ಅವಳಿ ನಗರದ ನಿವಾಸಿಗಳ ಆರೋಗ್ಯ ಮತ್ತು ದೈನಂದಿನ ಜೀವನದ ಮೇಲೆ ನೇರ ಪರಿಣಾಮ ಬೀರುತ್ತಿದೆ.

ಶಿವಕುಮಾರ ಕುಷ್ಟಗಿ 

ಗದಗ: ಗದಗ-ಬೆಟಗೇರಿ ನಗರಸಭೆಯು ತೀವ್ರ ಸಿಬ್ಬಂದಿ ಕೊರತೆಯಿಂದ ಬಳಲುತ್ತಿದೆ. ಪ್ರಮುಖ ಹುದ್ದೆಗಳು ಖಾಲಿ ಇರುವುದರಿಂದ ಸ್ವಚ್ಛತೆ, ನೀರು ಸರಬರಾಜು ಮತ್ತು ಇತರೆ ಸಾರ್ವಜನಿಕ ಸೇವೆಗಳ ನಿರ್ವಹಣೆ ವ್ಯವಸ್ಥೆ ಹದಗೆಟ್ಟಿದೆ. 

ಇದು ಅವಳಿ ನಗರದ ನಿವಾಸಿಗಳ ಆರೋಗ್ಯ ಮತ್ತು ದೈನಂದಿನ ಜೀವನದ ಮೇಲೆ ನೇರ ಪರಿಣಾಮ ಬೀರುತ್ತಿದೆ. ನಗರ‌ಸಭೆಯ ವ್ಯಾಪ್ತಿಯಲ್ಲಿನ ಜನಸಂಖ್ಯೆ ಆಧಾರದಲ್ಲಿ 264 ಪೌರ ಕಾರ್ಮಿಕ ಹುದ್ದೆಗಳನ್ನು ಸರ್ಕಾರವೇ ಮಂಜೂರು ಮಾಡಿದೆ. ಆದರೆ ಸದ್ಯ ಕಾಯಂ ನೌಕರರು 126 ಜನ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು, ಇನ್ನುಳಿದ 138 ಹುದ್ದೆಗಳು ಖಾಲಿ ಇವೆ. ಇದರೊಟ್ಟಿಗೆ 92 ಜನ ಪೌರ ಕಾರ್ಮಿಕರು ಹೊರಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. 

ಕಚೇರಿ ಹುದ್ದೆಗಳು ಖಾಲಿ: ಹಿರಿಯ ಆರೋಗ್ಯ ನಿರೀಕ್ಷರ 3 ಹುದ್ದೆಗಳು ಮಂಜೂರಿದ್ದು, ಕೇವಲ ಒಬ್ಬರು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು ಇನ್ನುಳಿದ ಎರಡು ಹುದ್ದೆಗಳು ಖಾಲಿ ಇವೆ. ಪ್ರಥಮ ದರ್ಜೆ ಸಹಾಯಕರ 4 ಮಂಜೂರು ಹುದ್ದೆಗಳಿದ್ದರೂ ಒಬ್ಬರು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು 3 ಹುದ್ದೆಗಳು ಖಾಲಿ ಇವೆ. ನೀರು ಸರಬರಾಜು ಸಹಾಯಕರ 8 ಹುದ್ದೆಗಳೂ ಖಾಲಿ ಇವೆ. ಕಂಪ್ಯೂಟರ್ ಆಪರೇಟರ್ ನಾಲ್ಕೂ ಹುದ್ದೆಗಳು ಖಾಲಿ ಇವೆ. ಕಿರಿಯ ಆರೋಗ್ಯ ನಿರೀಕ್ಷಕರ 3 ಹುದ್ದೆಗಳು ಖಾಲಿ ಇವೆ. ಸಮುದಾಯ ಸಂಘಟಕರ ಮೂರು ಹುದ್ದೆಗಳು ಖಾಲಿ ಇವೆ.

ವಾಹನ ಚಾಲಕರ 10 ಹುದ್ದೆಗಳಲ್ಲಿ 9 ಖಾಲಿ ಇವೆ. ಸಹಾಯಕ ನೀರು ಸರಬರಾಜು ಸಹಾಯಕರ ಎಂಟೂ ಹುದ್ದೆಗಳು ಖಾಲಿ ಇವೆ. ಅಟೆಂಡರ್ 3 ಹುದ್ದೆಗಳು ಖಾಲಿ ಇವೆ, ಕ್ಲೀನರ್ 5 ಹುದ್ದೆ, ಹೆಲ್ಪರ್, ವಾಟರ್ ಸಪ್ಲೈ ವಾಲ್ ಮನ್ ಸೇರಿದಂತೆ ಒಟ್ಟು 50 ಹುದ್ದೆಗಳು ಮಂಜೂರಾಗಿದ್ದು, ಅದರಲ್ಲಿ 12 ಜನರು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು, 38 ಹುದ್ದೆಗಳು ಖಾಲಿ ಇವೆ.

ಶೇ.50ಕ್ಕೂ ಹೆಚ್ಚು ಹುದ್ದೆಗಳು ಖಾಲಿ:

ನಗರಸಭೆಯ 43 ವಿವಿಧ ವಿಭಾಗಗಳಲ್ಲಿ ಒಟ್ಟು 457 ಹುದ್ದೆಗಳು ಮಂಜೂರಾಗಿದ್ದು, ಅವುಗಳಲ್ಲಿ ಕೇವಲ 206 ಜನರು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. 251 ಪ್ರಮುಖ ಹುದ್ದೆಗಳು ಖಾಲಿ ಇವೆ. ಇದು ಒಟ್ಟು ಮಂಜೂರಾದ ಹುದ್ದೆಗಳಲ್ಲಿ ಶೇಕಡಾ 50ಕ್ಕಿಂತಲೂ ಹೆಚ್ಚು ಸಿಬ್ಬಂದಿ ಕೊರತೆ ಇದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಈ ಬೃಹತ್ ಪ್ರಮಾಣದ ಸಿಬ್ಬಂದಿ ಕೊರತೆಯು ಗದಗ-ಬೆಟಗೇರಿ ನಗರಸಭೆಯ ಕಾರ್ಯನಿರ್ವಹಣೆಯನ್ನು ಬಹುತೇಕ ಸ್ತಬ್ಧಗೊಳಿಸಿದೆ.

ಹೊರಗುತ್ತಿಗೆ ನೆರವು: ಕಾಯಂ ಹುದ್ದೆಗಳ ಕೊರತೆಯ ನಡುವೆಯೂ, 60 ಹೊರಗುತ್ತಿಗೆ ವಾಹನ ಚಾಲಕರು ಮತ್ತು 59 ಹೊರಗುತ್ತಿಗೆ ಹೆಲ್ಪರ್, ವಾಟರ್ ಸಪ್ಲೈ ವಾಲ್ ಮನ್‌ಗಳು ಕಾರ್ಯ ನಿರ್ವಹಿಸುತ್ತಿರುವುದು ಸಮಾಧಾನಕರ ಸಂಗತಿ. ಇದು ತುರ್ತು ಸೇವೆಗಳನ್ನು ನಿರ್ವಹಿಸಲು ಸಹಾಯ ಮಾಡುತ್ತಿದ್ದರೂ, ಹೊರಗುತ್ತಿಗೆ ನೌಕರರ ಮೇಲಿನ ಅವಲಂಬನೆಯು ದೀರ್ಘಕಾಲೀನ ಪರಿಹಾರವಲ್ಲ. 

ಕಾಯಂ ನೇಮಕಾತಿಗಳು ಸಿಬ್ಬಂದಿಯ ಸ್ಥಿರತೆ, ಬದ್ಧತೆ ಮತ್ತು ಸೇವಾ ಗುಣಮಟ್ಟಕ್ಕೆ ಅವಶ್ಯಕವಾಗಿವೆ.ಗದಗ-ಬೆಟಗೇರಿ ಅವಳಿ ನಗರದ ಸ್ವಚ್ಛತೆ ಮತ್ತು ಸಾರ್ವಜನಿಕ ಸೇವೆಗಳ ಸುಧಾರಣೆಗೆ ಈ ಖಾಲಿ ಹುದ್ದೆಗಳ ಭರ್ತಿ ಅನಿವಾರ್ಯವಾಗಿದೆ. ಸರ್ಕಾರ ಮತ್ತು ಸ್ಥಳೀಯ ಆಡಳಿತವು ಈ ಸಮಸ್ಯೆಯ ಗಂಭೀರತೆಯನ್ನು ಅರಿತುಕೊಂಡು, ಆದ್ಯತೆಯ ಮೇರೆಗೆ ನೇಮಕಾತಿ ಪ್ರಕ್ರಿಯೆಗಳನ್ನು ಕೈಗೊಳ್ಳಬೇಕಿದೆ ಎಂದು ನಗರಸಭೆ ಸದಸ್ಯ ರಾಘವೇಂದ್ರ ಯಳವತ್ತಿ ಹೇಳಿದರು.

PREV
Read more Articles on

Recommended Stories

ರಾಜ್ಯದಲ್ಲಿ ದ್ವಿಭಾಷಾ ನೀತಿಗೆ ಶಿಕ್ಷಣ ಆಯೋಗ ಶಿಫಾರಸು
ರೈತರಿಗೆ ಸರ್ಕಾರದ ಗುಡ್ ನ್ಯೂಸ್